

ಬೆಂಗಳೂರು: ಆರೋಗ್ಯ ಇಲಾಖೆಯ ಔಷಧ ನಿಯಂತ್ರಣ ವಿಭಾಗವು ನಗರದ ಕಾಟನ್ಪೇಟೆ ಪ್ರದೇಶದಲ್ಲಿನ ಎರಡು ಮಳಿಗೆಗಳ ಮೇಲೆ ದಾಳಿ ನಡೆಸಿ, ನಿಯಮ ಉಲ್ಲಂಘನೆ ಆರೋಪದ ಮೇಲೆ ಸುಮಾರು 13.79 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣ ಮತ್ತು ಬಳಸಿ ಬಿಸಾಡುವ ವೈದ್ಯಕೀಯ ವಸ್ತುಗಳನ್ನು ವಶಪಡಿಸಿಕೊಂಡಿದೆ.
ನ.11 ಮತ್ತು 12ರಂದು ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಮಾನದೇವ್ ಸುರ್ಗಿಫಾರ್ಮ ಪ್ರೈವೇಟ್ ಲಿಮಿಟೆಡ್ನಿಂದ 6.57 ಲಕ್ಷ ರೂ. ಹಾಗೂ ಶ್ರೀ ಮಾನ್ದೇವ್ ಸರ್ಜಿಕಲ್ಸ್ನಿಂದ 7.21 ಲಕ್ಷ ರೂ. ಮೌಲ್ಯದ ವೈದ್ಯಕೀಯ ಉಪಕರಣ ಮತ್ತು ವೈದ್ಯಕೀಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡಿರುವ ಉತ್ಪನ್ನಗಳಲ್ಲಿ ಶ್ರವಣ ಸಾಧನ, ಕ್ಲಿನಿಕಲ್ ಥರ್ಮಾಮೀಟರ್ ಸೇರಿ ವಿವಿಧ ವೈದ್ಯಕೀಯ ಸಾಧನಗಳು, ಸರ್ಜಿಕಲ್ ಗ್ಲೌಸ್, ಮೂತ್ರದ ಚೀಲ, ಕಂಪ್ರೆಷನ್ ಸ್ಟಾಕಿಂಗ್ಸ್ ಸೇರಿ ಇತರ ವೈದ್ಯಕೀಯ ವಸ್ತುಗಳು ಸೇರಿವೆ.
ಹಲವಾರು ಉತ್ಪನ್ನಗಳಲ್ಲಿ ಲೇಬಲ್ ಮೇಲೆ ಕಡ್ಡಾಯವಾಗಿ ಇರಬೇಕಾದ ಬ್ಯಾಚ್ ನಂಬರ್, ತಯಾರಿಕೆ ಮತ್ತು ಮುಕ್ತಾಯದ ದಿನಾಂಕ, ತಯಾರಕರ ವಿವರ, ಪರವಾನಗಿ ನಂಬರ್ ಮತ್ತು ಗರಿಷ್ಠ ಚಿಲ್ಲರೆ ಬೆಲೆಯ (ಎಂಆರ್ಪಿ) ವಿವರ ಸಮರ್ಪಕವಾಗಿ ಇರಲಿಲ್ಲ. ವಶಪಡಿಸಿಕೊಂಡಿರುವ ವಸ್ತುಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ನಿಯಮ ಉಲ್ಲಂಘನೆಯ ಮೇಲೆ ತೀವ್ರ ನಿಗಾ ಇಡಲಾಗುವುದು. ಸಾರ್ವಜನಿಕರು ಎಚ್ಚರದಿಂದ ಇರಬೇಕು. ವೈದ್ಯಕೀಯ ಉಪಕರಣಗಳನ್ನು ಅಧಿಕೃತ ಮಾರಾಟಗಾರರಿಂದಲೇ ಖರೀದಿಸಬೇಕು. ಖರೀದಿಸುವ ಮುನ್ನ ಬ್ಯಾಚ್ ನಂಬರ್, ಮುಕ್ತಾಯದ ದಿನಾಂಕ, ತಯಾರಕರ ವಿವರ ಹಾಗೂ ಎಂಆರ್ಪಿ ಪರಿಶೀಲಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.