

ಬೆಂಗಳೂರು: ಕನ್ನಡ ರಾಜ್ಯೋತ್ಸವದಂದು ಬೆಂಗಳೂರಿನಲ್ಲಿರುವ ರಂಗಶಂಕರದಲ್ಲಿ 'ಸಮಷ್ಟಿ' ಕನ್ನಡ ರಂಗತಂಡವು “ನೀರು ಕುಡಿಸಿದ ನೀರೆಯರು” ಎನ್ನುವ ಕನ್ನಡ ನಾಟಕವನ್ನು ಪ್ರದರ್ಶಿಸಲಿದೆ.
ಭಾನುವಾರ ನ.1ರಂದು ಸಂಜೆ 3.30 ಮತ್ತು 7.30 ಕ್ಕೆ ಬೆಂಗಳೂರಿನ ಜೆಪಿ ನಗರದಲ್ಲಿರುವ ರಂಗಶಂಕರದಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ. ಈ ನಾಟಕವು ಷೇಕ್ಸ್ಪಿಯರ್ ಮಹಾಕವಿಯ “ದ ಮೆರ್ರಿ ವೈವ್ಸ್ ಆಫ್ ವಿಂಡ್ಸರ್” ನ ನಾಟಕದ ಕನ್ನಡ ರೂಪಾಂತರವಾಗಿದೆ. ಕನ್ನಡಕ್ಕೆ ರೂಪಾಂತರ ಮಾಡಿದ್ದು ಎಂ.ಸಿ. ಆನಂದ್ ಅವರು, ನೀನಾಸಂ ಪದವೀಧರರಾದ ಮಂಜುನಾಥ್. ಎಲ್. ಬಡಿಗೇರ ಅವರು ಈ ನಾಟಕವನ್ನು ನಿರ್ದೇಶಿಸಿ, ವಿನ್ಯಾಸಗೊಳಿಸಿದ್ದಾರೆ.
ಶೇಕ್ಸ್ಪಿಯರ್ ಮಹಾಕವಿಯ “ ದ ಮೆರ್ರಿ ವೈವ್ಸ್ ಆಫ್ ವಿಂಡ್ಸರ್” ವಿದ್ವಾಂಸರ ಅಭಿಪ್ರಾಯದಂತೇ ಅವನ ನಾಟಕಗಳಲ್ಲೇ ಅತ್ಯಂತ ಕಡಿಮೆ ಸಮಯದಲ್ಲಿ ರಚಿಸಿ ಪ್ರಯೋಗವಾಗಿರುವಂತಹುದು. ಕೇವಲ ಮನೋರಂಜನೆಯನ್ನು ಗುರಿಯಾಗಿಸಿಟ್ಟುಕೊಂಡು, ಹಣ ಮತ್ತು ವ್ಯಾಪಾರ ವಹಿವಾಟುಗಳ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳಲು ವೇಷ ಹಾಕಿಕೊಳ್ಳುವ ಡಾಂಭಿಕ ವ್ಯಕ್ತಿಯೋರ್ವನು ಎದುರಿಸುವ ಹಾಸ್ಯಮಯ ಸನ್ನಿವೇಶಗಳನ್ನು ಪೋಣಿಸಿ ಈ ನಾಟಕವನ್ನು ರಚಿಸಲಾಗಿದೆ. ಮೈಸೂರು ಪ್ರಾಂತ್ಯದ ಊರು ತೆರೆಕಣಾಂಬಿಗೆ ಅನ್ವಯಿಸಿ ಈ ನಾಟಕವನ್ನು ರೂಪಾಂತರಿಸಲಾಗಿದೆ.
ಮಂಜುನಾಥ್ ಎಲ್ ಬಡಿಗೇರ್ ಕಳೆದ ಹದಿನೈದು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರು “ನೀನಾಸಮ್ ರಂಗಶಿಕ್ಷಣ ಕೇಂದ್ರ” ದಲ್ಲಿ ಪದವಿ ಪಡೆದಿರುತ್ತಾರೆ. “ನೀನಾಸಮ್ ತಿರುಗಾಟ ದಲ್ಲಿ ನಟರಾಗಿ, “ಜಾನಪದ ಡಿಪ್ಲೊಮೊ ಪಡೆದಿದ್ದು, “ಉಡುಪಿಯ ಯಕ್ಷಗಾನ ಕೇಂದ್ರದಲ್ಲಿ ಶಾಸ್ತ್ರೀಯವಾಗಿ ಯಕ್ಷಗಾನ ಅಭ್ಯಾಸವನ್ನು ಮಾಡಿರುತ್ತಾರೆ.
ಹರಿಣಾಭಿಸರಣ, ಮಿಸ್. ಸದಾರಮೆ, ಪ್ರಮೀಳಾರ್ಜುನೀಯಂ, ಶೂದ್ರತಪಸ್ವಿ, ದಶಾನನ ಸಪ್ನಸಿದ್ಧಿ, ಸೀತಾಸ್ವಯಂವರಂ, ಚಿರಕುಮಾರ ಸಭಾ, ಚಿತ್ರಪಟ, ಪಂಚರಾತ್ರ ಇವರ ನಿರ್ದೇಶನದ ಪ್ರಮುಖ ನಾಟಕಗಳು.
ಸಮಷ್ಟಿ ತಂಡವು 2000 ದಲ್ಲಿ ಹುಟ್ಟಿಕೊಂಡ ತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ಇದರ ಉದ್ದೇಶ.
ಈವರೆಗೆ ಇದು “ಆಷಾಢದ ಒಂದು ದಿನ”, “ಸಾಂಬಶಿವ ಪ್ರಹಸನ”, “ಮೃಚ್ಛಕಟಿಕ”, “ಹದ್ದು ಮೀರಿದ ಹಾದಿ”, “ಅಲೆಗಳಲ್ಲಿ ರಾಜಹಂಸಗಳು”, “ಹರಿಣಾಭಿಸರಣ”, “ಕಥನ”, “ಮಿಸ್. ಸದಾರಮೆ” “ಕಥೆ ಹೇಳತೀವಿ” “ಸಾಫಲ್ಯ”, “ಅವಾಂತರ”, “ಶಾಂಡಿಲ್ಯ ಪ್ರಹಸನ” “ನಾಯೀಕತೆ”, “ಪ್ರಮೀಳಾರ್ಜುನೀಯಂ”, “ಚಿರಕುಮಾರ ಸಭಾ”, “ವಿಶಾಕೇ”, “ಚಿತ್ರಪಟ”, “ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ” ಮುಂತಾದ ನಾಟಕಗಳನ್ನು ಯಶಸ್ವಿಯಾಗಿ ರಂಗಕ್ಕೆ ತಂದಿದೆ, (ಏಜೆನ್ಸೀಸ್).