ಸಂಜೆ, ರಾತ್ರಿಯೂ ತ್ಯಾಜ್ಯ ಸಂಗ್ರಹಕ್ಕೆ ಕ್ರಮ

collect-waste
collect-waste
Published on

ಪ್ರಮುಖ ಮುಖ್ಯಾಂಶಗಳು

  • ದಕ್ಷಿಣ ನಗರ ಪಾಲಿಕೆಯಲ್ಲಿ ಪ್ರಾಯೋಗಿಕ ಪ್ರಯೋಗ
ಬೆಂಗಳೂರು: ಮಹಾನಗರದಲ್ಲಿ ಕಸದ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸಂಜೆ ಹಾಗೂ ರಾತ್ರಿ ವೇಳೆಯೂ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವ ಪ್ರಾಯೋಗಿಕ ಪರಯೋಗ ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಚಾಲನೆ ದೊರೆತಿದೆ.
ದಕ್ಷಿಣ ಪಾಲಿಕೆಯ ಕೆಲವೆಡೆ ಜನಜಾಗೃತಿ ಹೊರತಾಗಿಯೂ ಸಾರ್ವಜನಿಕರು ರಸ್ತೆಬದಿ ತ್ಯಾಜ್ಯ ಬಿಸಾಡುವ ಪ್ರಕರಣಗಳು ಹೆಚ್ಚುತ್ತಿವೆ. ಈ ಪ್ರವೃತ್ತಿ ವಿವಿಧೆಡೆಗೂ ವಿಸ್ತರಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪಾಲಿಕೆಯು ಘನತ್ಯಾಜ್ಯ ನಿಗಮದ ಜತೆ ಸಮನ್ವಯ ಸಾಧಿಸಿ ಬೆಳಗಿನ ಸಮಯವಲ್ಲದೆ ರಾತ್ರಿ ವೇಳೆಯೂ ಕಸ ಸಂಗ್ರಹಕ್ಕೆ ಮುಂದಾಗಿದೆ. ಆಡುಗೋಡಿಯಲ್ಲಿ ಈ ಪ್ರಯೋಗಕ್ಕೆ ಜನಸ್ಪಂದನೆ ವ್ಯಕ್ತವಾಗಿದೆ. ನಮಗೆ ಬೆಳಗಿನ ವೇಳೆ ಮನೆ ವೇಳೆ ಬರುವ ಆಟೋಗಳಿಗೆ ಕಸ ಹಾಕಲು ಸಮಯ ಇರುವುದಿಲ್ಲ. ಕೆಲವೊಮ್ಮೆ ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ಅನಿವಾರ್ಯವಾಗಿ ಹೊರಗೆ ತ್ಯಾಜ್ಯ ಬಿಸಾಡಬೇಕಾಗುತ್ತದೆ ಎಂಬ ಅಭಿಪ್ರಾಯವನ್ನು ಪಾಲಿಕೆ ಸಿಬ್ಬಂದಿಗೆ ತಿಳಿಸಿರುವುದು ಹೊಸ ಪ್ರಯೋಗಕ್ಕೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೊಸದಾಗಿ ಆರಂಭಿಸಿರುವ ಈ ಉಪಕ್ರಮದಿಂದ ಜನರು ಆಟೋಗಳಿಗೆ ಕಸ ನೀಡುತ್ತಿದ್ದಾರೆ. ಇದರಿಂದ ಆ ಭಾಗದಲ್ಲಿ ರಸ್ತೆಬದಿ ಹಾಗೂ ಇನ್ನಿತರ ಕಡೆಗಳಲ್ಲಿ ತ್ಯಾಜ್ಯ ಬಿಸಾಡುವುದು ಕಡಿಮೆಯಾಗಿದೆ. ಈ ಪ್ರಯೋಗವನ್ನು ಕೆಲ ದಿನಗಳ ಮಟ್ಟಿಗೆ ಮುಂದುವರಿಸುತ್ತೇವೆ. ಜತೆಗೆ ಬೆಳಗಿನ ವೇಳೆ ಕಸ ನೀಡುವಂತೆ ಜನಜಾಗೃತಿ ಮಾಡಲಾಗುವುದು. ಇದರ ಸಾಧಕ ಬಾಧಕ ಆಧರಿಸಿ ಬೇರೆಡೆಗೂ ವಿಸ್ತರಿಸುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ದಕ್ಷಿಣ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ತಿಳಿಸಿದ್ದಾರೆ.

ಅಗತ್ಯವಿರುವೆಡೆಯಷ್ಟೇ ವಿಸ್ತರಣೆ:

ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ನಾಗರಿಕರು ಪಾಲಿಕೆಗಳೊಂದಿಗೆ ಸಹಕರಿಸಬೇಕು. ಮನೆ ಬಳಿ ಬರುವ ಆಟೋಗಳಿಗೆ ಹಸಿ ಹಾಗೂ ಒಣ ಕಸವನ್ನು ವಿಂಗಡಿಸಿ ನೀಡಬೇಕು. ರಸ್ತೆಬದಿ ತ್ಯಾಜ್ಯ ಸುರಿದರೆ ಅದು ನಗರದ ಅಂದವನ್ನು ಕೆಡೆಸುವುದಲ್ಲದೆ ಬ್ಲ್ಯಾಕ್ ಸ್ಪಾಟ್ ಸೃಷ್ಟಿಗೆ ಕಾರಣವಾಗುತ್ತದೆ. ಸದ್ಯ ದಕ್ಷಿಣ ಪಾಲಿಕೆ ಕೆಲ ಪ್ರದೇಶಗಳಲ್ಲಿ ರಾತ್ರಿ ವೇಳೆ ಮನೆಗಳಿಂದ ಕಸ ಸಂಗ್ರಹಿಸುತ್ತಿದೆ. ಇಂತಹ ಪ್ರಯೋಗ ಅಗತ್ಯವಿರುವೆಡೆ ಮಾಡಲು ಕಾರ್ಪೋರೇಷನ್‌ಗಳು ಸ್ವತಂತ್ರ ನಿರ್ಧಾರ ಕೈಗೊಳ್ಳಲಿದೆ. ಇದು ಕಡ್ಡಾಯ ಅಲ್ಲ, ಏನೇ ಆದರೂ, ಬೆಳಗಿನ ವೇಳೆ ನಿಯಮಿತವಾಗಿ ಕಸವನ್ನು ಜನರು ನೀಡುವುದು ಸಾಗಣೆ, ಸಂಸ್ಕರಣೆಗೆ ಅನುಕೂಲ. ಈ ವಿಚಾರದಲ್ಲಿ ಇನ್ನಷ್ಟು ಜನಜಾಗೃತಿ ಕೈಗೊಳ್ಳಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್ ಪ್ರತಿಕ್ರಿಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net