

ಬೆಂಗಳೂರು: ಆರ್.ಟಿ.ನಗರದ ದಿಣ್ಣೂರು ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉತ್ತರ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ದಿಣ್ಣೂರು ಮುಖ್ಯರಸ್ತೆಯು ಕಿರಿದಾಗಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು. ಜತೆಗೆ ದಿಣ್ಣೂರು ಮುಖ್ಯರಸ್ತೆಯ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಿಂದ ದೇವೇಗೌಡ ವೃತ್ತದವರೆಗಿನ ರಸ್ತೆಯಲ್ಲಿ ಕೆಲವು ಕಡೆ 9-10 ಮೀ. ಹಾಗೂ ಇನ್ನು ಕೆಲವೆಡೆ 6-7 ಮೀ. ಅಗಲವಿದ್ದು, ಅಸಮ ಪಥದಿಂದಾಗಿ ಟ್ರಾಫಿಕ್ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದರು.
ಅಲ್ಲದೆ, ದಿಣ್ಣೂರು ಮುಖ್ಯರಸ್ತೆಯ ಕಿರಿದಾದ ಬಾಟಲ್ ನೆಕ್ ಸ್ಥಳಗಳಲ್ಲಿ ಅಗತ್ಯವಿರುವ ಕಟ್ಟಡಗಳನ್ನು ಸ್ವಾಧೀನಪಡಿಸಿಕೊಂಡು ರಸ್ತೆ ಅಗಲೀಕರಣ ಮಾಡಲು ಸಾಧ್ಯವೇ ಎಂಬುದರ ಕುರಿತು ಪರಿಶೀಲಿಸಿ, ಶೀಘ್ರವೇ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯ ಅಭಿಯಂತರರಿಗೆ ನಿರ್ದೇಶನ ನೀಡಿದರು.
ಜಕ್ಕೂರು ಬಳಿಯ ಕೆ.ವಿ. ಜಯರಾಮ್ ರಸ್ತೆಯಲ್ಲಿ 2.1 ಕಿ.ಮೀ. ಉದ್ದದ ರಸ್ತೆಗೆ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ 250 ಮೀ. ಕಾಮಗಾರಿ ಪೂರ್ಣಗೊಂಡಿದೆ. ಕೃಷ್ಣ ಸಾಗರ್ ಹೋಟೆಲ್ ಬಳಿ ಫ್ರೀ ಲೆಫ್ಟ್ ನಿರ್ಮಿಸಿದರೆ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಈ ಬದಲಾವಣೆಯನ್ನು ಬೇಗನೆ ಅಳವಡಿಸಿಕೊಳ್ಳುವಂತೆ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.
ಟ್ಯಾನರಿ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಿರಿದಾದ ರಸ್ತೆಯಿರುವ ಸ್ಥಳದಲ್ಲಿ ವೆಂಕಟೇಶ್ವರಸ್ವಾಮಿ ದೇವಸ್ಥಾನ ಹಾಗೂ ಪಾಲಿಕೆಯ ಜಾಗವಿದೆ. ಈ ಸ್ಥಳದಲ್ಲಿ ರಸ್ತೆಯನ್ನು ಅಗಲೀಕರಣ ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ, ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ಜಿಬಿಎ ಮುಖ್ಯ ಅಭಿಯಂತರರಾದ ಡಾ. ರಾಘವೇಂದ್ರ ಪ್ರಸಾದ್, ಸಂಜೀವ್ ರಾಜ್, ಮಹದೇಶ್ ಉಪಸ್ಥಿತರಿದ್ದರು.
ಅಮೃತಹಳ್ಳಿ 18ನೇ ಅಡ್ಡರಸ್ತೆಯಲ್ಲಿ 700 ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಕಾಂಕ್ರೀಟ್ ಕಾಮಗಾರಿ ಪೂರ್ಣಗೊಂಡಿದೆ. ಬೆಸ್ಕಾಂ ಯುಟಿಲಿಟಿ ಶ್‌ಟಿ, ಬಫರ್ ಹಾಗೂ ಪಾದಚಾರಿ ಮಾರ್ಗ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಇದೇ ಸ್ಥಳದಲ್ಲಿ ಯೋಜನಾ ಅನುಷ್ಠಾನ ಕೋಶದಿಂದ ರಾಜಕಾಲುವೆ ಕಲ್ವರ್ಟ್ ಕಾಮಗಾರಿ ಪ್ರಗತಿಯಲ್ಲಿದ್ದು, ರಸ್ತೆ ಮಟ್ಟಕ್ಕಿಂತ ಎತ್ತರವಾಗಿ ನಿರ್ಮಿಸಿರುವುದನ್ನು ಗಮನಿಸಿದ ಮುಖ್ಯ ಆಯುಕ್ತರು, ಅದನ್ನು ರಸ್ತೆ ಮಟ್ಟಕ್ಕೆ ನಿರ್ಮಿಸುವಂತೆ ಸೂಚಿಸಿದರು.