ಹುಣಸೆ ಹಣ್ಣಿನ ಮೌಲ್ಯವರ್ಧಿತ ಪದಾರ್ಥಗಳ ತಯಾರಿಕೆ

tamarind-based
tamarind-based
Published on

ಪ್ರಮುಖ ಮುಖ್ಯಾಂಶಗಳು

  • ಯುಎಎಸ್-ಬಿಯಿಂದ ತಂತ್ರಜ್ಞಾನ ವರ್ಗಾವಣೆಗೆ ಅವಕಾಶ
  • ಅಡುಗೆಗೆ ಹಣ್ಣಿನ ಬದಲು ಪೇಸ್ಟ್, ಪುಡಿ, ಘನಸಾರ ಬಳಕೆಗೆ ಉತ್ತೇಜನ
ಬೆಂಗಳೂರು:

ಅಡುಗೆಗೆ ಬಳಸಲಾಗುವ ಹುಣಸೆ ಹಣ್ಣಿನ ಬದಲು ಅದರ ಮೌಲ್ಯವರ್ಧಿತ ರೂಪದಲ್ಲಿ ತಯಾರಿಸಿರುವ ಪುಡಿ, ಪೇಸ್ಟ್, ಘನಸಾರ ಬಳಸಬಹುದಾಗಿದೆ. ಇಂಥದ್ದೊಂದು ಆವಿಷ್ಕಾರವನ್ನು ಕೈಗೊಂಡಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್-ಬಿ) ಮೌಲ್ಯವರ್ಧಿತ ಮಾದರಿಗಳನ್ನು ಸಾರ್ವಜನಿಕರು ಸೇರಿ ಸಂಘ-ಸಂಸ್ಥೆಗಳಿಗೆ ತಂತ್ರಜ್ಞಾನ ವರ್ಗಾವಣೆ ಮಾಡಲು ಮುಂದಾಗಿದೆ.

ಗೃಹ ಬಳಕೆ, ಹೋಟೆಲ್-ರೆಸ್ಟೋರೆಂಟ್, ಸಭೆ-ಸಮಾರಂಭಗಳಲ್ಲಿ ಅಡುಗೆ ತಯಾರಿಕೆ ಸೇವೆಯನ್ನು ಕೇಟರಿಂಗ್‌ಗೆ ನೀಡಲಾಗುತ್ತದೆ. ಈ ವೇಳೆ ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿ, ಕಿವುಚಿ, ಸೋಸಿ ಅಡುಗೆ ಮಾಡಲಾಗುತ್ತದೆ. ಆದರೆ, ನಗರ ಜೀವನಶೈಲಿಯಿಂದಾಗಿ ಈ ವಿಧಾನದಡಿ ಹುಣಸೆಯನ್ನು ಬಳಸಲು ಸಮಯದ ಅಭಾವ ಎದುರಾಗಿದೆ. ಇದನ್ನಾಧರಿಸಿ ವಿವಿಯ ಕೊಯ್ಲಿನೋತ್ತರ ಇಂಜಿನಿಯರಿಂಗ್ ಹಾಗೂ ತಂತ್ರಜ್ಞಾನ ವಿಭಾಗವು ಹುಣಸೆ ಹಣ್ಣಿನಿಂದ ತಯಾರಿಸಿವ ಪುಡಿ, ಪೇಸ್ಟ್ ಹಾಗೂ ಘನಸಾರವನ್ನು ಮಾಡುವ ಕಾರ್ಯವಿಧಾನವನ್ನು ಪ್ರಮಾಣಿಕರಿಸಲಾಗಿದೆ. ಹಾಗಾಗಿ ಈ ಹೊಸ ಪದಾರ್ಥಗಳನ್ನು ಸಾರ್ವಜನಕರು ಬಳಕೆ ಮಾಡಬಹುದಾಗಿದ್ದು, ತಂತ್ರಜ್ಞಾನ ವರ್ಗಾವಣೆಯನ್ನು ಪಡೆಯಲಿಚ್ಛಿಸುವವರು ವಿಶ್ವವಿದ್ಯಾಲಯದ ಸಂಶೋಧನಾ ಇಂಜಿನಿಯರ್ ಹಾಗೂ ಮುಖ್ಯಸ್ಥರನ್ನು ಸಂಪರ್ಕಿಸಬಹುದಾಗಿದೆ.

ಹುಣಸೆ ಹಣ್ಣಿನಲ್ಲಿದೆ ಟಾರ್ಟಾರಿಕ್ ಆಮ್ಲ:

ಹುಣಸೆಹಣ್ಣು ಉತ್ಪಾದನೆಯಲ್ಲಿ ಭಾರತವು ವಿಶ್ವದಲ್ಲೇ ಮುಂಚೂಣಿಯಲ್ಲಿದ್ದು, ವಾರ್ಷಿಕ 1.38 ಲಕ್ಷ ಮೆಟ್ರಿಕ್ ಟನ್ ಬೆಳೆಯಲಾಗುತ್ತಿದೆ. ಕರ್ನಾಟಕ ಸೇರಿ ದಕ್ಷಿಣದ ಎಲ್ಲ ರಾಜ್ಯಗಳು ಹಾಗೂ ಮಹಾರಾಷ್ಟ್ರ, ಛತ್ತೀಸ್‌ಗಢ ಸೇರಿ ಇತರ ರಾಜ್ಯಗಳಲ್ಲೂ ಬೆಳೆಯಲಾಗುತ್ತಿದೆ. ದಕ್ಷಿಣ ಭಾರತದ ಅಡುಗೆಗಳಲ್ಲಿ ಹುಣಸೆಹಣ್ಣ ತನ್ನದೇಯಾದ ಹುಳಿ ಹಾಗೂ ರುಚಿಯಿಂದ ವಿಶಿಷ್ಟ ಸ್ಥಾನ ಪಡೆದಿದೆ. ಹುಣಸೆಯಲ್ಲಿ ಪ್ರಮುಖವಾಗಿ ಟಾರ್ಟಾರಿಕ್ ಆಮ್ಲವಿದ್ದು, ವಿಟಮಿನ್ ಸಿ ಹಾಗೂ ಇತರ ಪೋಷಕಾಂಶ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಉತ್ತಮ ಎಂದು ಕೃಷಿ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ.
"

ಹಿಂದಿನ ಕಾಲದಲ್ಲಿ ಹುಣಸೆ ಹಣ್ಣನ್ನು ಕೊಯ್ಲು ಮಾಡಿ ನೇರವಾಗಿ ಬಳಸಲಾಗುತ್ತಿತ್ತು. ಈ ವಿಧಾನವು ಅಧಿಕ ಲಾಭದಾಯಕವಾಗಿರಲಿಲ್ಲ. ಹುಣಸೆ ಹಣ್ಣನ್ನು ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒಳಪಡಿಸಿರುವುದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ. ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸಲಿದೆ.

- ಡಾ. ಎಸ್.ವಿ. ಸುರೇಶ್, ಯುಎಎಸ್-ಬಿ ಕುಲಪತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net