ಬಿಡಿಎ ಅಧ್ಯಕ್ಷರಿಗೆ ರಾಜ್ಯ ಒಕ್ಕಲಿಗರ ಮಹಾಸಭಾ ಮನವಿ ಸಲ್ಲಿಕೆ
ಬೆಂಗಳೂರು: ಹೆಬ್ಬಾಳ ರಿಂಗ್ ರಸ್ತೆಯ ಜಂಕ್ಷನ್ ಬಳಿ ಬಿಡಿಎ ನಿರ್ಮಿಸಿರುವ ಉದ್ಯಾನದಲ್ಲಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಪುನರ್ ಸ್ಥಾಪಿಸುವಂತೆ ಕೋರಿ ರಾಜ್ಯ ಒಕ್ಕಲಿಗರ ಮಹಾಸಭಾವು ಪ್ರಾಧಿಕಾರದ ಅಧ್ಯಕ್ಷ ಹಾಗೂ ಆಯುಕ್ತರಿಗೆ ಮನವಿ ಮಾಡಿದೆ.
ಈ ಸಂಬಂಧ ಮಹಾಸಭಾ ಅಧ್ಯಕ್ಷ ಎ.ಎಚ್. ಆನಂದ್ ನೇತೃತ್ವದ ನಿಯೋಗವು ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್ ಹಾಗೂ ಆಯುಕ್ತ ಪಿ.ಮಣಿವಣ್ಣನ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದೆ, ಕೆಂಪೇಗೌಡರ ಪ್ರತಿಮೆ ಪುನರ್ ಸ್ಥಾಪನೆ ಜತೆಗೆ ಅಲ್ಲಿನ ಉದ್ಯಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದೆ.
ದೇವನಹಳ್ಳಿ ಬಳಿಯಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ನಗರದಿಂದ ನೇರ ರಸ್ತೆ ಸಂಪರ್ಕ ಕಲ್ಪಿಸಲು ಹೆಬ್ಬಾಳದ ಬಳಿ ಹೆಚ್ಚುವರಿ ಲೂಪ್ ನಿರ್ಮಿಸಿ ಅಲ್ಲಿನ ಸಂಚಾರ ಸಿಕ್ಕು ಸಮಸ್ಯೆಗೆ ಪರಿಹಾರ ಒದಗಿಸಲಾಗಿದೆ. ಈ ಕಾಮಗಾರಿಯನ್ನು ಕೈಗೆತ್ತಿಕೊಂಡ ವೇಳೆ ಅಲ್ಲಿನ ಉದ್ಯಾನದಲ್ಲಿದ್ದ ಹಲವು ಮರಗಳಿಗೆ ಕೊಡಲಿ ಹಾಕಲಾಗಿದೆ. ಜತೆಗೆ ಮೇಲ್ಸೇತುವೆ ನಿರ್ಮಾಣಕ್ಕೆ ಸಿವಿಲ್ ಕಾಮಗಾರಿ ವೇಳೆ ಪಾರ್ಕಿನ ಹಸಿರು ನಶಿಸಿಹೋಗಿದ್ದು, ಅಲ್ಲೀಗ ಕಳಾಹೀನ ಸ್ಥಿತಿ ಕಾಣತ್ತಿದೆ. ಮುಖ್ಯವಾಗಿ ಉದ್ಯಾನದ ಮಧ್ಯಭಾಗದಲ್ಲಿರುವ ಕೆಂಪೇಗೌಡರ ಪ್ರತಿಮೆ ಮರಗಳು ಬೆಳೆದು ಸಾರ್ವಜನಿಕರಿಗೆ ಕಾಣದಂತಾಗಿದೆ. ಹಾಗಾಗಿ ಕೋಟೆ ಮಾದರಿಯಲ್ಲಿರುವ ಎತ್ತರದ ಪೀಠವನ್ನು ಇನ್ನಷ್ಟು ಏರಿಸಿ ಪ್ರತಿಮೆಯನ್ನು ಪುನರ್ ಸ್ಥಾಪಿಸುವಂತೆ ಬಿಡಿಎ ಮುಖ್ಯಸ್ಥರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಎ.ಎಚ್. ಆನಂದ್ ತಿಳಿಸಿದ್ದಾರೆ.
ಈ ವೇಳೆ ಮಹಾಸಭಾದ ಪದಾಧಿಕಾರಿಗಳಾದ ಡಾ. ತಲಕಾಡು ಚಿಕ್ಕರಂಗೇಗೌಡ, ಭಾಸ್ಕರ್ ಗೌಡ, ರಂಜಿತ್‌ಕುಮಾರ್, ಬಿ.ಎನ್. ಮೋಹನ್‌ಕುಮಾರ್, ಟಿ.ಪಿ. ಪ್ರಕಾಶ್ ಹಾಗೂ ಇತರರಿದ್ದರು.