

ಬೆಂಗಳೂರು: ಹಗರಣಗಳ ಸುಳಿಗೆ ಸಿಲುಕಿರುವ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಬೀದಿಗಿಳಿದು ಜನಾಂದೋಲನ ರೂಪಿಸುವ ಮೂಲಕ ಮುಂಬರುವ ಮತಸಮರಕ್ಕೆ ಪಕ್ಷವನ್ನು ಸಜ್ಜುಗೊಳಿಸಲು ಬಿಜೆಪಿ ಕೋರ್ ಕಮಿಟಿ ಸಭೆ ನಿರ್ಧರಿಸಿದೆ.
ಸ್ಟಿಂಗ್ ಆಪರೇಷನ್, ಕೆಪಿಎಸ್ಸಿ ಹಗರಣದ ಆವಾಂತರಗಳು, ಬರ ನಿರ್ವಹಣೆ ವೈಲ್ಯಗಳು, ಖಜಾನೆ ಖಾಲಿ ಇಟ್ಟುಕೊಂಡು ಆಶ್ವಾಸನೆಗಳ ಮಳೆ ಸುರಿಸುವ ರಾಜ್ಯ ಸರ್ಕಾರದ ಧೋರಣೆಯನ್ನೇ ಬಿಜೆಪಿ ಹೋರಾಟಕ್ಕೆ ಅಸ್ತ್ರ ಮಾಡಿಕೊಳ್ಳಲು ಕೋರ್ ಕಮಿಟಿ ಸಭೆ ಒಲವು ತೋರಿದೆ.
ಉಳಿದಂತೆ ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಈಗಿನಿಂದಲೇ ಸಜ್ಜುಗೊಳಿಸಲು, ಎಸ್‌ಐಆರ್ ಸಂಬಂಧ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಸ್ಐ ಆರ್ ದಾಖಲಿಸುವುದನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಬೀದಿಗಿಳಿಯಲು ಕೋರ್ ಕಮಿಟಿ ತೀರ್ಮಾನಿಸಿತು.
ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಬರುವ ಸ್ಥಳೀಯ ಸಂಸ್ಥೆ-ಪಂಚಾಯತ್ ಚುನಾವಣೆಗಳನ್ನು ಮುಂದಿನ ಮತಸಮರಕ್ಕೆ ತಾಲೀಮು ಎಂದೇ ಭಾವಿಸಿ ಪಕ್ಷ ಸಂಘಟಿಸಲು ವಿಶೇಷ ಮುತುವರ್ಜಿ ವಹಿಸಬೇಕಾದ ಅಗತ್ಯವನ್ನು ಸಹ ಉಸ್ತುವಾರಿ ಕಾಸಂ ವೆಂಕಟೇಶ್ವರಲು ಪ್ರತಿಪಾದಿಸಿದರು.
ಜಿಲ್ಲಾ- ತಾಲೂಕು ಪಂಚಾಯಿತಿ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಲು ಆಯಾ ಜಿಲ್ಲೆಗಳಿಗೆ ಪ್ರಭಾರಿಗಳನ್ನು ನೇಮಿಸಲು ಹಾಗೂ ಚುನಾವಣಾ ನಿರ್ವಹಣಾ ಸಮಿತಿಗಳ ರಚನೆಗೆ ಕೋರ್ ಕಮಿಟಿ ಸಭೆ ಸಮ್ಮತಿಸಿತು.
ಪಂಚಾಯಿತಿ ಚುನಾವಣೆಗಳ ಗೆಲುವು ವಿಧಾನಸಭೆ ಚುನಾವಣೆ ಮೇಲೆ ನೇರ ಪರಿಣಾಮ ಬೀರುವ ಕಾರಣ ಯಾರೂ ನಿರ್ಲಕ್ಷಿಸಬಾರದು. ಏನೇ ಸಣ್ಣಪುಟ್ಟ ಭಿನ್ನಾಭಿಪ್ರಯಗಳಿದ್ದರೆ ಬದಿಗೊತ್ತಿ ಒಗ್ಗಟ್ಟು ಪ್ರದರ್ಶಿಸಿದರೆ ಮಾತ್ರ ಉಳಿಗಾಲ ಎಂದು ಒತ್ತಿ ಹೇಳಲಾಯಿತು.
ಸಂಘಟನೆ ವಿಷಯದಲ್ಲಿ ಒಂಚೂರು ಮೈ ಮರೆಯಬಾರದು, ರಾಜ್ಯ ನಾಯಕರು ನಿರಂತರ ಪ್ರವಾಸ ಮಾಡಿದರೆ, ಜಿಲ್ಲಾ ಮಟ್ಟದ ನಾಯಕರು ತಾಲೂಕು, ಹೋಬಳಿ, ಗ್ರಾಮವಾರು ಪ್ರವಾಸದಲ್ಲಿರುವಂತೆ ಸಲಹೆ ನೀಡಲಾಯಿತು.
ಎಸ್‌ಐಆರ್‌ಗೆ ಸಂಬಂಧಿಸಿದಂತೆ ನಮೂನೆ 7ರ ಡಿ ಅರ್ಜಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರ ವಿರುದ್ದ ಎ್ ಐ ಆರ್ ದಾಖಲಿಸುವುದನ್ನು ಮುಂದುವರಿಸಿದರೆ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಲು ಕೋರ್ ಕಮಿಟಿ ಸದಸ್ಯರು ತೀರ್ಮಾನಿಸಿದರು.
ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಅವರಿಲ್ಲದೆ ನಾವಿಲ್ಲ. ಅವರಿಗೆ ಕಿರುಕುಳು ನೀಡುವುದನ್ನು ನೋಡಿ ಸಹಿಸಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೀಗಾಗಿ ಕಾರ್ಯಕರ್ತರ ರಕ್ಷಣೆಗೆ ಬೀದಿಗಿಳಿಯಲು ತಯಾರಾಗಬೇಕು ಎಂದು ಮಾಜಿ ಸಿಎಂ ಬಿಎಸ್‌ವೈ ನೀಡಿದ ಸಲಹೆಗೆ ಎಲ್ಲರೂ ಸಮ್ಮತಿಸಿದರು ಎಂದು ತಿಳಿದು ಬಂದಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಈ ಹಿಂದಿನಿಂದ ಬಿಜೆಪಿ ಮೇಲುಗೈ ಸಾಧಿಸುತ್ತಲೇ ಬಂದಿದೆ. ಈ ಬಾರಿ ಕೂಡ ಗೆಲವಿನ ಓಟ ಮುಂದುವರಿಸಬೇಕು. ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ನಾಲ್ಕೂ ಸ್ಥಾನಗಲ್ಲಿ ಗೆಲುವಿನ ನಗೆ ಬೀರಬೇಕು. ಇದಕ್ಕೆ ಪೂರಕವಾಗಿ ಪರಸ್ಪರ ಹೊಂದಾಣಿಕೆಯಿಂದ ಕೆಲಸ ಮಾಡಲು ನಿರ್ಧರಿಸಲಾಯಿತು.
ಬಿಜೆಪಿ ಕರ್ನಾಟಕದ ಸಹ ಉಸ್ತುವಾರಿ ಕಾಸಂ ವೆಂಕಟೇಶ್ವರಲು ನೇತೃತ್ವ ವಹಿಸಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಸದಾನಂದ ಗೌಡ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ವುಇಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಸಿ.ಟಿ.ರವಿ, ಅಶ್ವತ್ಥ್ ನಾರಾಯಣ, ಸಂಸದ ಗೋವಿಮದ ಕಾರಜೋಳ ಇತರರಿದ್ದರು.