ಶಿವಾನಂದ ನೀಲಣ್ಣನವರ್ ವಿರುದ್ಧ ಪ್ರಾಸಿಕ್ಯೂಷನ್ ದೂರು ಸಲ್ಲಿಕೆ

ED
ED
Published on: 

ಬೆಂಗಳೂರು: ಶಿವಂ ಅಸೊಸಿಯೇಟ್ಸ್ ಹೆಸರಿನಲ್ಲಿ ಜನರಿಗೆ ಬಹುಕೋಟಿ ವಂಚಿಸಿದ್ದ ಪ್ರಕರಣದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮಂಗಳೂರಿನ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದ್ದಾರೆ.

ಅಕ್ರಮದ ಕಿಂಗ್‌ಪಿನ್ ಶಿವಾನಂದ ನೀಲಣ್ಣವರ್ ಹಾಗೂ ಅವರ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ಮುಖ್ಯ ಆರೋಪಿಯನ್ನು ಆ.13ರಂದು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಆರೋಪಿಯು 35 ಸಾವಿರಕ್ಕೂ ಹೆಚ್ಚು ಜನರಿಗೆ ತಿಂಗಳಿಗೆ ಶೇ.3ರಷ್ಟು ಭಾರಿ ಲಾಭ ಹಾಗೂ ಹೊಸ ಹೂಡಿಕೆದಾರರನ್ನು ಕರೆತಂದರೆ ಶೇ.0.5ರಷ್ಟು ಕಮಿಷನ್ ನೀಡುವುದಾಗಿ ನಂಬಿಸಿ ಒಟ್ಟು 2,459.49 ಕೋಟಿ ರೂ. ಸಂಗ್ರಹಿಸಿ ವಂಚನೆ ಎಸೆಗಿರುವುದು ತನಿಖೆಯಲ್ಲಿ ಬಯಲಾಗಿದೆ.

ಸಾರ್ವಜನಿಕರಿಂದ ಸಂಗ್ರಹಿಸಿದ ಅಕ್ರಮ ಹಣವನ್ನು ಬೇರೆಡೆಗೆ ತಿರುಗಿಸಿದ ಆರೋಪಿಯು ಅಂದಾಜು 5 ಕೋಟಿ ರೂ. ಹಣವನ್ನು ‘ಚಾಂಪಿಯನ್’ ಎಂಬ ಕನ್ನಡ ಚಲನಚಿತ್ರದ ನಿರ್ಮಾಣಕ್ಕೂ ಬಳಕೆ ಮಾಡಿರುವುದು ಇಡಿ ತನಿಖೆಯಿಂದ ಬಹಿರಂಗವಾಗಿದೆ.

ತನಿಖೆಯ ವೇಳೆ ಆರೋಪಿಯ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಸ್ಥಿರ ನಿಧಿಗಳಲ್ಲಿದ್ದ 2.02 ಕೋಟಿ ರೂ. ಹಣವನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ. ಈ ಹಗರಣದ ಕುರಿತು ಇಡಿ ಹೆಚ್ಚಿನ ತನಿಖೆ ಮುಂದುವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net