

ಬೆಂಗಳೂರು: ಚಾಮರಾಜಪೇಟೆ 5ನೇ ಮುಖ್ಯರಸ್ತೆಯಲ್ಲಿ ನಡೆಯುತ್ತಿರುವ ವೈಟ್ ಟಾಪಿಂಗ್ ಕಾಮಗಾರಿ ವೇಳೆ ಶುಕ್ರವಾರ ಮಧ್ಯಾಹ್ನ 12.30ರಲ್ಲಿ ಜೆಸಿಬಿ ಚಾಲಕನ ಎಡವಿಟ್ಟಿನಿಂದಾಗಿ ಬೃಹತ್ ಮರ ಬಿದ್ದಿದೆ. ಪರಿಣಾಮ ಕಾರು, ಆಟೋ ಮತ್ತು 4 ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೃತ್ತದಲ್ಲಿ ರೆಡ್ ಸಿಗ್ನಲ್ ಬಿದ್ದು ವಾಹನಗಳು ನಿಂತುಕೊಂಡಿದ್ದಾಗ ಮರ ಬಿದ್ದಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇತ್ತು. ಜಖಂಗೊಂಡಿದ್ದ ಕಾರಿನ ಮಾಲೀಕರು ಶಂಕರಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ರಸ್ತೆಯ ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಒಂದು ಬದಿಯಲ್ಲಿ ಕಾವೇರಿ ಜಲ ಸಂಪರ್ಕದ ಪೈಪ್‌ಲೈನ್ ಅಳವಡಿಕೆಗೆ ಜೆಸಿಬಿ ಮೂಲಕ ಮರದ ಪಕ್ಕದಲ್ಲೇ ನೆಲ ಅಗೆಯಲಾಗುತ್ತಿತ್ತು. ಈ ವೇಳೆ ಏಕಾಏಕಿ ಮರಬಿದ್ದಿದೆ. ಕೂಡಲೇ ಜೆಸಿಬಿ ಆಪರೇಟರ್ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇನ್ನೊಂದು ಬದಿಯಲ್ಲಿ ಸಂಚರಿಸುತ್ತಿದ್ದ ಕಾರು ಮತ್ತು ಆಟೋ ಜಖಂಗೊಂಡಿದೆ. ಬಜಾಜ್ ಶೋ ರೂಂ ಮುಂದೆ ನಿಲ್ಲಿಸಿದ್ದ ನಾಲ್ಕು ಬೈಕ್‌ಗಳು ಜಖಂಗೊಂಡಿವೆ.
ಮರ ಬಿದ್ದ ಶಬ್ದಕ್ಕೆ ಸ್ಥಳೀಯರಲ್ಲಿ ಆತಂಕ ಎದುರಾಗಿತ್ತು. ಮರದಡಿಗೆ ಸಿಲುಕಿದ್ದ ಕೆಲವರನ್ನು ರಕ್ಷಿಸಲು ಸಾರ್ವಜನಿಕರು ಮುಂದಾದರು. ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿ ಹಾಗೂ ಅವರ ಒಂದೂವರೆ ವರ್ಷದ ಮಗುವಿಗೂ ಮರದ ಕೊಂಬೆ ತಾಗಿದೆ. ಮಗು ಸುರಕ್ಷಿತವಾಗಿದ್ದು, ಸಣ್ಣ ಗಾಯವಾಗಿದೆ.
ಸ್ಥಳಕ್ಕೆ ಆಗಮಿಸಿದ ಶಂಕರಪುರ ಪೊಲೀಸರು, ಸ್ಥಳ ಪರಿಶೀಲಿಸಿ ಕೂಡಲೇ ಜಿಬಿಎ ಅರಣ್ಯ ವಿಭಾಗಕ್ಕೆ ಮಾಹಿತಿ ನೀಡಿ ತೆರವುಗೊಳಿಸಲು ಸೂಚನೆ ನೀಡಿದರು. 5 ತಾಸುಗಳ ಕಾಲ ಕ್ರೇನ್ ಸಹಾಯದಿಂದ ಮರದ ಅವಶೇಷ ತೆರವು ಕಾರ್ಯಾಚರಣೆ ಮಾಡಿದರು. 80 ವರ್ಷಕ್ಕೂ ಹಳೆಯ ಬೃಹತ್ ಮರ ಬಿದ್ದಿದ್ದರಿಂದ ಬಸವನಗುಡಿಯಿಂದ ಕೆ.ಆರ್ ಮಾರ್ಕೆಟ್, ಕೆಂಪೇಗೌಡ ಬಸ್ ನಿಲ್ದಾಣ, ಶಾಂತಿನಗರ, ಕಾರ್ಪೋರೇಷನ್ ಕಡೆಗೆ ಹೋಗುವ ವಾಹನಗಳ ಸಂಚಾರ ಮಾರ್ಗವನ್ನು ಮಾರ್ಪಾಡುಗೊಳಿಸಲಾಗಿತ್ತು. ಈ ಸಂಬಂಧ ಕೆಲವೆಡೆ ಸಂಚಾರ ಸಿಕ್ಕು ಎದುರಾಗಿತ್ತು.
ಬೃಹತ್ ಮರ ಬಿದ್ದ ರಸ್ತೆಯಿಂದ 50 ಮೀಟರ್ ದೂರಲ್ಲಿ ಮತ್ತೊಂದು ಬೃಹತ್ ಮರವಿದ್ದು, ಅದು ಸಹ ಬೀಳುವ ಸಾಧ್ಯತೆಯಿದೆ. ಹಾಗಾಗಿ ಆ ಮರವನ್ನು ಅನಾಹುತ ಸಂಭವಿಸುವ ಮೊದಲೇ ತೆರವುಗೊಳಿಸಬೇಕೆಂದು ಸಾರ್ವಜನಿಕರು ಜಿಬಿಎ ಅರಣ್ಯ ವಿಭಾಗಕ್ಕೆ ಒತ್ತಾಯಿಸಿದ್ದಾರೆ.