ಮೆಜೆಸ್ಟಿಕ್‌ ಸುತ್ತ ಮಧ್ಯರಾತ್ರಿ ದರೋಡೆಕೋರರ ಅಟ್ಟಹಾಸ!

ಮೊಬೈಲ್, ಪರ್ಸ್ ಕಿತ್ತುಕೊಂಡು ಬ್ಯಾಂಕ್ ಖಾತೆಗಳಿಗೆ ಕನ್ನ, ನಂಬರ್ ಪ್ಲೇಟ್ ಇಲ್ಲದ ಬೈಕ್‌ನಲ್ಲಿ ಬಂದು ಕಳ್ಳತನ, ಪೊಲೀಸರ ಶಾಮೀಲಾತಿ ಬಗ್ಗೆಯೂ ಅನುಮಾನ,
AI photo
AI photo
Published on: 

ರವಿ ನಾಯಕ್​

ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕ್ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ ರಾತ್ರಿ ಸಂಚರಿಸುವ ಪ್ರಯಾಣಿಕರು, ಉದ್ಯೋಗ ಅರಸಿ ಬರುವ ಯುವಕರು ಮತ್ತು ಕೂಲಿ ಕಾರ್ಮಿಕರಿಗೆ ದರೋಡೆಕೋರರ ಕಾಟ ಹೆಚ್ಚಾಗಿದೆ.

ಬೇರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ನಗರಕ್ಕೆ ಆಗಮಿಸುವವರನ್ನೇ ಗುರಿಯಾಗಿಸಿಕೊಳ್ಳುವ ದುಷ್ಕರ್ಮಿಗಳು ಮೊಬೈಲ್ ಫೋನ್, ಪರ್ಸ್ ಸೇರಿ ಇತರೆ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಳ್ಳುವುದಷ್ಟೇ ಅಲ್ಲದೆ, ಮೊಬೈಲ್ ಮೂಲಕ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾಯಿಸಿಕೊಂಡು ಪರಾರಿಯಾಗುತ್ತಿದ್ದಾರೆ.

ನಗರದ ಪ್ರಮುಖ ಸಾರಿಗೆ ಕೇಂದ್ರವಾಗಿರುವ ಮೆಜೆಸ್ಟಿಕ್ ಪ್ರದೇಶದಲ್ಲಿ ತಡರಾತ್ರಿ ಒಂಟಿಯಾಗಿ ಸಂಚರಿಸುವವರು ದುಷ್ಕರ್ಮಿಗಳ ಸುಲಭ ಗುರಿಯಾಗುತ್ತಿದ್ದಾರೆ. ಉದ್ಯೋಗ, ಕೆಲಸ ಹಾಗೂ ವಾಸ್ತವ್ಯದ ಹುಡುಕಾಟದಲ್ಲಿ ನಗರಕ್ಕೆ ಬರುವ ಅಪರಿಚಿತರಿಗೆ ಈ ಪ್ರದೇಶದಲ್ಲಿ ರಾತ್ರಿ ಸಂಚಾರವೇ ಸವಾಲಾಗಿ ಪರಿಣಮಿಸುತ್ತಿದೆ.

ಮಧ್ಯರಾತ್ರಿ 2ರಿಂದ ಬೆಳಗಿನ ಜಾವ 5ರವರೆಗೆ ಅಟ್ಟಹಾಸ?

ದರೋಡೆಕೋರರ ಗುಂಪು ಮಧ್ಯರಾತ್ರಿ 2 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಅಕ್ರಮ ಚಟುವಟಿಕೆ ಹೆಚ್ಚಾಗುತ್ತಿದೆ. ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳಲ್ಲಿ ಬರುವ ಕೆಲವರು ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಗುರುತು ಸಿಗದಂತೆ ಸಂಚರಿಸುತ್ತಾರೆ.

ಮೆಜೆಸ್ಟಿಕ್, ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಎಸ್ ರೈಲ್ವೆ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಜನರ ಚಲನವಲನ ಗಮನಿಸುವ ಆರೋಪಿಗಳು, ಒಂಟಿಯಾಗಿ ನಡೆದುಕೊಂಡು ಹೋಗುವವರನ್ನು ಅಡ್ಡಗಟ್ಟುತ್ತಾರೆ. ಬಳಿಕ ಜೇಬು, ಬ್ಯಾಗ್‌ಗಳಲ್ಲಿರುವ ಮೊಬೈಲ್, ಹಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಕಿತ್ತುಕೊಂಡು ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗುತ್ತಾರೆ.

ಚೈನ್‌ಲಿಂಕ್ ಮಾದರಿಯಲ್ಲಿ ವಂಚನೆ:

ಈ ದಂಧೆಯ ಮತ್ತೊಂದು ಆತಂಕಕಾರಿ ಮುಖವೆಂದರೆ, ಮೊಬೈಲ್ ಕಳವು ಅಥವಾ ದರೋಡೆಯ ಬಳಿಕ ನಡೆಯುವ ಹಣಕಾಸಿನ ವಂಚನೆ. ಆರೋಪಿಗಳು ಒಬ್ಬರೇ ಕೃತ್ಯ ಎಸಗದೆ, ಪ್ರತ್ಯೇಕ ಗುಂಪುಗಳಾಗಿ ನಿರ್ವಹಿಸುವ ಸರಣಿ ದರೋಡೆ ಕೃತ್ಯದಲ್ಲಿ ತೋಡಗುತ್ತಿದ್ದಾರೆ.

ಮೊದಲು ಸಂತ್ರಸ್ತರನ್ನು ಅಡ್ಡಗಟ್ಟುವ ವ್ಯಕ್ತಿ, ತುರ್ತು ಕರೆ ಮಾಡಬೇಕಿದೆ ಎಂದು ಹೇಳಿ ಮೊಬೈಲ್ ಕೇಳುತ್ತಾನೆ. ಈ ವೇಳೆ ಮೊಬೈಲ್ ಲಾಕ್ ತೆರೆಯುವಂತೆ ಒತ್ತಾಯಿಸುವುದರ ಜತೆಗೆ, ಬೆದರಿಕೆ ಹಾಕಿ ಫೋನ್ ಪಾಸ್ ವರ್ಡ್‌ಗಳನ್ನು ಪಡೆದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಮತ್ತೊಬ್ಬ ವ್ಯಕ್ತಿ ಸಂತ್ರಸ್ತರ ಜೇಬು ಅಥವಾ ಬ್ಯಾಗ್‌ನಲ್ಲಿರುವ ಪರ್ಸ್ ಕಿತ್ತುಕೊಂಡು ಪರಾರಿಯಾಗುತ್ತಾರೆ.

ನಂತರ ಕಿತ್ತುಕೊಂಡ ಮೊಬೈಲ್‌ಗಳನ್ನು ಮತ್ತೊಬ್ಬ ವ್ಯಕ್ತಿಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ಮೊಬೈಲ್‌ನಲ್ಲಿರುವ ಬ್ಯಾಂಕಿಂಗ್ ಅಥವಾ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ.

ಸಂತ್ರಸ್ತರಿಗೆ ತಿಳಿಯುವಷ್ಟರಲ್ಲಿ ಹಣ ಖಾತೆ ಖಾಲಿ?

ಮೊಬೈಲ್‌ನ ಲಾಕ್, ಬ್ಯಾಂಕಿಂಗ್ ಅಪ್ಲಿಕೇಶನ್‌ಗಳು ಅಥವಾ ಇತರ ಡಿಜಿಟಲ್ ಸೇವೆಗಳ ಪ್ರವೇಶ ವಿವರಗಳು ಆರೋಪಿಗಳ ಕೈಗೆ ಸಿಕ್ಕರೆ, ಹಣಕಾಸಿನ ವಂಚನೆಯ ಅಪಾಯ ಹೆಚ್ಚುತ್ತದೆ. ಕೆಲವು ಸಂದರ್ಭಗಳಲ್ಲಿ ಪಾಸ್‌ವರ್ಡ್ ಬದಲಾವಣೆ, ಒಟಿಪಿ ಮೂಲಕ ಹೊಸ ಪಾಸವರ್ಡ್ ಪಡೆದುಕೊಂಡು ಡಿಜಿಟಲ್ ವಿಧಾನಗಳ ಮೂಲಕ ಹಣ ವರ್ಗಾಯಿಸಿಕೊಳ್ಳುತ್ತಿದ್ದಾರೆ.

ಸಣ್ಣ ಮೊತ್ತಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸುವ ಮೂಲಕ ಹಣದ ಜಾಡು ಪತ್ತೆ ಹಚ್ಚುವುದನ್ನು ಕಷ್ಟಕರಗೊಳಿಸುವ ಪ್ರಯತ್ನ ನಡೆಯುತ್ತಿದೆ. ಪ್ರತಿ ಖಾತೆಗೆ ₹2,000ರಿಂದ 3,000ದವರೆಗೆ ಹಣ ವರ್ಗಾಯಿಸುವ ಮೂಲಕ ಹಲವು ವಹಿವಾಟುಗಳನ್ನು ನೆಡೆಸುತ್ತಿದಾರೆ.

ಹಣ ವರ್ಗಾವಣೆಯ ಸಂದೇಶಗಳನ್ನು ಸಂತ್ರಸ್ತರು ಗಮನಿಸದಿದ್ದರೆ ಅಥವಾ ಮೊಬೈಲ್ ಅವರ ಬಳಿಯೇ ಇಲ್ಲದಿದ್ದರೆ, ತಕ್ಷಣ ವಂಚನೆಯ ಅರಿವು ಮೂಡುವುದಿಲ್ಲ. ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅಥವಾ ವಹಿವಾಟಿನ ಸಂದೇಶಗಳನ್ನು ಗಮನಿಸಿದಾಗ ಹಣ ಕಳೆದುಕೊಂಡಿರುವುದು ತಿಳಿಯುತ್ತದೆ. ಆ ವೇಳೆ ಮೊಬೈಲ್ ಕತ್ತಿಕೊಂಡು ಹೋಗಿರುವುದರಿಂದ ಬೆಳಗ್ಗೆ ಬ್ಯಾಂಕ್ ತೆರೆದುಕೊಂಡು ತಮ್ಮ ಖಾತೆಯಲ್ಲಿನ ಹಣ ಖಾಲಿಯಾಗಿರುವುದು ಸಂತ್ರಸ್ತರ ಅರಿವಿಗೆ ಬರುತ್ತಿದೆ.

ದೂರು ದಾಖಲಿಸಿಕೊಳ್ಳಲು ಹಿಂದೇಟು:

ಸೆಪ್ಟಂಬರ್ 28ರಂದು ಒಂದೇ ರಾತ್ರಿ 15ಕ್ಕೂ ಹೆಚ್ಚು ಪ್ರಯಾಣಿಕರು ಧರೋಡೆಗೆ ಒಳಗಾಗಿದ್ದಾರೆ. ಕೊಪ್ಪಳ ಜಿಲ್ಲೆಯಿಂದ ಆಗಮಿಸಿದ್ದ ಮಣಿಕಂಠ ಎಂಬ ಯುವಕನನ್ನು ಅಡ್ಡಗಟ್ಟಿರುವ ಖದೀಮರು, ಮೊಬೈಲ್, ಪರ್ಸ್ ಒತ್ತಾಯಪೂರ್ವಕವಾಗಿ ಕಿತ್ತುಕೊಂಡಿದ್ದಾರೆ. ಒಂದೇ ಗಂಟೆಯಲ್ಲಿ ಸಂತ್ರಸ್ತನ ಮೊಬೈಲ್‌ನಿಂದ 20ಕ್ಕೂ ಹೆಚ್ಚು ಜನರಿಗೆ 30 ಸಾವಿರ ರೂ. ವರ್ಗಾವಣೆಯಾಗಿದೆ. ದರೋಡೆಯಾಗಿದ್ದ ರಾತ್ರಿ 2ಗಂಟೆ ಸುಮಾರಿಗೆ. ಅವರ ಖಾತೆಯಿಂದ ಅದೇ ದಿನ ಬೆಳಗಿನ ಜಾವ ಲಲಿತಾ ಯಾದವ್ ಅವರಿಗೆ 1,999 ರೂ., ಓಪ್ರಕಾಶ್ ಕುಮಾರ್ 753, ಪ್ರೇಮ್ ಕುಮಾರ್ 499, ಭೋಲಾನಾಥ್ ಸಿಂಗ್ 1,849, ರವಿಕುಮಾರ್ ಯಾದವ್ 1000, ಈಶ್ವರ್ ಸಿಮಗ್ ಸೋಲಂಕಿ 2,999, ಪ್ರಶಾಂತ್ ಸಿಂಗ್ ಬೇಲ್ 387, ರಾಜೇಶ್ ಯಾದವ್497, ಬಿನಿಯಾ ಮಾಜಿ 412, ಆರತಿ 396, ರಾಜ್‌ಕುಮಾರ್ 3,559, ರಾಜ್‌ಕುಮಾರ್ ಲೋಧಿ 5,000, ಅಶ್ವೇಂದ್ರ ಸಿಂಗ್ 299, ಅಮಿತ್ ಕುಮಾರ್ 1,749, ಪ್ರಕಾಶ್ ಕುಮಾರ್ ಮಹಾಟೋ 1,899, ಮೋನಿಕಾ ಜಾನ್ 832, ಶೈಲೇಶ್ ಕುಮಾರ್ 999, ಶಾನಿಬಾಬು 999, ಬಾಬುರಾಜ್ 554, ಸತ್ಯಜೀತ್ 999, ಅಂಕಿತ್ ಕುಮಾರ್209 ಹೀಗೆ ಹತ್ತಾರು ಜನರಿಗೆ ಒಂದೇ ಗಂಟೆಯಲ್ಲಿ 30,000 ರೂ. ವರ್ಗಾವಣೆಯಾಗಿದೆ.

ಈ ಎಲ್ಲ ದಾಖಲೆ ಸಮೇತ ಉಪ್ಪಾರಪೇಟೆ ಠಾಣೆ ಪೊಲೀಸರಿಗೆ ದೂರು ನೀಡಲು ಹೋದ ಸಂತ್ರಸ್ತನನ್ನು, ‘ಪುಣ್ಯ ದರೋಡೆಕೋರರು ನಿಮ್ಮನ್ನು ಬಿಟ್ಟು ಕಳುಹಿಸಿದ್ದಾರೆಲ್ಲ ಸಾಕು.. ಎಂಬು ಉಡಾಪೆ ಹೇಳಿಕೆ ನೀಡಿ ದೂರು ಸ್ವೀಕರಿಸಿಕೊಳ್ಳದೆ ವಾಪಸ್ ಕಳುಸಿದ್ದಾರೆ.

ಪೊಲೀಸರೇ ಶಾಮೀಲು ಆರೋಪ !

ನಗರದ ಪ್ರಮುಖ ಹಾಗೂ ಜನದಟ್ಟಣೆಯ ಸ್ಥಳವಾಗಿರುವ ಮೆಜೆಸ್ಟಿಕ್ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ದರೋಡೆಕೋರರು ನಿರಂತರವಾಗಿ ಈ ಕೃತ್ಯ ಎಸಗುತ್ತಿದ್ದಾರೆ. ಈ ಕೃತ್ಯಗಳ ಹಿಂದೆ ಯಾರಿದ್ದಾರೆ? ಜನದಟ್ಟಣೆಯ ಪ್ರದೇಶಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ಆರೋಪಿಗಳನ್ನು ಏಕೆ ನಿಯಂತ್ರಿಸಲಾಗುತ್ತಿಲ್ಲ? ರಾತ್ರಿ ಗಸ್ತು ವ್ಯವಸ್ಥೆ ಸಮರ್ಪಕವಾಗಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡಿವೆ. ಇದರ ಜತೆಗೆ, ದರೋಡೆಕೋರರಿಗೆ ಪೊಲೀಸ್ ಇಲಾಖೆಯಲ್ಲಿರುವ ಕೆಲವರಿಂದ ರಕ್ಷಣೆ ಸಿಗುತ್ತಿದೆಯೇ ಎಂಬ ಅನುಮಾನಗಳೂ ಮೂಡುತ್ತಿವೆ. ಆದರೆ ಪೊಲೀಸರ ಶಾಮೀಲಾತಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಸಾಕ್ಷ್ಯಗಳು ಇಲ್ಲದಂತಾಗಿದೆ.

ರಾತ್ರಿ ಗಸ್ತು ಬಿಗಿಗೊಳಿಸಲು ಆಗ್ರಹ:

ಮೆಜೆಸ್ಟಿಕ್ ಹಾಗೂ ಕೆಂಪೇಗೌಡ ಬಸ್ ನಿಲ್ದಾಣದ ಸುತ್ತಮುತ್ತ ರಾತ್ರಿ ಗಸ್ತು ಹೆಚ್ಚಿಸುವುದು, ನಂಬರ್ ಪ್ಲೇಟ್ ಇಲ್ಲದ ಬೈಕ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದು, ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು ಹಾಗೂ ಸಿಸಿ ಕ್ಯಾಮರಾ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸುವುದು ಅಗತ್ಯವಾಗಿದೆ.

ಮೊಬೈಲ್ ಕಳ್ಳತನದ ಬಳಿಕ ನಡೆಯುವ ಡಿಜಿಟಲ್ ಹಣಕಾಸಿನ ವಂಚನೆ ತಡೆಯಲು ಪೊಲೀಸ್ ಠಾಣೆಗಳು, ಸೈಬರ್ ಅಪರಾಧ ವಿಭಾಗಗಳು ಹಾಗೂ ಬ್ಯಾಂಕ್‌ಗಳ ನಡುವೆ ತ್ವರಿತ ಮಾಹಿತಿ ವಿನಿಮಯ ಮುಖ್ಯವಾಗಿದೆ. ಸಂತ್ರಸ್ತರು ತಕ್ಷಣ ದೂರು ದಾಖಲಿಸಲು ಅನುಕೂಲವಾಗುವ ವ್ಯವಸ್ಥೆ ಕಲ್ಪಿಸುವುದರ ಜತೆಗೆ, ಕಳ್ಳತನವಾಗಿರುವ ಮೊಬೈಲ್‌ಗಳ ಮೂಲಕ ಹಣ ವರ್ಗಾವಣೆ ಮಾಡುವ ಜಾಲದ ಹಿಂದಿರುವವರನ್ನು ಪತ್ತೆಹಚ್ಚಬೇಕಿದೆ.

ರಾಜಧಾನಿಯ ಪ್ರಮುಖ ಸಾರಿಗೆ ಕೇಂದ್ರದಲ್ಲೇ ಪ್ರಯಾಣಿಕರಿಗೆ ಸುರಕ್ಷತೆಯ ಭರವಸೆ ಇಲ್ಲದಂತಾಗಬಾರದು. ಮೆಜೆಸ್ಟಿಕ್ ಸುತ್ತಮುತ್ತ ಕೇಳಿಬರುತ್ತಿರುವ ದರೋಡೆ ಹಾಗೂ ಡಿಜಿಟಲ್ ವಂಚನೆಯ ಆರೋಪಗಳ ಬಗ್ಗೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ, ವಾಸ್ತವಾಂಶಗಳನ್ನು ಅರಿಯಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

'ಮೆಜೆಸ್ಟಿಕ್‌ನಲ್ಲಿ ಓಡಾಡಲು ಭಯವಾಗುತ್ತಿದೆ. ಮಧ್ಯರಾತ್ರಿಯಾದರೆ ಸಾಕು ಕಳ್ಳರ, ಧರೋಡೆಕೋರರ ಗುಂಪು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಮೊಬೈಲ್, ಪರ್ಸ್ ದೋಚಿಕೊಂಡು ಹೋಗುತ್ತಿದ್ದಾರೆ. ಆ ಕ್ಷಣದಲ್ಲಿ ಕೂಗಿಕೊಂಡರು ಯಾರು ಹತ್ತಿರ ಬರುವುದಿಲ್ಲ. ಆಟೋ ಚಾಲಕರು ಸಹಾಯಕ್ಕೆ ಬಂದರೆ ಅವರಿಗೆ ಮರುದಿನ ಜೀವ ಬೆದರಿಕೆ ಹಾಕುತ್ತಿದ್ದಾರೆ.

-ನಾಗರಾಜ್ ಬಳಗಾನೂರು, ಸಂತ್ರಸ್ತರು.