

ಬೆಂಗಳೂರು: ಅನಧಿಕೃತ ಕಟ್ಟಡ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳಲು ನೋಟಿಸ್ ಜಾರಿಗೊಳಿಸಿ, ತೆರವು ಆದೇಶವನ್ನೂ ಹೊರಡಿಸಿದರೂ ಅದನ್ನು ಜಾರಿಗೊಳಿಸದೆ ನಿರ್ಲಕ್ಷ್ಯ ವಹಿಸಿರುವ ಬಿಬಿಎಂಪಿ ಹಾಗೂ ಪ್ರಸ್ತುತ ಬೆಂಗಳೂರು ಪಶ್ಚಿಮ ನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಗುರುತಿಸಿ, ಅವರ ಹೊಣೆಗಾರಿಕೆ ನಿಗದಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ನಿರ್ದೇಶನ ನೀಡಿದ್ದಾರೆ. ಅರೆಹಳ್ಳಿ ಮುಖ್ಯರಸ್ತೆಯ ರಾಮಚಂದ್ರಪುರ ನಿವಾಸಿ ಕೆ.ಮಂಜುನಾಥ್ ಸಲ್ಲಿಸಿರುವ ದೂರಿನ ವಿಚಾರಣೆ ವೇಳೆ ಈ ಅಂಶಗಳು ಬೆಳಕಿಗೆ ಬಂದಿವೆ.
ರಾಜರಾಜೇಶ್ವರಿನಗರ ಉಪವಿಭಾಗದ ವಾರ್ಡ್ 160ರ ಸೈಟ್ ಸಂಖ್ಯೆ 67ರಲ್ಲಿ ಅನುಮೋದಿತ ಕಟ್ಟಡ ನಕ್ಷೆ ಮತ್ತು ಕಟ್ಟಡ ಉಪವಿಧಿ ಉಲ್ಲಂಘಿಸಿ ಅನಧಿಕೃತವಾಗಿ ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಲಾಗಿದೆ ಎಂಬುದು ದೂರುದಾರರ ಆರೋಪವಾಗಿದೆ.
ಅನುಮತಿಗಿಂತ 2 ಮಹಡಿ ನಿರ್ಮಾಣ:
ಆಸ್ತಿಯ ಮಾಲೀಕ ಎನ್.ಎಸ್. ಬಾಲಚಂದ್ರ ದತ್ತ ಅವರು ನೆಲಮಾಳಿಗೆ, ನೆಲಮಹಡಿ ಹಾಗೂ ಮೇಲಿನ ಎರಡು ಮಹಡಿಗಳ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರು. ಆದರೆ, ಮಂಜೂರಾದ ಕಟ್ಟಡ ನಕ್ಷೆಯನ್ನು ಉಲ್ಲಂಘಿಸಿ ಹೆಚ್ಚುವರಿಯಾಗಿ ಇನ್ನೂ ಎರಡು ಮಹಡಿ ನಿರ್ಮಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಕಟ್ಟಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು.
ನೋಟಿಸ್, ಆದೇಶಕ್ಕೂ ಬೆಲೆ ಇಲ್ಲ:
ಅನಧಿಕೃತ ನಿರ್ಮಾಣದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾಯ್ದೆ ಕಲಂ 248(1), 248(2) ಮತ್ತು 248(3)ರ ಅಡಿಯಲ್ಲಿ ಸಂಬಂಧಪಟ್ಟವರಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಅಲ್ಲದೆ, 2024ರ ಸೆಪ್ಟೆಂಬರ್ 3ರಂದು ಕಲಂ 356(1)ರ ಅಡಿಯಲ್ಲಿ ದೃಢೀಕರಣ ಆದೇಶ ಹೊರಡಿಸಲಾಗಿತ್ತು.
ಆದರೆ, ಆದೇಶ ಹೊರಡಿಸಿ ಎರಡು ವರ್ಷಗಳ ಸಮೀಪವಾಗಿದ್ದರೂ ಅನಧಿಕೃತ ನಿರ್ಮಾಣ ತೆರವಿಗೆ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ ಎಂಬುದು ಲೋಕಾಯುಕ್ತರ ಗಮನಕ್ಕೆ ಬಂದಿದೆ. ಈ ಸಂಬಂಧ ಹಲವು ಬಾರಿ ನಿರ್ದೇಶನ, ಜ್ಞಾಪನಾ ಪತ್ರ ಹಾಗೂ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದರೂ, ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಕೈಗೊಂಡ ಕ್ರಮಗಳ ವರದಿ ಸಲ್ಲಿಸಿರಲಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಕಾರ್ಯಪಾಲಕ ಅಭಿಯಂತರ ಎಸ್.ಎಲ್. ಪಾಪಿರೆಡ್ಡಿ ಅವರು ನ.16ರಂದು ಲೋಕಾಯುಕ್ತರ ಮುಂದೆ ಹಾಜರಾಗಿದ್ದರು. ಈ ವೇಳೆ, ಕಲಂ 356(1)ರ ಅಡಿಯಲ್ಲಿ ಹೊರಡಿಸಿದ್ದ ಆದೇಶ ತಮಗೆ ತಲುಪಿಲ್ಲ ಎಂದು ಉತ್ತರ ನೀಡಿದ್ದಾರೆ. ಆದರೆ, ಅನಧಿಕೃತ ಕಟ್ಟಡ ನಿರ್ಮಾಣದ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ನಿರಂತರ ನಿರ್ಲಕ್ಷ್ಯ ತೋರಿರುವುದು ಹಾಗೂ ಆಡಳಿತಾತ್ಮಕ ಲೋಪ ಎಸಗಿರುವುದನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ.
ಕರ್ತವ್ಯ ಲೋಪಕ್ಕೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಿ ಅವರ ಹೊಣೆಗಾರಿಕೆ ನಿಗದಿಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಆಯುಕ್ತರಿಗೆ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ. ಇದಲ್ಲದೆ, ಪ್ರಕರಣದಲ್ಲಿ ಕೈಗೊಂಡ ಕ್ರಮಗಳ ಕುರಿತು ಸಮಗ್ರ ವರದಿಯೊಂದಿಗೆ ಡಿಸೆಂಬರ್ 7ರಂದು ಆಯುಕ್ತರು ಖುದ್ದಾಗಿ ಲೋಕಾಯುಕ್ತರ ಮುಂದೆ ಹಾಜರಾಗಬೇಕು ಎಂದು ಆದೇಶಿಸಿದ್ದಾರೆ.