ಮೆಟ್ರೋಗೆ ದಾಖಲೆ ಸವಾರರು ಶೇ. 99.77 ಸಮಯಪಾಲನೆ

ಮೆಟ್ರೋ
ಮೆಟ್ರೋ
Published on

ಪ್ರಮುಖ ಮುಖ್ಯಾಂಶಗಳು

  • ಆಗಸ್ಟ್​ನಲ್ಲಿ 2.71 ಕೋಟಿ ಪ್ರಯಾಣಿಕರ ಸಂಚಾರ
  • 309.37 ಲಕ್ಷ ರೂ. ಮಾಸಿಕ ಬೋರ್ಡಿಂಗ್​
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರ ಸಾರಿಗೆ ವ್ಯವಸ್ಥೆಯ ಪ್ರಮುಖ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಆಗಸ್ಟ್​ನಲ್ಲಿ ಗಮನಾರ್ಹ ಸಾಧನೆ ದಾಖಲಿಸಿದೆ. ಒಟ್ಟು 96.1 ಕಿ.ಮೀ. ವ್ಯಾಪ್ತಿಯ ಮೆಟ್ರೋ ಜಾಲದಲ್ಲಿ ಆಗಸ್ಟ್​ನಲ್ಲಿ 2.71 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಮೆಟ್ರೋ ಸೇವೆಯ ಮೇಲಿನ ಜನರ ಅವಲಂಬನೆ ಮತ್ತಷ್ಟು ಹೆಚ್ಚಿರುವುದು ಖಚಿತವಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಇಎಲ್​) ತಿಳಿಸಿದೆ.
ಮೆಟ್ರೋ ರೈಲುಗಳು ಶೇ. 99.77 ಸಮಯಪಾಲನೆ ಕಾಯ್ದುಕೊಂಡಿದ್ದು, ಪ್ರಯಾಣಿಕರಿಗೆ ವಿಶ್ವಾಸಾರ್ಹ ಸೇವೆ ಒದಗಿಸುವಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದೆ. ಇದೇವೇಳೆ ಒಟ್ಟು 309.37 ಲಕ್ಷ ಮಾಸಿಕ ಬೋರ್ಡಿಂಗ್​ಗಳು ದಾಖಲಾಗಿವೆ. ಆಗಸ್ಟ್​ 14ರಂದು ಒಂದೇ ದಿನದಲ್ಲಿ 27,119 ಸಂಚಾರಗಳು ನಡೆದಿದ್ದು, ಈ ಅವಧಿಯಲ್ಲಿ 9,97,773 ಸರಣಿ ದೈನಂದಿನ ಬೋರ್ಡಿಂಗ್​ಗಳು ಹಾಗೂ 11,87,825 ಗರಿಷ್ಠ ದೈನಂದಿನ ಬೋರ್ಡಿಂಗ್​ಗಳು ದಾಖಲಾಗಿವೆ.
ದಟ್ಟಣೆಯ ಸಮಯದಲ್ಲಿ ಹೆಚ್ಚುವರಿ ರೈಲು:
ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸುವ ಉದ್ದೇಶದಿಂದ ನೇರಳೆ ಮಾರ್ಗದಲ್ಲಿ 3.3 ನಿಮಿಷ, ಹಸಿರು ಮಾರ್ಗದಲ್ಲಿ 5 ನಿಮಿಷ ಹಾಗೂ ಹಳದಿ ಮಾರ್ಗದಲ್ಲಿ 6 ನಿಮಿಷಗಳ ಅಂತರದಲ್ಲಿ ರೈಲು ಸೇವೆ ಒದಗಿಸಲಾಗಿದೆ. ಸೆ.15ರಿಂದ ಹಳದಿ ಮಾರ್ಗದ ರೈಲುಗಳ ಸಂಖ್ಯೆ 10ರಿಂದ 12ಕ್ಕೆ ಹೆಚ್ಚಿಸುವುದರ ಜತೆಗೆ, ದಟ್ಟಣೆಯ ಸಮಯದ ಅಂತರವನ್ನು 7ರಿಂದ 6 ನಿಮಿಷಕ್ಕೆ ಇಳಿಸಲು ಕ್ರಮ ಕೈಗೊಳ್ಳಲಾಗಿದೆ.
ಸುರಕ್ಷತೆಗೆ ಆದ್ಯತೆ
ಆಗಸ್ಟ್​ನಲ್ಲಿ 27,119 ಸಿಬ್ಬಂದಿ ಅಥವಾ ಸಂಬಂಧಿತ ಸಂಖ್ಯೆಯ ಸೇವಾ ಅಂಶಗಳ ಉಲ್ಲೇಖದೊಂದಿಗೆ, ಪ್ರತಿ 60 ಸಾವಿರ ಸಂಚಾರಗಳಿಗೆ 62 ಘಟನೆಗಳು ದಾಖಲಾಗಿದ್ದು, ಘಟನೆ ಪ್ರಮಾಣ ಶೇ. 0.33 ಎಂದು ಮಾಹಿತಿ ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.
ಡಿಜಿಟಲ್​ ಟಿಕೆಟ್​ಗೆ ಹೆಚ್ಚಿದ ಒಲವು
ಟಿಕೆಟ್​ ವಹಿವಾಟಿನಲ್ಲೂ ಡಿಜಿಟಲ್​ ಪಾವತಿಗೆ ಪ್ರಯಾಣಿಕರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಸ್ಮಾರ್ಟ್​ ಕಾರ್ಡ್​ ಮೂಲಕ ಶೇ. 30.88, ಕ್ಯೂಆರ್​ ಟಿಕೆಟ್​ ಮೂಲಕ ಶೇ. 25.23 ಹಾಗೂ ಎನ್​ಸಿಎಂಸಿ ಕಾರ್ಡ್​ ಮೂಲಕ ಶೇ. 15.88 ವಹಿವಾಟು ನಡೆದಿದೆ. ಒಟ್ಟು 49,429 ಎನ್​ಸಿಎಂಸಿ ಕಾರ್ಡ್​ಗಳು ಮಾರಾಟವಾಗಿವೆ ಎಂದು ಬಿಎಂಆರ್​ಸಿಎಲ್​ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net