ಕರ್ನಾಟಕದ ಡಿಜಿಟಲ್ ಆರ್ಥಿಕತೆ ಜಿಗಿತ

digital economy
digital economy
Published on

ಪ್ರಮುಖ ಮುಖ್ಯಾಂಶಗಳು

  • 2032ಕ್ಕೆ 329 ಶತಕೊಟಿ ಡಾಲರ್‌ಗೇರಿಸುವ ಗುರಿ
  • ಕೆಡಿಇಎಂ ವಾರ್ಷಿಕ ಸಭೆಯಲ್ಲಿ ವರದಿ ಬಿಡುಗಡೆ
ಬೆಂಗಳೂರು: ರಾಜ್ಯವು ಡಿಜಿಟಲ್ ಆರ್ಥಿಕತೆಯಲ್ಲಿ ಹೆಚ್ಚಿನ ಸಾಧನೆ ಮಾಡುತ್ತಿದ್ದು, 2032ರ ವೇಳೆಗೆ 329 ಶತಕೋಟಿ ಡಾಲರ್‌ಗೆ ಏರುವ ಸಾಧ್ಯತೆ ಇದೆ ಎಂದು ಕರ್ನಾಟಕವು ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ವಾರ್ಷಿಕ ಸಭೆಯಲ್ಲಿ ಮುನ್ನೋಟದ ವರದಿ ಮಂಡಿಸಲಾಗಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಕೆಡಿಇಎಂ ಆಯೋಜಿಸಿದ್ದ ವಾರ್ಷಿಕ ಸಭೆಯಲ್ಲಿ ಸಂಸ್ಥೆಯ ಸಿಇಒ ಸಂಜೀವ್ ಗುಪ್ತಾ ಅವರು ಈ ಮಾಹಿತಿಯನ್ನು ಪ್ರಕಟಿಸಿದರು. ಸದ್ಯ ಭಾರತದ ಡಿಜಿಟಲ್ ಆರ್ಥಿಕತೆಯು 529 ಶತಕೋಟಿ ಡಾಲರ್ ಇದ್ದು, 2029-30ರ ವೇಳೆಗೆ 1.2 ಟ್ರಿಲಿಯನ್ ಡಾಲರ್‌ಗೆ ತಲುಪುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ಕರ್ನಾಟಕದ ಪಾಲು ಈಗಿರುವ ಪ್ರಮಾಣಕ್ಕಿಂತ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಪ್ರತಿಪಾದಿಸಿದರು.
ಕರ್ನಾಟಕದ ಡಿಜಿಟಲ್ ಆರ್ಥಿಕತೆಯು ಪ್ರಸ್ತುತ 159 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದ್ದು, 2031-32ರ ವೇಳೆಗೆ 329 ಶತಕೊಟಿ ಡಾಲರ್ ಹಾಗೂ ಆಶಾದಾಯಕ ಸನ್ನಿವೇಶದಲ್ಲಿ 400 ಶತಕೋಟಿಗಿಂತಲು ಹೆಚ್ಚಾಗುವ ಮುನ್ಸೂಚನೆ ಇದೆ. ಕೆಡಿಇಎಂನ ಡಿಜಿಟಲ್ ಎಕಾನಮಿ ಡ್ಯಾಶ್ ಬೋರ್ಡ್ ಪ್ರಕಾರ, ಪ್ರಸ್ತುತ ರಾಜ್ಯದ ಆರ್ಥಿಕ ಚಟುವಟಿಕೆಯ ಅಂದಾಜು ಶೇ.85 ಬೆಂಗಳೂರು ತನ್ನದಾಗಿಸಿಕೊಂಡಿದೆ. ‘ಬಿಯಾಂಡ್ ಬೆಂಗಳೂರು’ (ಬೆಂಗಳೂರು ಆಚೆಗಿನ ಪ್ರದೇಶಗಳು) ಶೇ.15 ಕೊಡುಗೆ ನೀಡುತ್ತಿವೆ ಎಂದು ಅವರು ತಿಳಿಸಿದರು.

ಹೊಸ ಆವಿಷ್ಕಾರವನ್ನು ಉತ್ತೇಜನ:

ಭಾರತ ಸರ್ಕಾರದ ಎಸ್‌ಟಿಪಿಐ ಮಹಾನಿರ್ದೇಶಕ ಅರವಿಂದ್ ಕುಮಾರ್ ಮಾತನಾಡಿ, ಎಸ್‌ಟಿಪಿಐ ನೆಕ್ಟ್ ಜತೆಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಕರ್ನಾಟಕದ ನವೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಟ್ಟಂತಾಗಿದೆ. ಕೃತಕ ಬುದ್ಧಿಮತ್ತೆ, ಮೆಡ್ ಟೆಕ್, ಐಒಟಿ ಮತ್ತು ಸುಧಾರಿತ ಉತ್ಪಾದನಾ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರವನ್ನು ಉತ್ತೇಜಿಸುವ ಮೂಲಕ ನಾವು ಮುಂದಿನ ಪೀಳಿಗೆಯ ಉದ್ಯಮಿಗಳಿಗೆ ಬಲಿಷ್ಠ ವೇದಿಕೆಯನ್ನು ಸೃಷ್ಟಿಸುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ. ರಮಣ ರೆಡ್ಡಿ, ಕೆಡಿಇಎಂ ಚೇರ್​​​ಮನ್​​ ಬಿ.ವಿ. ನಾಯ್ಡು, ಕರ್ನಾಟಕ ಸರ್ಕಾರದ ಕಿಟ್ಸ್ ಎಂಡಿ ರಾಹುಲ್ ಶರಣಪ್ಪ ಸಂಕನೂರು, ಕೆಡಿಇಎಂ ಎಫ್​ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಹಾಗೂ ಪದಾಧಿಕಾರಿಗಳು, ವಿವಿಧಿ ಉದ್ದಿಮೆಗಳ ಪ್ರತಿನಿಧಿಗಳು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net