ಕಾಮಗಾರಿ ಕೈಗೊಳ್ಳದೆ ಬಿಲ್ ಪಾವತಿ ?

badroadwork
badroadwork
Published on

ಪ್ರಮುಖ ಮುಖ್ಯಾಂಶಗಳು

  • ಕೆಂಪೇಗೌಡ ಬಡಾವಣೆಯಲ್ಲಿ ಅವ್ಕಯವಹಾರ ಆರೋಪ
  • ಇಂಜಿನಿಯರ್ಸ್​​​ ಕಣ್ತಪ್ಪಿಸಿ ಹಣ ಮಂಜೂರು
  • ಬಿಡಿಎಗೆ ಕೋಟ್ಯಂತರ ರೂಪಾಯಿ ನಷ್ಟದ ಬಗ್ಗೆ ದೂರು
ಬೆಂಗಳೂರು: ಬಿಡಿಎ ನಿರ್ಮಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲೀಗ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿ ಅಕ್ರಮದ ಸದ್ದು ಕೇಳಿಬಂದಿದೆ. ಇಡೀ ಲೇಔಟ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲು ಆಹ್ವಾನಿಸಿದ್ದ ಟೆಂಡರ್‌ನಲ್ಲಿ ಗುತ್ತಿಗೆದಾರರು ನಿಗದಿತ ಕೆಲಸ ಮಾಡದೆ ಕೋಟ್ಯಂತರ ರೂ. ಮೊತ್ತದ ಬಿಲ್ ಮಂಜೂರು ಮಾಡಿಸಿಕೊಂಡಿದ್ದಾರೆ ಎಂಬ ದೂರು ಪ್ರಾಧಿಕಾರ ವಿಶ್ವಾಸಾರ್ಹತೆಗೆ ಧಕ್ಕೆ ತಂದಿದೆ.
ಏಳೆಂಟು ವರ್ಷದಿಂದ ಕುಂಟುತ್ತಾ ಸಾಗಿರುವ ಲೇಔಟ್‌ನಲ್ಲಿ ರಸ್ತೆ ನಿರ್ಮಾಣ ಆಮೆ ವೇಗದಲ್ಲಿ ನಡೆದಿದೆ. ರಸ್ತೆಗಳು ಪೂರ್ಣಗೊಳ್ಳದ ಕಾರಣ ನಿವೇಶನ ಆಕಾಂಕ್ಷಿಗಳು ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ದೊಡ್ಡ ಮೊತ್ತದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿಗಳಲ್ಲಿ ಹಲವು ರಸ್ತೆಗಳು ಟೆಂಡರ್‌ನಲ್ಲಿ ನಮೂದಿಸಿದ್ದ ಷರತ್ತಿನಂತೆ ನಿರ್ಮಾಣವಾಗಿಲ್ಲ. ಮಣ್ಣು ಸ್ಥಿರೀಕರಣ, ಜಲ್ಲಿ ರಸ್ತೆ, ಕಚ್ಛಾ ರಸ್ತೆ ಸೇರಿ ಡಾಂಬರು ಕಾರ್ಯವೂ ಸಮರ್ಪಕವಾಗಿ ನಡೆದಿಲ್ಲ. ಅರ್ಹತೆ ಇಲ್ಲದ ಗುತ್ತಿಗೆ ಕಂಪನಿಗೆ ಕೆಲಸ ವಹಿಸಿದ್ದರಿಂದ ಈ ರಾದ್ಧಾಂತ ನಡೆದಿದೆ ಎಂದು ಬಿಡಿಎ ಆಯುಕ್ತರಿಗೆ ಲಿಖಿತ ದೂರು ಸಲ್ಲಿಸಲಾಗಿದೆ.

389 ಕೋಟಿ ರೂ.ನಲ್ಲಿ ಅಕ್ರಮ?:

ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆಜಾಲವನ್ನು ಅಭಿವೃದ್ಧಿಪಡಿಸಲು 2023-24 ಹಾಗೂ 2024-25ನೇ ಸಾಲಿನಲ್ಲಿ 389.29 ಕೋಟಿ ರೂ. ಮೊತ್ತದ ಟೆಂಡರ್ ಆಹ್ವಾನಿಸಲಾಗಿದೆ. ಇವುಗಳನ್ನು 5 ಪ್ಯಾಕೇಜ್‌ಗಳಾಗಿ ವಿಂಗಡಿಸಿ ಗುತ್ತಿಗೆ ಕಂಪನಿಗೆ ವಹಿಸಲಾಗಿದೆ. ಪ್ರಸ್ತುತ ಅರ್ಧದಷ್ಟು ಕೆಲಸ ಆಗಿದ್ದು, ಮೂರನೇ ಸಂಸ್ಥೆಯಿಂದ ಪರಿಶೀಲನೆ ನಡೆಸುವ ಮುನ್ನವೇ ಬಿಲ್ ಪಾವತಿ ಮಾಡಲಾಗಿದೆ. ಬಾಕಿ ಕಾಮಗಾರಿಯೂ ಸಮರ್ಪಕವಾಗಿ ನಡೆಯದ ಬಗ್ಗೆ ಸೈಟ್ ಹಂಚಿಕೆದಾರರು ಹಾಗೂ ಎನ್‌ಪಿಕೆಎಲ್ ವೇದಿಕೆ ಬಿಡಿಎಗೆ ಪ್ರತ್ಯೇಕ ದೂರು ಸಲ್ಲಿಸಿದ್ದರೂ, ಗುಣಮಟ್ಟ ಕಾಯ್ದುಕೊಳ್ಳಲು ಅಧಿಕಾರಿ ವರ್ಗ ಗಮನ ಹರಿಸದಿರುವುದು ಅಕ್ರಮದಲ್ಲಿ ಭಾಗಿಯಾಗಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.

ಒಳರಸ್ತೆಗಳಲ್ಲಿ ಕಳಪೆ ಕಾಮಗಾರಿ:

2020ರಿಂದ ಬಡಾವಣೆಯ ವಿವಿಧೆಡೆ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಲೇಔಟ್ ಮಧ್ಯೆ ಹಾದುಹೋಗುವ 100 ಮೀ. ಅಗಲದ 10.79 ಕಿ.ಮೀ. ಉದ್ದದ ಮುಖ್ಯ ಆರ್ಟೀರಿಯಲ್ ರಸ್ತೆಗೆ (ಎಂಎಆರ್) ಪ್ರತ್ಯೇಕ ಟೆಂಡರ್ ಆಹ್ವಾನಿಸಲಾಗಿದೆ. ಜತೆಗೆ ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಹಾಗೂ ಬ್ಲಾಕ್‌ನಿಂದ ಬ್ಲಾಕ್‌ಗೆ ತೆರಳಲು ನಿರ್ಮಿಸಿರುವ 60 ಅಡಿ ಅಗಲದ ರಸ್ತೆಗಳು ಉತ್ತಮವಾಗಿದೆ. ಆದರೆ, 30, 40 ಹಾಗೂ 50 ಅಡಿ ಅಗಲದ ಒಳರಸ್ತೆಗಳ ಜಾಲ ಬಹುತೇಕ ಕಳಪೆಯಿಂದ ಕೂಡಿದೆ. ನೆಲವನ್ನು ಸಮತಟ್ಟು ಮಾಡದೆ, ವಾಹನಗಳ ಸಾಂದ್ರತೆಗೆ ಅನುಗುಣವಾಗಿ ಜಲ್ಲಿ, ಮರಳು, ಎಂ ಸ್ಯಾಂಡ್ ಬಳಸದ ಕಾರಣ ಆ ರೋಡ್‌ಗಳಲ್ಲಿ ಈಗಾಗಲೇ ಡಾಂಬರು ಪದರ ಕಳಚಿಕೊಳ್ಳುತ್ತಿವೆ. ಗುಣಮಟ್ಟ ಕಾಯ್ದುಕೊಳ್ಳದ ಕಾರಣ ಕಳಪೆ ಕಾಮಗಾರಿಯಿಂದ ರಸ್ತೆಗಳು ಕಳಪೆಯಾಗಿವೆ ಎಂಬ ಆಕ್ಷೇಪ ಕೇಳಿಬಂದಿದೆ.

ಅರ್ಹತೆ ಇಲ್ಲದ ಕಂಪನಿಗೆ ಗುತ್ತಿಗೆ:

ಲೇಔಟ್‌ನ ಒಳರಸ್ತೆಗಳನ್ನು ಏಕಕಾಲದಲ್ಲಿ ಅಭಿವೃದ್ಧಿಪಡಿಸಲು ವಿವಿಧ ಬ್ಲಾಕ್‌ಗಳನ್ನು ಒಟ್ಟುಗೂಡಿಸಿ ಟೆಂಡರ್ ವಹಿಸಲಾಗಿದೆ. ಆದರೆ, ಟೆಂಡರ್ ಸಲ್ಲಿಸಿದ್ದ ಕಂಪನಿಗಳ ಪೈಕಿ ಅರ್ಹತೆ ಇಲ್ಲದ ಕಂಪನಿಗೆ ಕಾಮಗಾರಿ ವಹಿಸಲಾಗಿದೆ. ದೊಡ್ಡ ಮೊತ್ತದ ಟೆಂಡರ್‌ನಿಂದಾಗಿ 5 ವರ್ಷದ ಹಿಂದೆ ನೋಂದಣಿಯಾಗಿರುವ ಕಂಪನಿಯು ವಾರ್ಷಿಕ 120 ಕೋಟಿ ರೂ. ವಹಿವಾಟು ನಡೆಸಿರಬೇಕು. ಜತೆಗೆ 80 ಕೋಟಿ ರೂ. ವೆಚ್ಚ ಮಾಡುವ ಸಾಮರ್ಥ್ಯವಿರಬೇಕು. 26 ಕೋಟಿ ರೂ. ನಗದು ವಹಿವಾಟಿಗೆ ಸಿದ್ಧರಿರಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ತಾಂತ್ರಿಕ ಹಾಗೂ ಹಣಕಾಸು ಅರ್ಹತೆ ಹೊಂದದ ಕಂಪನಿಗಳಿಗೆ ಎಲ್ಲ ಕಾಮಗಾರಿಯನ್ನು ವಹಿಸಲಾಗಿದೆ. ಬಹುತೇಕ ಷರತ್ತನ್ನು ಪೂರೈಸದಿದ್ದರೂ, ಕಾಮಗಾರಿ ವಹಿಸಿರುವುದು ಅಕ್ರಮ ನಡೆದಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸಾಮಾಜಿಕ ಕಾರ್ಯಕರ್ತ ಕೆ.ಎನ್. ಶರತ್‌ಬಾಬು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಸ್ತೆಗಳ ಅಭಿವೃದ್ಧಿಗೆ ಆಹ್ವಾನಿಸಿದ್ದ ಟೆಂಡರ್ ವಿವರ:

2023-24 52.32 ಕೋಟಿ ರೂ.
2023-24 52.39 ಕೋಟಿ ರೂ.
2023-24 52.35 ಕೋಟಿ ರೂ.
2023-24 38.15 ಕೋಟಿ ರೂ.
2023-24 26.09 ಕೋಟಿ ರೂ.
2024-25 167.96 ಕೋಟಿ ರೂ.
ಒಟ್ಟು 389.29 ಕೋಟಿ ರೂ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net