ತೈಲ ಕಂಪನಿಗಳ ಇಂಧನ ಪರೀಕ್ಷೆ ಒಪ್ಪಲಸಾಧ್ಯ

ತೈಲ ಕಂಪನಿಗಳು ತಮ್ಮದೇ ಇಂಧನವನ್ನು ತಮ್ಮದೇ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ಸರಿ ಇದೆ ಎಂದು ತಾವೇ ಘೋಷಿಸಿಕೊಂಡರೆ ಅದು ಆರೋಪಿಯೇ ನ್ಯಾಯಾಧೀಶನಾಗಿ ವರ್ತಿಸಿದಂತೆ ಆಗುತ್ತದೆ. ಹೀಗಾಗಿ ಮೂರನೇ ಪಾರ್ಟಿ ಪರೀಕ್ಷೆ ಸೂಕ್ತ ಎಂದು ಆಹಾರ ಮತ್ತು ನಾಗರಿಕ ಪೂರೈಕೆ, ಮಾಪನ ಶಾಸ್ತ್ರ ಸಚಿವ ರಿಜ್ವಾನ್​ ಅರ್ಷದ್​ ಪ್ರತಿಪಾದಿಸಿದರು.
E20-Petrol
ರಿಜ್ವಾನ್​ ಅರ್ಷದ್ , ಸಚಿವರು.
Published on: 

ಬೆಂಗಳೂರು: ಪೆಟ್ರೋಲ್-ಎಥೆನಾಲ್ ಮಿಶ್ರಣ ಕುರಿತಂತೆ ತೈಲ ಕಂಪನಿಗಳು ನಡೆಸುವ ಪರೀಕ್ಷೆ ಒಪ್ಪಲು ಸಾಧ್ಯವಿಲ್ಲ ಎಂದಿರುವ ರಾಜ್ಯಸರ್ಕಾರ ಮಾನ್ಯತೆ ಹೊಂದಿದ ಮೂರನೇ ಪಾರ್ಟಿಯಿಂದ ತಪಾಸಣೆಗೆ ಒಳಪಡಿಸಿ ಎಂದು ಆಗ್ರಹಿಸಿದೆ.

ಇಂಧನ ಪರೀಕ್ಷಾ ವ್ಯವಸ್ಥೆಯನ್ನು ತೈಲ ಕಂಪನಿಗಳ ನಿಯಂತ್ರಣದಿಂದ ಹೊರಗಿಡುವಂತೆ ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ಆಹಾರ, ನಾಗರಿಕ , ಕಾನೂನು ಮಾಪನ ಶಾಸ್ತ್ರ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಸೋಮವಾರ ಸುದ್ದಿಗೊಷ್ಠಿಯಲ್ಲಿ ತಿಳಿಸಿದರು.

ತೈಲ ಕಂಪನಿಗಳು ತಮ್ಮದೇ ಇಂಧನವನ್ನು ತಮ್ಮದೇ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಿ, ಸರಿ ಇದೆ ಎಂದು ತಾವೇ ಘೋಷಿಸಿಕೊಂಡರೆ ಅದು ಆರೋಪಿಯೇ ನ್ಯಾಯಾೀಶನಾಗಿ ವರ್ತಿಸಿದಂತೆ ಆಗುತ್ತದೆ. ಹೀಗಾಗಿ ಮೂರನೇ ಪಾರ್ಟಿ ಪರೀಕ್ಷೆ ಸೂಕ್ತ ಎಂದು ಪ್ರತಿಪಾದಿಸಿದರು.

ಇಂಧನ ಖರಿದಿಸುವ ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಸಂಬಂಧ ಕೈಗೊಳ್ಳಬಹುದಾದ ಕ್ರಮಗಳ ಕುರಿತು ನಿರ್ಧರಿಸಲು ಸದ್ಯದಲ್ಲೇ ತೈಲ ಮಾರುಕಟ್ಟೆ ಕಂಪನಿಗಳ ಸಭೆ ಕರೆಯಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯದ ವಿವಿದ ಪೆಟ್ರೋಲ್ ಬಂಕ್‌ಗಳಲ್ಲಿ 63 ಸ್ಯಾಂಪಲ್‌ಗಳನ್ನು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾದ ಎನ್‌ಎಬಿಎಲ್ ನಿಂದ ಪರೀಕ್ಷೆಗೆ ಒಳಪಡಿಸಿದಾಗ ಶೇ.31ರಷ್ಟು ಇಥೆನಾಲ್ ಮಿಶ್ರಣ ಆಗಿರುವುದು ದೃಢಪಟ್ಟಿದೆ.

ಸರ್ಕಾರ ತನ್ನ ಪರೀಕ್ಷಾ ಫಲಿತಾಂಶ ಮತ್ತು ಅವುಗಳ ಆಧಾರದ ಮೇಲೆ ವ್ಯಕ್ತಪಡಿಸಿರುವ ನಿಲುವಿಗೆ ಈಗಲೂ ಬಧ್ಧವಾಗಿದೆ. ಉದ್ಯಮ ಸಂಸ್ಥೆಗಳು ಒತ್ತಡಕ್ಕೆ ಮಣಿದು ತಮ್ಮ ನಿಲುವು ಬದಲಿಸಬಹುದು ಆದರೆ ಸರ್ಕಾರ ಹಾಗೆ ಮಾಡುವುದಿಲ್ಲ ಎಂದರು.

ತೈಲ ಕಂಪನಿಗಳು ಬಿಡುಗಡೆ ಮಾಡಿರುವ ಜಂಟಿ ಹೆಳಿಕೆಯಲ್ಲಿ ತಾಂತ್ರಿಕ ಅಂಶಗಳ ಕುರಿತು ದೀರ್ಘ ವಿವರಣೆ ಇದೆಯೇ ಹೊರತು ಪೆಟ್ರೋಲ್‌ನಲ್ಲಿ ವಾಸ್ತವವಾಗಿ ಎಷ್ಟು ಪ್ರಮಾಣದ ಎಥೆನಾಲ್ ಇದೆ ಎಂಬ ಮೂಲ ಪ್ರಶ್ನೆಗೆ ಉತ್ತರವಿಲ್ಲ.

ಪರೀಕ್ಷಾ ವಿಧಾನ ಕುರಿತು ತಾಂತ್ರಿಕ ಕಾರಣ ನೀಡಿ ನಮ್ಮನ್ನು ಕನ್‌ಫ್ಯೂಸ್ ಮಾಡಲು ಹೊರಟಿದ್ದಾರೆ. ನಾವು ಅಷ್ಟು ಸುಲಭವಿಲ್ಲ. ಮಾರ್ಗಸೂಚಿಗಳ ಅನ್ವಯವೇ ಗ್ಯಾಸ್ ಕ್ರೊಮೆಟೋಗ್ರಫಿ ಬಳಸಿಯೇ ಪರೀಕ್ಷೆ ಮಾಡಿಸಿದ್ದೇವೆ ಎಂದು ತಿರುಗೇಟು ನೀಡಿದರು.

*ಎಲ್ಲ ರಾಜ್ಯಗಳು ದನಿ ಎತ್ತಬೇಕು* ಬಾಕ್ಸ್

ಪೆಟ್ರೋಲ್‌ನಲ್ಲಿ ಹೆಚ್ಚುವರಿ ಎಥೆನಾಲ್ ಮಿಶ್ರಣ ಆಗುತ್ತಿರುವುದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ. ಇದು ದೇಶದ ಎಲ್ಲ ರಾಜ್ಯಗಳ ಸಮಸ್ಯೆ ಹೀಗಾಗಿ ಎಲ್ಲ ರಾಜ್ಯಗಳು ಧ್ವನಿ ಎತ್ತಬೇಕು ಎಂದು ಸಚಿವ ರಿಜ್ವಾನ್ ಮನವಿ ಮಾಡಿದರು.

ಕಾಂಗ್ರೆಸ್- ಬಿಜೆಪಿ ಆಡಳಿತವಿರುವ ರಾಜ್ಯಗಳು ಎಂಬ ಭೇದ ತೋರದೆ ಆಯಾ ರಾಜ್ಯಗಳ ಜನರ ಹಿತದೃಷ್ಟಿಯಿಂದ ಎಲ್ಲರೂ ತಪಾಸಣೆ ಮಾಡಿಸಬೇಕು. ಈಗಾಗಲೇ ಕೇರಳ ಪರೀಕ್ಷೆಗೆ ಮುಂದಾಗಿದೆ ಎಂದು ತಿಳಿಸಿದರು.

ತೈಲ ಕಂಪನಿಗಳ ವಾದ ತಿರಸ್ಕರಿಸಿದ ಸರ್ಕಾರ

ಮಾದರಿ ಸಂಗ್ರಹಣೆ ಕಾನೂನುಬದ್ಧವಿಲ್ಲ, ಮಾನದಂಡ ಪಾಲನೆ ಮಾಡಿಲ್ಲ, ಪರೀಕ್ಷಾ ವಿಧಾನ ಸರಿಯಿಲ್ಲ ಎಂಬ ತೈಲ ಕಂಪನಿಗಳ ವಾದವನ್ನು ಸರ್ಕಾರ ತಿರಸ್ಕರಿಸಿದೆ.

ಆರಂಭದಲ್ಲಿ ಸಂಗ್ರಹಿಸಿದ್ದ 63 ಮಾದರಿಗಳನ್ನು ಐಒಸಿಲ್, ಬಿಪಿಸಿಎಲ್, ಎಚ್‌ಪಿಸಿಎಲ್ ಕಂಪನಿಗಳ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ಕಳುಹಿಸಿದರೆ ಅವಾವೂ ಎಥೆನಾಲ್ ಪ್ರಮಾಣ ನಮೂದಿಸಿರಲಿಲ್ಲ.

ತೈಲ ಕಂಪನಿಗಳ ಪ್ರಯೋಗಾಲಯಗಳು ಅಗತ್ಯಲಿತಾಂಶ ಒದಗಿಸಲು ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ (ಎನ್‌ಎಬಿಎಲ್ )ಮೂರನೇ ಪಾರ್ಟಿಗೆ ಪರೀಕ್ಷಾ ಹೊಣೆ ವಹಿಸಿತು. ಪರೀಕ್ಷೆ ಕುರಿತ ನಮ್ಮ ವಿಶ್ವಾಸಾರ್ಹತೆ ಪ್ರಶ್ನಿಸಲು ಯಾವುದೇ ಆಧಾರವಿಲ್ಲ ಎಂದು ತಿರುಗೇಟು ನೀಡಲಾಗಿದೆ.

ಮುಖ್ಯಾಂಶಗಳು

- ತಾವೇ ಪರೀಕ್ಷೆ ನಡೆಸಿ ತಾವೇ ಸರ್ಟಿಫಿಕೆಟ್ ಪಡೆದರೆ ಹೇಗೆ ?

- ಇಂಧನ ಪರೀಕ್ಷೆ ತೈಲ ಕಂಪನಿಗಳಿಂದ ಹೊರಗಿಡಲು ಆಗ್ರಹ

- ಮೂರನೇ ಪಾರ್ಟಿ ತಪಾಸಣೆಗೆ ಸರ್ಕಾರ ಪ್ರತಿಪಾದನೆ