ಹಲಸೂರು ಕೆರೆ ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆಗೆ ಅವಕಾಶ

halasuru-lake
halasuru-lake
Published on

ಪ್ರಮುಖ ಮುಖ್ಯಾಂಶಗಳು

  • ಸುರಕ್ಷತೆ ಸಹಿತ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ನಿರ್ದೇಶನ
  • ಸಚಿವ ರಿಜ್ವಾನ್ ಅರ್ಷದ್ ಅವರಿಂದ ಅಧಿಕಾರಿಗಳ ಸಭೆ
ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ಹಲಸೂರು ಕೆರೆಯಲ್ಲಿನ ಗಣೇಶ ಮೂರ್ತಿ ವಿಸರ್ಜನೆಗೆ ಪ್ರತ್ಯೇಕ ಕಲ್ಯಾಣಿ ವ್ಯವಸ್ಥೆ ಮಾಡಲಾಗುತ್ತದೆ. ಹಾಗಾಗಿ ಪ್ರತಿವರ್ಷದಂತೆ ಈ ಬಾರಿಯೂ ಹಲಸೂರು ಕೆರೆಯಲ್ಲಿ ಮೂರ್ತಿ ವಿಸರ್ಜನೆಗೆ ಎಲ್ಲ ರೀತಿಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಹಲಸೂರು ಕೆರೆ ಬಳಿ ಸೋಮವಾರ ಸಂಜೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಮನ್ವಯ ಸಭೆ ನಡೆಸಿದ ಸಚಿವ ಹಾಗೂ ಸ್ಥಳೀಯ ಶಾಸಕರೂ ಆದ ರಿಜ್ವಾನ್ ಅರ್ಷದ್, ಕೆರೆ ಪುನಃಶ್ಚೇತನ ಹಿನ್ನೆಲೆಯಲ್ಲಿ ಮೂರ್ತಿ ವಿಸರ್ಜನೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿತ್ತು. ಆದರೆ, ಎಂದಿನಂತೆ ಕಲ್ಯಾಣಿಯಲ್ಲೇ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸುವುದರಿಂದ ಕೆರೆಯ ಪರಿಸರಕ್ಕೆ ಯಾವುದೇ ಹಾನಿಯಾಗದು. ಹಾಗಾಗಿ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಹೆಚ್ಚುವರಿ ಮೊಬೈಲ್ ಟ್ಯಾಂಕರ್‌ಗೆ ವ್ಯವಸ್ಥೆ:
ಹಲಸೂರು ಕರೆಯ ಕಲ್ಯಾಣಿಯಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆಗೆ ಅವಕಾಶ ಇದ್ದರೂ, ನೂಕುನುಗ್ಗಲು ಉಂಟಾಗದಿರಲು ಮುನ್ನೆಚ್ಚರಿಕೆಯಾಗಿ ಕೆರೆಯನ್ನು ಸಂಪರ್ಕಿಸುವ ನಾಲ್ಕೂ ದಿಕ್ಕಿನ ರಸ್ತೆಗಳಲ್ಲಿ ಹೆಚ್ಚುವರಿ ಮೊಬೈಲ್ ಟ್ಯಾಂಕರ್ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೆರವಣಿಗೆ ವೇಳೆ ರಸ್ತೆಗಳಲ್ಲಿ ಮೂರ್ತಿ ತರುವ ವಾಹನಗಳಿಗೆ ತಗಲುವಂತಹ ಮರದ ರೆಂಬೆ-ಕೊಂಬೆ ತೆಗೆಯಬೇಕು. ಕೆರೆ ಬಳಿ ಮುಳುಗು ತಜ್ಞರ ನಿಯೋಜನೆ, ಆಂಬುಲೆನ್ಸ್, ವೈದ್ಯಕೀಯ ತಂಡ, ಅಗ್ನಿಶಾಮಕ ತಂಡವನ್ನು ನಿಯೋಜಿಸಲಾಗುತ್ತದೆ. ಕೆರೆ ಸುತ್ತ ಲೈಟಿಂಗ್ ವ್ಯವಸ್ಥೆ ಮಾಡುವುದಲ್ಲದೆ ಮೂರ್ತಿ ವಿಸರ್ಜನೆ ವೇಳೆ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅದೇ ದಿನ ತೆರವುಗೊಳಿಸಿ ಶುಚಿಗೊಳಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಭೆಯಲ್ಲಿ ಜಿಬಿಎ ವಿಶೇಷ ಆಯುಕ್ತ ವೆಂಕಟಾಚಲಪತಿ, ಕೇಂದ್ರ ಪಾಲಿಕೆಯ ಕಂದಾಯ ಅಪರ ಆಯುಕ್ತೆ ಲಕ್ಷ್ಮಮ್ಮ, ಜಂಟಿ ಆಯುಕ್ತ ಹೇಮಂತ್ ಶರಣ್, ಕಾನೂನು ಸುವ್ಯವಸ್ಥೆ ಹಾಗೂ ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತರು, ಅಗ್ನಿಶಾಮಕ, ಬೆಸ್ಕಾಂ ಹಾಗೂ ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು.
"

ಗಣೇಶ ಮೂರ್ತಿಗಳ ವಿಸರ್ಜನೆಗೆ ಹಲಸೂರು ಕೆರೆ ಪ್ರಮುಖ ಸ್ಥಳವಾಗಿದ್ದು, ವಿಸರ್ಜನೆ ವೇಳೆ ಯಾವುದೇ ಅಡಚಣೆ ಆಗದಂತೆ ಕ್ರಮ ವಹಿಸಲಾಗುವುದು. ಮೆರವಣಿಗೆ ಸಹಿತ ಮೂರ್ತಿಗಳ ವಿಸರ್ಜನೆಗೆ ಸುರಕ್ಷತೆ ಕೈಗೊಳ್ಳಲಾಗುವುದು.

- ಜಿ.ಜಗದೀಶ್, ಕೇಂದ್ರ ಪಾಲಿಕೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net