ವಾರಸುದಾರರಿಗೆ ₹13.76 ಕೋಟಿ ಮೌಲ್ಯದ ವಸ್ತು ಹಸ್ತಾಂತರ

257 ಪ್ರಕರಣ ಬೇಧಿಸಿ, 211 ಆರೋಪಿಗಳ ಬಂಧನ, ದಕ್ಷಿಣ ವಿಭಾಗದ ಪೊಲೀಸರಿಂದ ಕಾರ್ಯಾಚರಣೆ
 ವಾರಸುದಾರರಿಗೆ ₹13.76 ಕೋಟಿ ಮೌಲ್ಯದ ವಸ್ತು ಹಸ್ತಾಂತರ
Published on: 

ಬೆಂಗಳೂರು: ದಕ್ಷಿಣ ವಿಭಾಗದ ಬನಶಂಕರಿ, ಬಸವನಗುಡಿ ಹಾಗೂ ಜಯನಗರ ಸೇರಿ ಒಟ್ಟು 13 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪೈಕಿ 257 ಪ್ರಕರಣಗಳನ್ನು ಬೇಧಿಸಿ 211 ಆರೋಪಿಗಳಿಂದ ಜಪ್ತಿ ಮಾಡಿದ್ದ ಒಟ್ಟು 13.76 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರ ಕಚೇರಿ ಬಳಿ ಶನಿವಾರ ಹಮ್ಮಿಕೊಂಡಿದ್ದ ‘ವಶಪಡಿಸಿಕೊಂಡ ವಸ್ತುಗಳ ಹಿಂದಿರುಗಿಸುವ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಅಧಿಕೃತವಾಗಿ ವಾರಸುದಾರರಿಗೆ ತಲುಪಿಸಿದರು.

ಕಳ್ಳತನವಾಗಿದ್ದ 10.65 ಕೋಟಿ ಮೌಲ್ಯದ 8.26 ಕೆ.ಜಿ ಚಿನ್ನಾಭರಣ, 79.10 ಲಕ್ಷ ರೂ. ಮೌಲ್ಯದ 410 ಮೊಬೈಲ್‌ಗಳು, 71.10 ಲಕ್ಷ ರೂ. ಮೌಲ್ಯದ 175 ದ್ವಿಚಕ್ರ ವಾಹನಗಳು, 92.40 ಲಕ್ಷ ರೂ. ನಗದು, 36.89 ಲಕ್ಷ ರೂ. ಮೌಲ್ಯದ ಒಟ್ಟು 18.22 ಕೆ.ಜಿ ಬೆಳ್ಳಿ ಆಭರಣಗಳು, 8.40 ಲಕ್ಷ ರೂ. ಮೌಲ್ಯದ 15 ತ್ರಿಚಕ್ರ ವಾಹನಗಳು, 7 ಲಕ್ಷ ರೂ. ಮೌಲ್ಯದ ಕ್ಯಾಂಟರ್ ವಾಹನವನ್ನು ಮಾಲೀಕರಿಗೆ ಒಪ್ಪಿಸಿದರು.

6.11 ಲಕ್ಷ ರೂ. ಮೌಲ್ಯದ 343 ಕೆ.ಜಿ ಡ್ರೈ ಪ್ರೂಟ್ಸ್, 4.50 ಲಕ್ಷ ರೂ. ಮೌಲ್ಯದ 7 ಕಾರುಗಳು, 2.10 ಲಕ್ಷ ರೂ. ಮೌಲ್ಯದ 22 ಗ್ಯಾಸ್ ಸಿಲಿಂಡರ್‌ಗಳು, 1.50 ಲಕ್ಷ ರೂ. ಮೌಲ್ಯದ 3 ಲ್ಯಾಪ್‌ಟಾಪ್‌ಗಳು ಮತ್ತು 1.10 ಲಕ್ಷ ರೂ. ಮೌಲ್ಯದ 86 ಕೆ.ಜಿ ಕಾಪರ್ ವೈರ್ ಅನ್ನು ವಾರಸುದಾರರಿಗೆ ನೀಡಲಾಯಿತು.

ನಗರದಲ್ಲಿ ಸೈಬರ್ ಕ್ರೈಮ್ ಪ್ರಕಣಗಳು ಹೆಚ್ಚಾಗುತ್ತಿವೆ. ಇದನ್ನು ಕಡಿಮೆ ಮಾಡಲು ಇಲಾಖೆ ಶ್ರಮಿಸುತ್ತಿದೆ. ಜತೆಗೆ ಡ್ರಗ್ಸ್ ಜಾಲದ ವಿರುದ್ಧವೂ ಇಲಾಖೆ ಸಮರ ಸಾರಿದ್ದು, ಕಳೆದ ಒಂದು ವರ್ಷದಲ್ಲಿ 450 ಕೋಟಿಗೂ ಅಧಿಕ ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದೇವೆ. ಒಟ್ಟಾರೆ ನಗರದಲ್ಲಿ ಕ್ರೈಮ್ ಸಂಖ್ಯೆ ಕಡಿಮೆ ಮಾಡುವುದೇ ಇಲಾಖೆ ಗುರಿಯಾಗಿದೆ. ಇದಕ್ಕೆ ಸಾರ್ವಜನಿಕರೂ ಸ್ಪಂದಿಸಬೇಕು.

- ಸೀಮಂತ್ ಕುಮಾರ್ ಸಿಂಗ್ ನಗರ ಪೊಲೀಸ್ ಆಯುಕ್ತರು