

ಬೆಂಗಳೂರು: ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಗಳಿಂದ ವಿಧಾನ ಪರಿಷತ್ನ ಒಟ್ಟು ನಾಲ್ಕು ಸ್ಥಾನಗಳಿಗೆ ನಡೆದಿದ್ದ ದ್ವೆವಾರ್ಷಿಕ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ಎನ್ಡಿಎ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿ ಜಯಗಳಿಸಿದ್ದು ಇನ್ನೆರೆಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಪಕ್ಷ ಬೆಂಗಳೂರು ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದು ಇನ್ನುಳಿದ ಎರಡೂ ಪದವೀಧರ ಕ್ಷೇತ್ರಗಳಲ್ಲೂ ಸೋಲಿನ ಹಾದಿ ಹಿಡಿಯುವ ಮೂಲಕ ತೀವ್ರ ಮುಖಭಂಗ ಅನುಭವಿಸಿದೆ.
ಈ ಹಿಂದೆ ನಾಲ್ಕು ಕ್ಷೇತ್ರಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ಉಳಿದ ಮೂರಲ್ಲಿ ಬಿಜೆಪಿ ಸದಸ್ಯರಿದ್ದರು. ಈ ಬಾರಿಯೂ ಬಿಜೆಪಿ ಮೂರೂ ಸ್ಥಾನ ಉಳಿಸಿಕೊಳ್ಳುವ ದಾರಿಯಲ್ಲಿದೆ. ಕಾಂಗ್ರೆಸ್ ಇದ್ದೊಂದು ಸ್ಥಾನವನ್ನೂ ಕಳೆದುಕೊಂಡಿದೆ. ಜೆಡಿಎಸ್ ಒಂದು ಸ್ಥಾನ ಗಳಿಸಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಎನ್ಡಿಎ ಅಭ್ಯರ್ಥಿ ಜೆಡಿಎಸ್ನ ಎ.ಪಿ.ರಂಗನಾಥ್ ಕಾಂಗ್ರೆಸ್ನ ಪುಟ್ಟಣ್ಣ ವಿರುದ್ಧ 908 ಮತಗಳ ಅಂತರದಿಂದ ಜಯಗಳಿಸುವ ಮೂಲಕ ಕಳೆದ ಬಾರಿಯ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ.
ಆರಂಭದಿಂದ - ಅಂತ್ಯದವರೆಗೆ ಇಬ್ಬರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು.ಮತ ಎಣಿಕೆಯ ಅಂತ್ಯದಲ್ಲಿ ಎ.ಪಿ. ರಂಗನಾಥ್ 10810 ಮತಗಳನ್ನು ಪಡೆದರೆ, ಆರನೇ ಗೆಲುವಿನ ನಿರೀಕ್ಷೆಯಲ್ಲಿದ್ದ ಪುಟ್ಟಣ್ಣ 9902 ಮತಗಳನ್ನು ಪಡೆದರು.
ಆರಂಭಿಕ ಸುತ್ತಿನಲ್ಲಿ ಪುಟ್ಟಣ್ಣ ಮುನ್ನಡೆ ಸಾಧಿಸಿದ್ದರಾದರೂ ಆನಂತರದ ಸುತ್ತುಗಳಲ್ಲಿ ಪುಟ್ಟಣ್ಣ ಅವರನ್ನು ಹಿಂದಿಕ್ಕಿದ ರಂಗನಾಥ್ ಮುನ್ನಡೆ ಸಾಧಿಸುತ್ತ ಗೆಲುವಿನ ನಗೆ ಬೀರಿದರು. 21056 ಮತಗಳು ಮಾನ್ಯವಾಗಿದ್ದು 1857 ಮತಗಳು ತಿರಸ್ಕೃತವಾಗಿವೆ ಎಂದು ಚುನಾವಣಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ತವರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶಶಿಲ್ ಜಿ.ನಮೋಶಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರು ವಿರುದ್ಧ 3297 ಮತಗಳ ಅಂತರದಿಂದ ಭರ್ಜರಿ ಜಯಗಳಿಸುವ ಮೂಲಕ ಐದನೇ ಬಾರಿಗೆ ವಿಧಾನ ಪರಿಷತ್ ಪ್ರವೇಶಿಸಿದ್ದಾರೆ.
ಚಲಾವಣೆಯಾದ 30,253 ಮತಗಳಲ್ಲಿ ಶಶೀಲ್ ಜಿ.ನಮೋಶಿ 15,596 ಮತ ಪಡೆದರೆ, ಪ್ರತಿಸ್ಪರ್ಧಿ ಶರಣಪ್ಪ ಮಟ್ಟೂರು 12,299 ಮತ ಪಡೆದರು. ಮತ ಎಣಿಕೆಯ ಮೊದಲ ಸುತ್ತಿನಿಂದ ಅಂತಿಮ ಸುತ್ತಿನವರೆಗೂ ನಮೋಶಿ ಮುನ್ನಡೆ ಸಾಧಿಸಿದುತ್ತ ಬಂದರು.
ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಸ್ಪರ್ಧಿಸಿದ್ದ 11 ಪಕ್ಷೇತರ ಅಭ್ಯರ್ಥಿಗಳು 485 ಮತಗಳನ್ನಷ್ಟೇ ಪಡೆದರು. ಒಟ್ಟು 1873 ಮತಗಳು ಅಸಿಂಧುವಾಗಿವೆ.
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರು ಹ್ಯಾಟ್ರಿಕ್ ಗೆಲುವಿನ ಹಾದಿಯಲ್ಲಿ ಸಾಗಿದ್ದಾರೆ. ಮೊದಲ ಮೂರು ಸುತ್ತಿನಲ್ಲಿ 18811 ಮತ ಪಡೆದಿದ್ದರೆ ಎದುರಾಳಿ ಕಾಂಗ್ರೆಸ್ನ ಮೋಹನ್ ಲಿಂಬಿಕಾಯಿ 13886 ಮತ ಪಡೆದು ಹಿನ್ನಡೆ ಅನುಭವಿಸಿದ್ದರು.
ನಾಲ್ಕನೇ ಸುತ್ತಿನ ಮತ ಎಣಿಕೆ ಬಳಿಕ ಬಿಜೆಪಿ 6532 ಮತಗಳ ಮುನ್ನಡೆ ಸಾಧಿಸಿತ್ತು. ಇನ್ನೊಂದು ಸುತ್ತಿನ ಮತ ಎಣಿಕೆ ಬಾಕಿ ಇದೆ. ಪ್ರತಿ ಸುತ್ತಿನಲ್ಲಿ 14 ಸಾವಿರ ಮತಗಳು ಎಣಿಕೆ ಆಗುತ್ತವೆ. ಮೊದಲ ನಾಲ್ಕು ರೌಂಡ್ನಲ್ಲಿ ಬಿಜೆಪಿ ಉತ್ತಮ ಮುನ್ನಡೆ ಸಾಧಿಸಿದೆ.
ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ್ ಅವರು ಕಾಂಗ್ರೆಸ್ನ ಶಶಿಧರ್ ಹಲಿಕುಂಟೆ ಅವರಿಗಿಂತ 5410 ಮತಗಳಿಂದ ಮುಂದಿದ್ದರು. ಮೂರನೇ ಸುತ್ತಿನ ಮತ ಎಣಿಕೆ ಮುಗಿದಾಗ ಬಿಜೆಪಿ 19878 ಮತ ಪಡೆದಿದ್ದರೆ ಕಾಂಗ್ರೆಸ್ 14468 ಮತ ಪಡೆದಿದ್ದರು. ಇನ್ನೂ ಏಳು ಸುತ್ತಿನ ಮತ ಎಣಿಕೆ ಬಾಕಿ ಇದ್ದು ಬೆಳಗಿನ ಜಾವದ ವರೆಗೆ ನಡೆಯುವ ನಿರೀಕ್ಷೆ ಇದೆ.