

ಬೆಂಗಳೂರು: ರಾಜಧಾನಿಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡ ಬಳಿಕವೂ ವಿಶೇಷ ಅಭಿಯಾನ ಹಾಗೂ ಶಿಬಿರಗಳನ್ನು ಆಯೋಜಿಸಿ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಬಿಎ ಚುನಾವಣಾ ವಿಭಾಗದ ವಿಶೇಷ ಆಯುಕ್ತೆ ಶಿಲ್ಪಾ ನಾಗ್ ತಿಳಿಸಿದರು.
ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಎಸ್‌ಐಆರ್ ಕುರಿತು ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿಮಗಳ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ. ಆ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದ ಅರ್ಹ ವ್ಯಕ್ತಿಗಳು ಹಾಗೂ 18 ವರ್ಷ ಪೂರ್ಣಗೊಂಡ ಮೊದಲ ಬಾರಿಗೆ ಮತದಾರರಾಗಿ ನೋಂದಾಯಿಸಿಕೊಳ್ಳಲು ನಮೂನೆ-6 ಸಲ್ಲಿಸಿ ಮತಪಟ್ಟಿಗೆ ಸೇರ್ಪಡೆಯಾಗಲು ಚುನಾವಣಾ ಆಯೋಗವು ಅವಕಾಶ ನೀಡಿದೆ ಎಂದು ಸ್ಪಷ್ಟಪಡಿಸಿದರು.
ಜಿಬಿಎ ಒಳಗೊಂಡ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 56.99 ಲಕ್ಷ ಮತದಾರರಿದ್ದು, 24 ಲಕ್ಷಕ್ಕೂ ಅಧಿಕ ನೋಟಿಸ್ ಜನರೇಟ್ ಮಾಡಲಾಗಿದೆ. ಈಗಾಗಲೇ ಶೇ.100ರಷ್ಟು ನೋಟಿಸ್ ವಿತರಿಸಿದ್ದು, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳುವ ಹಿನ್ನೆಲೆ ಈವರೆಗೆ 21 ಲಕ್ಷ ವಿಚಾರಣೆ ಪೂರ್ಣಗೊಳಿಸಿದ್ದು, 3.70 ಲಕ್ಷ ಮಾತ್ರ ಬಾಕಿ ಇದೆ. ನಿಗದಿತ ಅವಧಿಯೊಳಗೆ ವಿಚಾರಣಾ ಪೂರ್ಣಗೊಳಿಸಲು ಮೈಕ್ರೋ ಪ್ಲಾನಿಂಗ್ ಮಾಡಲಾಗಿದೆ ಎಂದರು.
ನಮೂನೆ-6, 7 ಮತ್ತು 8ಕ್ಕೆ ಸಂಬಂಧಿಸಿ ಈವರೆಗೆ ಒಟ್ಟು 5,42,893 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 1,02,712 ಅರ್ಜಿಗಳನ್ನು ಅಂಗೀಕರಿಸಿದ್ದು 3,89,698 ಅರ್ಜಿಗಳು ಬಾಕಿ ಇವೆ. ಚುನಾವಣಾ ಆಯೋಗದ ನಿಯಮದಂತೆ ಕ್ರಮ ಕೈಗೊಂಡು ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಎಸ್‌ಐಆರ್ ಪ್ರಕ್ರಿಯೆ ಸುಗಮವಾಗಿ ನಡೆಯಲು ಮಹಾನಗರದಲ್ಲಿ ಒಟ್ಟು 814 ವಿಚಾರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೆಚ್ಚುವರಿಯಾಗಿ 1,117 ಸಹಾಯಕ ಚುನಾವಣಾ ನೋಂದಣಾಧಿಕಾರಿಗಳನ್ನು (ಎಇಆರ್‌ಒ) ನೇಮಿಸಿರುವುದರಿಂದ ಇವರ ಒಟ್ಟು ಸಂಖ್ಯೆ 1,193ಕ್ಕೆ ಏರಿದಂತಾಗಿದೆ. ಹೀಗಾಗಿ ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಶಿಲ್ಪಾ ನಾಗ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾ ಚುನಾವಣಾಧಿಕಾರಿ (ದಕ್ಷಿಣ) ಕೆ.ಎನ್. ರಮೇಶ್, ಸಹಾಯಕ ಆಯುಕ್ತ ವಿಜಯ್ ಉಪಸ್ಥಿತರಿದ್ದರು.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮ್ಯಾಪಿಂಗ್ ಆಗದ ಅಥವಾ ತಾಂತ್ರಿಕ ಕಾರಣದಿಂದ ನೋಟಿಸ್ ನೀಡಿದ್ದಲ್ಲಿ ಅಥವಾ ನಮೂನೆ-6, 7ಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ಅಗತ್ಯವಿದ್ದಲ್ಲಿ, ಇಆರ್‌ಒ ಅಥವಾ ಬಿಎಲ್‌ಒ ಸಂಬಂಧಪಟ್ಟ ವೋಟರ್ಸ್ ಮನೆಗೆ ಭೇಟಿ ನೀಡಿ ಪರಿಶೀಲನೆ ಕೈಗೊಂಡು ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ. ಹಾಗಾಗಿ ಅಂತಹ ಮತದಾರರು ವಿಚಾರಣೆಗೆ ಖುದ್ದು ಹಾಜರಾಗುವ ಅಗತ್ಯವಿಲ್ಲ ಎಂದು ವಿಶೇಷ ಆಯುಕ್ತರು ತಿಳಿಸಿದರು.