ಜಿಬಿಎಯಿಂದ 24 ಗಂಟೆಯಲ್ಲಿ ರಸ್ತೆಗುಂಡಿ ಮುಚ್ಚಲು ಕ್ರಮ

ಸಾರ್ವಜನಿಕರು ದಾಖಲಿಸುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಪಟಾಫಟ್ ರೀತಿ ಗುಂಡಿ ಮುಚ್ಚುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಚಿಂತನ-ಮಂಥನ ನಡೆಸಿದ್ದಾರೆ.
raste gundi
ರಸ್ತೆ ಮಧ್ಯೆ ಗುಂಡಿಯೊಂದು ಉಂಟಾಗಿ ಸಂಚಾರಕ್ಕೆ ಅಡ್ಡಿಯಾಗಿರುವುದು
Published on: 

ಬೆಂಗಳೂರು: ದೂರು ನೀಡಿದ 24 ಗಂಟೆಯೊಳಗೆ ರಸ್ತೆಗುಂಡಿ ಮುಚ್ಚುವ ಭರವಸೆಯೊಂದಿಗೆ ಹೊಸ ತಂತ್ರಜ್ಞಾನದಡಿ ಪಾಟ್​​ಹೋಲ್‌ಗಳನ್ನು ಸರಿಪಡಿಸುವ ವಿನೂತನ ಯೋಜನೆಯೊಂದನ್ನು ಕಾರ್ಯರೂಪಕ್ಕೆ ತರಲು ಜಿಬಿಎ ಮುಂದಾಗಿದೆ.

ವರ್ಷವಿಡೀ ಕಾಡುವ ಗುಂಡಿ ಸಮಸ್ಯೆಯಿಂದಾಗಿ ನಗರದ ನಾಗರಿಕರಉ ಹೈರಾಣರಾಗುತ್ತಿದ್ದಾರೆ. ಸಣ್ಣ ರಸ್ತೆಗಳಲ್ಲೂ ದೊಡ್ಡ ಪಾಟ್​​ಹೋಲ್ ಇದ್ದರೂ, ಅವುಗಳನ್ನು ದುರಸ್ತಿಪಡಿಸಲು ಪಾಲಿಕೆಗೆ ಸಾಧ್ಯವಾಗುತ್ತಿಲ್ಲ. ಮಳೆಬಂದರಂತೂ ಇಡೀ ರಸ್ತೆ ಗುಂಡಿಮಯವಾಗುವ ಸ್ಥಿತಿ ಇದೆ. ಈ ಸಮಸ್ಯೆಗೆ ಪರಿಹಾರ ಒದಗಿಸಲು ಸಾರ್ವಜನಿಕರು ದಾಖಲಿಸುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸಲು ಪಟಾಫಟ್ ರೀತಿ ಗುಂಡಿ ಮುಚ್ಚುವ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಚಿಂತನ-ಮಂಥನ ನಡೆಸಿದ್ದಾರೆ.

ನಗರದ ಪ್ರಮುಖ ರಸ್ತೆಗಳಾದ ಆರ್ಟೀರಿಯಲ್ ಹಾಗೂ ಸಬ್ ಆರ್ಟೀರಿಯಲ್ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವ ಕೆಲಸ ಪ್ರಗತಿಯಲ್ಲಿದೆ. ಆದರೆ, ವಸತಿ ಪ್ರದೇಶಗಳಿರುವ ಸ್ಥಳೀಯ ರಸ್ತೆಗಳಲ್ಲಿ ಉಂಟಾಗುವ ಗುಂಡಿಗಳನ್ನು ಮುಚ್ಚಲು ಸಾಕಷ್ಟು ಸಮಯ ಹಿಡಿಯುತ್ತಿದೆ. ಅಧಿಕಾರಿಗಳ ಗಮನಕ್ಕೆ ಬಾರದಿರುವುದು, ಗುಂಡಿ ಬಿದ್ದ ಸ್ಥಳದ ಬಗ್ಗೆ ಅಪೂರ್ಣ ಮಾಹಿತಿ, ತಪ್ಪು ಮಾಹಿತಿ ಹಾಗೂ ಸ್ಥಳೀಯ ಇಂಜಿನಿಯರ್‌ಗಳ ವಿಳಂಬತನದಿಂದಾಗಿ ಸಕಾಲದಲ್ಲಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆ್ಯಪ್ ಆಧಾರಿತ ತಂತ್ರಜ್ಞಾನಕ್ಕೆ ಮೊರೆ ಹೋಗಿರುವ ಜಿಬಿಎ ಅಧಿಕಾರಿಗಳು, ಜನರಿಗೆ ಹೆಚ್ಚು ತೊಂದರೆ ಉಂಟಾಗುವ ಸ್ಥಳಗಳಲ್ಲಿನ ಗುಂಡಿಗಳನ್ನು ತಕ್ಷಣವೇ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿದ್ದಾರೆ.

ಪ್ರತ್ಯೇಕ ಅಧಿಕಾರಿ ನಿಯೋಜನೆಗೆ ಚಿಂತನೆ:

ಗುಂಡಿ ಮುಚ್ಚಲು ಪ್ರತ್ಯೇಕ ಆ್ಯಪ್, ಸಹಾಯವಾಣಿ ಸಂಖ್ಯೆಯನ್ನು ನಾಗರಿಕರಿಗೆ ನೀಡಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಅಧಿಕಾರಿ ನಿಗಾದಲ್ಲಿ ಇಂಜಿನಿಯರ್‌ಗಳನ್ನು ನಿಯೋಜಿಸಲಾಗುತ್ತದೆ. ಆ್ಯಪ್ ಮೂಲಕ ಸ್ವೀಕರಿಸುವ ದೂರು ಆಧರಿಸಿ ಗುಂಡಿ ಬಿದ್ದ ಸ್ಥಳಗಳನ್ನು ಪರಿಶೀಲನೆ ನಡೆಸಿ ತಕ್ಷಣವೇ ಕಾರ್ಯಪ್ರವೃತ್ತರಾಗಲು ಅವಕಾಶ ಕಲ್ಪಿಸಲಾಗುತ್ತದೆ. ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವ ಜತೆಗೆ ಗುಣಮಟ್ಟಕ್ಕೆ ಆದ್ಯತೆ ನೀಡಲಾಗುತ್ತದೆ. ಹಾಗಾಗಿ ರಸ್ತೆಗುಂಡಿ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳಬಹುದು ಎಂದು ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಜೆಟ್ ಪ್ಯಾಚರ್ ಬಳಕೆಗೆ ಆದ್ಯತೆ:

ರಸ್ತೆಗುಂಡಿಯನ್ನು ವೈಜ್ಞಾನಿಕವಾಗಿ ಮುಚ್ಚಲು ಇತ್ತೀಚಿಗಷ್ಟೇ ಜೆಟ್ ಪ್ಯಾಚರ್ ಯಂತ್ರದ ಮೂಲಕ ಪ್ರಾಯೋಗಿಕ ಪರೀಕ್ಷೆ ಕೈಗೊಳ್ಳಲಾಗಿತ್ತು. ಮುಚ್ಚಿದ ಗುಂಡಿಯು ಮತ್ತೆ ಬಾಯ್ತೆರೆದಂತೆ ಗುಣಮಟ್ಟದ ಕೆಲಸ ಮಾಡಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಹಿಂದೆಯೂ ಇಂತಹದ್ದೇ ಪ್ರಯತ್ನ ನಡೆಸಿದ್ದರೂ, ಸೂಕ್ತ ಮೇಲ್ವಿಚಾರಣೆ ಇಲ್ಲದೆ ಪ್ರಾಯೋಗಿಕ ಹಂತದಲ್ಲೇ ಕೊನೆಗೊಂಡಿತ್ತು. ಈಗ ಆಯಾ ಪಾಲಿಕೆಗಳ ವ್ಯಾಪ್ತಿಯಲ್ಲಿ ಜೆಟ್ ಪ್ಯಾಚರ್ ಖರೀದಿಸಿ ವರ್ಷಪೂರ್ತಿ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಒತ್ತು ನೀಡುವಂತೆ ಜಿಬಿಎ ಮುಖ್ಯಸ್ಥರು ಸಂಬಂಧಿಸಿದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net