ಮ್ಯುಟೇಷನ್ ಇನ್ನಷ್ಟು ಸುಲಭ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ರಾಜ್ಯದಲ್ಲಿ ಸ್ಥಿರಾಸ್ತಿ ಖರೀದಿದಾರರಿಗೆ ಸ್ವಯಂಚಾಲಿತ ಮ್ಯುಟೇಷನ್‌ಗೆ (Mutation) ಅವಕಾಶ ಮಾಡಿಕೊಡುವ ಮೂಲಕ ಹಕ್ಕು ವರ್ಗಾವಣೆ ವ್ಯವಸ್ಥೆಯನ್ನು ಕಂದಾಯ ಇಲಾಖೆ ಇನ್ನಷ್ಟು ಸರಳೀಕರಣಗೊಳಿಸಿದೆ. ಸಬ್‌ರಿಜಿಸ್ಟ್ರಾರ್ ಕಚೇರಿಯಿಂದ ಜೆ-ಸ್ಲಿಪ್ ಬಂದ ಮೇಲೆ ನಿಗದಿತ ಸಮಯದಲ್ಲಿ ಯಾವುದೇ ಆಕ್ಷೇಪಣೆ ಬರದಿದ್ದಲ್ಲಿ ಕಂದಾಯ ನಿರೀಕ್ಷಕರ (ರೆವಿನ್ಯೂ ಇನ್‌ಸ್ಪೆಕ್ಟರ್,ಆರ್‌ಐ) ಬೆರಳಚ್ಚು ಒಪ್ಪಿಗೆ ಇಲ್ಲದೆಯೇ ಮ್ಯುಟೇಷನ್ (ಭೂ ಮಾಲೀಕತ್ವ) ಖಾತಾ ಸ್ವಯಂಚಾಲಿತವಾಗಿ ವರ್ಗಾವಣೆಯಾಗಲಿದೆ.
ಈ ಮೊದಲು ಸಬ್‌ರಿಜಿಸ್ಟ್ರಾರ್ ಕಚೇರಿಯಿಂದ ಜೆ-ಸ್ಲಿಪ್ ಬಂದ ಮೇಲೆ ಪಕ್ಷಕಾರರಿಗೆ ನೋಟಿಸ್ ನೀಡಲಾಗುತ್ತಿತ್ತು. ಆ ಬಳಿಕ ಆಕ್ಷೇಪಣೆ ಬಾರದೆ ಇದ್ದಲ್ಲಿ ಆರ್‌ಐ ಬೆರಳಚ್ಚು ಕೊಟ್ಟು ಮ್ಯುಟೇಷನ್ ವರ್ಗಾವಣೆ ಮಾಡಲಾಗುತ್ತಿತ್ತು. ಈ ವ್ಯವಸ್ಥೆಗೀಗ ಬ್ರೇಕ್ ಬಿದ್ದಿದೆ. ಪರಿಣಾಮ ಲಂಚಕ್ಕೆ ಬೇಡಿಕೆ, ಅನಗತ್ಯವಾಗಿ ಸಮಯ ಮುಂದೂಡುವುದು ಮತ್ತು ಕಚೇರಿಗೆ ಅಲೆಯುವುದು ತಪ್ಪಲಿದೆ.
ಸ್ಥಿರಾಸ್ತಿಗಳ ದಾಖಲೆ ವರ್ಗಾವಣೆಯಲ್ಲಿ ಮೂರು ವರ್ಗಗಳಿವೆ. ಮೊದಲನೆಯದು ಆಕ್ಷೇಪಣೆ ಕರೆಯಲು ಯಾವುದೇ ಸೂಚನೆ ಅವಧಿ ಇಲ್ಲದೆ ಇರುವುದು. ಇದರಲ್ಲಿ ಸ್ವಯಂಚಾಲಿತವಾಗಿ ಮ್ಯುಟೇಷನ್ ಸೃಜನೆ ಆಗಲಿದೆ. ಈ ವರ್ಗದಲ್ಲಿ ಬ್ಯಾಂಕ್ ಸಾಲಗಳು, ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ಮತ್ತು ಅಡಮಾನ ಸಂಬಂಧ ಆಸ್ತಿ ದಾಖಲೆ ಪತ್ರಗಳಲ್ಲಿ ಸ್ವಯಂ ಚಾಲಿತವಾಗಿ ನಮೂದು ಮಾಡಲಾಗುತ್ತಿದೆ. ಈ ವ್ಯವಸ್ಥೆಯನ್ನು ಎಂಟು ತಿಂಗಳ ಹಿಂದೆ ಜಾರಿಗೆ ತರಲಾಗಿತ್ತು.
ಇದಾದ ಮೇಲೆ 2ನೇ ವರ್ಗದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಗುವ ಕ್ರಯ ಪತ್ರ ಸೇರಿದಂತೆ ಎಲ್ಲ ನೋಂದಣಿಯಾಗಿ ಬರುವ ಜೆ-ಸ್ಲಿಪ್ ಆಧಾರದ ಮೇಲೆ ಹಕ್ಕು ವರ್ಗಾವಣೆಗೆ 7 ದಿನಗಳ ಅವಧಿ ನಿಗದಿ ಮಾಡಲಾಗಿತ್ತು. 3ನೇ ವರ್ಗದಲ್ಲಿ ಭೌತಿಕ ದಾಖಲೆ ಅಂದರೆ ಕೋರ್ಟ್ ಆದೇಶ, ಪೌತಿ ಖಾತೆ, ವಿಲ್ ಆಧಾರದ ಮೇಲೆ ಹಕ್ಕು ವರ್ಗಾವಣೆಗೆ 15 ದಿನಗಳ ಆಕ್ಷೇಪಣಾ ಅವಧಿ ನಿಗದಿ ಮಾಡಲಾಗಿತ್ತು.
2 ಮತ್ತು 3ನೇ ವರ್ಗದಲ್ಲಿಯೂ ಶೇ.90 ಹಕ್ಕು ವರ್ಗಾವಣೆಗೆ ಆಕ್ಷೇಪಗಳೇ ಬರುವುದಿಲ್ಲ. ಇನ್ನು ಶೇ.5 ಅಥವಾ 10 ಮಾತ್ರ ಆಕ್ಷೇಪಣೆಗಳು ಬರುತ್ತಿದ್ದವು. ಆದರೆ, ಕಂದಾಯ ನಿರೀಕ್ಷಕರು ಹಕ್ಕು ವರ್ಗಾವಣೆಗೆ (ಮ್ಯುಟೇಷನ್ ಸೃಜನೆ) ಬೆರಳಚ್ಚು ಕೊಡದೆ ಸಮಯ ವ್ಯರ್ಥ ಮಾಡುತ್ತಿದ್ದರು.
ಆದರಿಂದ ಸ್ವಯಂ ಚಾಲಿತ ಮ್ಯುಟೇಷನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಈ ಪ್ರಕಾರ ನಿಗದಿತ ಸಮಯದ ಒಳಗೆ ಆಕ್ಷೇಪಣೆ ಬಾರದೆ ಇದ್ದರೆ 7ನೇ ದಿನ ಅಥವಾ 15 ದಿನ ಪೂರ್ಣವಾಗಿ 8ಕ್ಕೆ ಅಥವಾ 16ನೇ ದಿನಕ್ಕೆ ಸ್ವಯಂ ಚಾಲಿತವಾಗಿ ಮ್ಯುಟೇಷನ್ ಸೃಜನೆಯಾಗಿ ಹಕ್ಕು ವರ್ಗಾವಣೆ ಆಗಲಿದೆ. ತಹಸೀಲ್ದಾರ್ ಡಿಜಿಟಲ್ ಸಹಿಯೊಂದಿಗೆ ಖಾತಾ ವರ್ಗಾವಣೆಯಾಗಲಿದೆ. ಈ ಲಿಂಕ್‌ಗಳನ್ನು ಸಂಬಂಧಪಟ್ಟ ಪಕ್ಷಕಾರರಿಗೆ ಇ-ಮೇಲ್ ಮತ್ತು ಮೊಬೈಲ್‌ಗೆ ಸಂದೇಶ ಹೋಗಲಿದೆ. ವಾರಸುದಾರರು ಇದ್ದಲಿಯೇ ಖಾತಾ ಅಥವಾ ಪಹಣಿ ಡೌನ್‌ಲೋಡ್ ಮಾಡಿಕೊಳ್ಳಬಹುದು.ಇದು ಐತಿಹಾಸಿಕ ಬದಲಾವಣೆಯಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಆಕ್ಷೇಪಣೆಗಳು ಬಂದರೆ?

ನಿಗದಿತ ಸಮಯದಲ್ಲಿ ಆಕ್ಷೇಪಣೆ ಬಂದರೆ ಅಥವಾ ಕೋರ್ಟ್‌ನಲ್ಲಿ ತಡೆಯಾಜ್ಞೆ ಇದ್ದರೆ ಅಂತಹ ಮ್ಯುಟೇಷನ್ ಅನ್ನು ರೆವಿನ್ಯೂ ಇನ್‌ಸ್ಪೆಕ್ಟರ್ ತಡೆಯಬಹುದು. ವಂಚನೆ, ನಕಲಿ ದಾಖಲೆ ಅಥವಾ ಕಾನೂನು ಉಲ್ಲಂಘನೆ ಆಗಿರುವುದು ಕಂಡುಬಂದಲ್ಲಿ ಮ್ಯುಟೇಷನ್ ಪರಿಷ್ಕರಿಸಲು, ಸರಿಪಡಿಸಲು ಅಥವಾ ರದ್ದುಗೊಳಿಸಲು ಅಧಿಕಾರಿಗಳಿಗೆ ಅಧಿಕಾರ ಇರಲಿದೆ.


90 ದಿನಗಳಲ್ಲಿ ವಿಲೇವಾರಿ

ಮ್ಯುಟೇಷನ್ ಸೃಜನೆಗೆ ಆಕ್ಷೇಪಣೆ ಬಂದರೆ ಅಂತಹ ಪ್ರಕರಣಗಳು ಕಂದಾಯ ನ್ಯಾಯಾಲಯಗಳಿಗೆ ವರ್ಗಾವಣೆ ಆಗಲಿವೆ. ಇಲ್ಲಿಯೂ ಸಹ 3 ತಿಂಗಳ ಒಳಗಾಗಿ ವಿವಾದ ವಿಲೇವಾರಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅನುಕೂಲಗಳೇನು?

- ಭೂಮಿ, ಕಾವೇರಿ 2.0, ಡಿಜಿಟಲ್ ವೇದಿಕೆಯಲ್ಲಿ ವಿಲೇವಾರಿ
- ಮಾನವ ಹಸ್ತಕ್ಷೇಪದ ಅಗತ್ಯ, ಲಂಚಕ್ಕೆ ಕೇಳುವುದು ತಪ್ಪಲಿದೆ
- ಮ್ಯುಟೇಶನ್ ನೋಂದಣಿಗೆ ಅನಗತ್ಯವಾಗಿ ವಿಳಂಬಕ್ಕೆ ಬ್ರೇಕ್
- ಸಬೂಬು ಹೇಳಿ ಲಂಚಕ್ಕೆ ಬೇಡಿಕೆ ಒಡ್ಡುವುದು ತಪ್ಪಲಿದೆ
"

ಕರ್ನಾಟಕ ಭೂ ಕಂದಾಯ ನಿಯಮಗಳು-1966ರಲ್ಲಿ 66ರ ಅಡಿಯಲ್ಲಿ ಸ್ವಯಂಚಾಲಿತ ಮ್ಯುಟೇಷನ್ ಜಾರಿಗೆ ತಂದಿದ್ದು, ಶೇ.90 ನೋಂದಾಯಿತ ದಾಖಲೆಗಳಿಗೆ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net