ಕೆ.ಆರ್. ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಕಲ್ಪಿಸಲು ಆದ್ಯತೆ

kr-market
kr-market
Published on

ಪ್ರಮುಖ ಮುಖ್ಯಾಂಶಗಳು

  • ಸಾರ್ವಜನಿಕ ಸೌಲಭ್ಯಗಳ ಕಾಮಗಾರಿ ತ್ವರಿತಗೊಳಿಸಲು ಸೂಚನೆ
  • ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಸ್ಥಳಪರಿಶೀಲನೆ

ಬೆಂಗಳೂರು: ನಗರದ ಕೆ.ಆರ್. ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಾರ್ವಜನಿಕ ಸೌಲಭ್ಯಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹೈಕೋರ್ಟ್ ಸೂಚನೆ ಬಳಿಕ ಕೆ.ಆರ್. ಮಾರುಕಟ್ಟೆಯಲ್ಲಿ ಮೂಲಸೌಕರ್ಯ, ಸ್ವಚ್ಛತೆ ಹಾಗೂ ಒತ್ತುವರಿ ಪ್ರಕರಣಗಳ ಕುರಿತಂತೆ ಮಂಗಳವಾರ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ವೇಳೆ ಅವರು ಈ ನಿರ್ದೇಶನವನ್ನು ನೀಡಿದರು.
ಮಾರುಕಟ್ಟೆ ಸಮುಚ್ಚಯದಲ್ಲಿ ಮಳೆನೀರು ನಿಲ್ಲುವ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸಮಗ್ರ ಪ್ಲಂಬಿಂಗ್ ಯೋಜನೆ ರೂಪಿಸಿ, ಪಿವಿಸಿ ಗಟಾರ್, ಪೈಪ್‌ಲೈನ್ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆಯನ್ನು ಅಳವಡಿಸಬೇಕು. ಸೊಪ್ಪು ಮಾರಾಟ ಸ್ಥಳದಲ್ಲಿ ತ್ಯಾಜ್ಯ ಸಂಗ್ರಹಣಾ ಶೆಡ್ ನಿರ್ಮಿಸುವ ಜತೆಗೆ ಪಾರ್ಕಿಂಗ್ ಎಂಟ್ರಿ-2ರ ಬಳಿ ರಸ್ತೆಯನ್ನು ಸಮತಟ್ಟುಗೊಳಿಸಿ ಅಭಿವೃದ್ಧಿಪಡಿಸಬೇಕು. ಅಗತ್ಯವಿರುವೆಡೆ ಕಾಂಕ್ರೀಟೀಕರಣ ಕೈಗೊಂಡು ತಗ್ಗು ಪ್ರದೇಶಗಳನ್ನು ಭರ್ತಿ ಮಾಡಿ ವಾಹನ ಹಾಗೂ ನಾಗರಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮುಖ್ಯ ಆಯುಕ್ತರು ಸೂಚಿಸಿದರು.

ಅಗ್ನಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿ:

ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಮಾರ್ಗದಲ್ಲಿ ಅಗ್ನಿಶಾಮಕ ವಾಹನಗಳು ಸರಾಗವಾಗಿ ಸಂಚರಿಸಲು ಕನಿಷ್ಠ 6 ಮೀ. ಅಗಲದ ಪ್ರವೇಶ ಮಾರ್ಗ ಕಲ್ಪಿಸಬೇಕು. ಅಗ್ನಿ ಸುರಕ್ಷತೆಗೆ ಅಡ್ಡಿಯಾಗಿರುವ ಎಲ್ಲ ಅಡೆತಡೆಗಳನ್ನು ತೆರವುಗೊಳಿಸಿ, ತುರ್ತು ಸೇವೆಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಪಾರ್ಕಿಂಗ್ ವ್ಯವಸ್ಥೆ ಸುಧಾರಿಸಿ:

ತ್ಯಾಜ್ಯ ಸಂಗ್ರಹಣಾ ಕೇಂದ್ರ, ಸಮುಚ್ಚಯದ ಪ್ರವೇಶ ದ್ವಾರ ಹಾಗೂ ಅಗ್ನಿ ಸುರಕ್ಷತಾ ವಲಯ ಸಮೀಪ ಅನಧಿಕೃತ ವಾಹನ ನಿಲುಗಡೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಮಾಡುವವರಿಗೆ ದಂಡ ವಿಧಿಸಬೇಕು. ವಾಹನಗಳ ಸುಗಮ ಸಂಚಾರಕ್ಕಾಗಿ ಪ್ರಮುಖ ಪ್ರವೇಶ ದ್ವಾರಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸುವ ಕುರಿತು ಪರಿಶೀಲಿಸಬೇಕು. ತೆಂಗಿನಕಾಯಿ ಹಾಗೂ ಬಾಳೆಹಣ್ಣು ಮಾರುಕಟ್ಟೆ ಪ್ರದೇಶಗಳಲ್ಲಿ ಪಾರ್ಕಿಂಗ್ ಶುಲ್ಕ ಹಾಗೂ ರಸ್ತೆಬದಿಯ ವಾಹನ ನಿಲುಗಡೆ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಮಹೇಶ್ವರ್ ರಾವ್ ಸೂಚಿಸಿದರು.
ಪರಿಶೀಲನೆಯ ವೇಳೆ ಕೇಂದ್ರ ಪಾಲಿಕೆ ಆಯುಕ್ತ ಜಿ.ಜಗದೀಶ್, ಅಪರ ಆಯುಕ್ತ ವೆಂಕಟಚಲಪತಿ, ಮುಖ್ಯ ಅಭಿಯಂತರ ವಿಜಯಕುಮಾರ್ ಹರಿದಾಸ್ ಸೇರಿ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಿ:

ಪಾರ್ಕಿಂಗ್ ಎಂಟ್ರಿ-2 ಹಾಗೂ ಹೂ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಜತೆಗೆ ಪಾರ್ಕಿಂಗ್ ಎಂಟ್ರಿ-2 ಸಮೀಪ ಶೌಚಾಲಯ ನಿರ್ಮಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ರೈಟ್ ಪಾರ್ಕಿಂಗ್ ವ್ಯವಸ್ಥಾಪಕರಿಗೆ ಸೂಚಿಸಲಾಯಿತು. ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆಗೆ ಎಇಇ ಅಧಿಕಾರಿಯನ್ನು ನಿಯೋಜಿಸಬೇಕು. ಬಾಕಿ ಉಳಿದಿರುವ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಮುಖ್ಯ ಆಯುಕ್ತರು ಸೂಚಿಸಿದರು.

ಒತ್ತುವರಿ ತೆರವುಗೊಳಿಸಿ:

ತೆಂಗಿನಕಾಯಿ ಹಾಗೂ ಬಾಳೆಹಣ್ಣು ಮಾರುಕಟ್ಟೆ ರಸ್ತೆ, ಹೋಟೆಲ್ ಮುಂಭಾಗ ಹಾಗೂ ಇತರ ಮಾರ್ಗಗಳಲ್ಲಿರುವ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು. ಹೂ ಮಾರುಕಟ್ಟೆಯಲ್ಲಿ ಕೈಗೊಂಡಿರುವ ತೆರವು ಕಾರ್ಯವನ್ನು ಶ್ಲಾಘಿಸಿ, ಇದೇ ರೀತಿಯ ಕಾರ್ಯಾಚರಣೆಯನ್ನು ಮುಂದುವರಿಸಬೇಕು ಎಂದು ಮುಖ್ಯ ಆಯುಕ್ತರು ನಿರ್ದೇಶಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net