ಮಳೆನೀರುಗಾಲುವೆಯ ವಿಶ್ವಬ್ಯಾಂಕ್ ಯೋಜನೆ ಸಾಕಾರ ಸಾಧ್ಯವೇ ?

swd development project
swd development project
Published on

ಪ್ರಮುಖ ಮುಖ್ಯಾಂಶಗಳು

  • 1,700 ಕೋಟಿ ಮೊತ್ತದ ಪ್ರಾಜೆಕ್ಟ್ ಜಾರಿಗೆ 16 ಪ್ಯಾಕೇಜ್
  • 12 ಪ್ಯಾಕೇಜ್‌ನಡಿ ಕಾಮಗಾರಿಗೆ ಕಾರ್ಯಾದೇಶ
ಬೆಂಗಳೂರು: ಬೆಂಗಳೂರು ಮಹಾನಗರದ ತಗ್ಗು ಪ್ರದೇಶಗಳನ್ನು ವರ್ಷಗಳಿಂದ ಕಾಡುತ್ತಿರುವ ಪ್ರವಾಹ ತಡೆಗೆ ವಿಶ್ವಬ್ಯಾಂಕ್ ನೆರವಿನಡಿ ರೂಪಿಸಿರುವ ಬೃಹತ್ ಯೋಜನೆಯಾದ ‘ಕರ್ನಾಟಕ ಜಲಭದ್ರತೆ ಮತ್ತು ಸ್ಥಿತಿಸ್ಥಾಪಕತ್ವ ಕಾರ್ಯಕ್ರಮ’ (ಕೆಡಬ್ಲ್ಯುಎಸ್‌ಆರ್‌ಪಿ) ಕೊನೆಗೂ ಟೇಕ್ ಆಫ್​ ಆಗಿದೆ. 2-3 ವರ್ಷದಿಂದ ಕಡತದಲ್ಲೇ ಉಳಿದಿದ್ದ ಈ ಪ್ರಾಜೆಕ್ಟ್ ಜಿಬಿಎ ಹಾಗೂ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಸರಿಸುಮಾರು 1,700 ಕೋಟಿ ರೂ. ಬೃಹತ್ ಮೊತ್ತದ ಈ ಯೋಜನೆ ಜಾರಿಗೆ 16 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳು ಹೆಬ್ಬಾಳ, ವೃಷಭಾವತಿ, ಕೋರಮಂಗಲ, ಚಲ್ಲಘಟ್ಟ ಕಣಿವೆ ವ್ಯಾಪ್ತಿಯಲ್ಲಿ ಹರಡಿರುವ ಮಳೆನೀರುಗಾಲುವೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಖರ್ಚು ಮಾಡಿ ಸಕಾಲದಲ್ಲಿ ಪ್ರಾಜೆಕ್ಟ್ ಪೂರ್ಣಗೊಳಿಸುವುದು ಸವಾಲಿನ ಕೆಲಸವಾಗಿದೆ. ಏಕೆಂದರೆ, ಈಗಾಗಲೇ ಬಿಬಿಎಂಪಿ ಅಸ್ತಿತ್ವದಲ್ಲಿದ್ದಾಗ ಕೈಗೆತ್ತಿಕೊಂಡಿದ್ದ ರಾಜಕಾಲುವೆ ಹೂಳೆತ್ತುವಿಕೆ ಹಾಗೂ ಅಭಿವೃದ್ಧಿ ಕಾರ್ಯದಲ್ಲಿ ಅಕ್ರಮದ್ದೇ ಕಾರುಬಾರು ಆಗಿ ಹಲವು ಪ್ರಕರಣಗಳು ಲೋಕಾಯುಕ್ತದಲ್ಲಿ ತನಿಖಾ ಹಂತದಲ್ಲಿವೆ. ನೀರುಗಾಲುವೆ ವಿಭಾಗವು ಕಾರ್ಪೋರೇಷನ್‌ನ 2ನೇ ಅಡಿದೊಡ್ಡ ಡಿವಿಜನ್ ಆಗಿದ್ದು, ಪ್ರತೀವರ್ಷ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೂ, ನಿರೀಕ್ಷಿತ ಮಟ್ಟದಲ್ಲಿ ಕೆಲಸ ಸಮರ್ಪಕವಾಗಿ ನಡೆಯದೆ ಕುಖ್ಯಾತಿ ಹೊಂದಿರುವುದರಿಂದ ಹೊಸ ಪ್ರಾಜೆಕ್ಟ್ ನಿಜಕ್ಕೂ ಸಾಕಾರವಾಗುವುದೆ ಎಂಬ ಪ್ರಶ್ನೆ ಉದ್ಭವಿಸಿದೆ.
ಮುಖ್ಯವಾಗಿ 2016ರಿಂದ 2025ರ ವರೆಗೆ ರಾಜಕಾಲುವೆಗಳಲ್ಲಿ ಹೂಳೆತ್ತಲು ಹಾಗೂ ಅಭಿವೃದ್ಧಿಗೆ ಒಟ್ಟು 8,800 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದನ್ನು ನಿಕಟಪೂರ್ವ ಬಿಬಿಎಂಪಿ ಅಂಕಿ-ಅಂಶ ಬಿಡುಗಡೆ ಮಾಡಿತ್ತು. ಆದರೆ, ಕಾಮಗಾರಿ ಕೈಗೊಂಡ ಹೆಚ್ಚಿನ ಕಡೆಗಳಲ್ಲಿ ಸಮಸ್ಯೆ ಹಾಗೆಯೆ ಉಳಿದಿದೆ. ಬೃಹತ್ ಪ್ರಮಾಣದ ಅನುದಾನ ಖರ್ಚು ಮಾಡಿದರೂ, ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ ತೆರಿಗೆ ಹಣವನ್ನು ಖರ್ಚು ಮಾಡುವುದು ಅನಗತ್ಯ ಎನ್ನುತ್ತಾರೆ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಅಶ್ವತ್ಥನಾರಾಯಣಗೌಡ.

ಕಾಮಗಾರಿಗೆ 24 ತಿಂಗಳ ಗಡುವು:

ಕೆಡಬ್ಲ್ಯುಎಸ್‌ಆರ್‌ಪಿ ಅನುಷ್ಠಾನಕ್ಕೆ 16 ಪ್ಯಾಕೇಜ್‌ಗಳಲ್ಲಿ ಯೋಜನೆ ಸಿದ್ಧಪಡಿಸಿದ್ದು, ಸದ್ಯ ಸರ್ಕಾರ 15ಕ್ಕೆ ಒಪ್ಪಿಗೆ ಸೂಚಿಸಿದೆ. ಇನ್ನೊಂದು ಪ್ಯಾಕೇಜ್ ಬಾಕಿ ಇದ್ದು, ಶೀಘ್ರ ಅನುಮೋದನೆ ಸಿಗಲಿದೆ. ಸದ್ಯ ಒಪ್ಪಿಗೆ ಪಡೆದ ಪ್ಯಾಕೇಜ್‌ಗಳಲ್ಲಿ ಹನ್ನೆರಡಕ್ಕೆ ಕಾರ್ಯಾದೇಶ ಪತ್ರ ನೀಡಲಾಗಿದೆ. ಇವುಗಳನ್ನು ಈಗಷ್ಟೇ ಕಾಮಗಾರಿ ಆರಂಭಿಸಲಾಗುತ್ತಿದೆ. ಬಾಕಿ ಕಾರ್ಯಾದೇಶ ಈ ತಿಂಗಳಾಂತ್ಯಕ್ಕೆ ನೀಡುವ ನಿರೀಕ್ಷೆ ಇದ್ದು, ಮಳೆಗಾಲಕ್ಕೆ ಮುನ್ನ ಕೆಲಸ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಯೋಜನೆ ಜಾರಿಗೆ ‘ಬಿ ಸ್ಮೈಲ್’ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಗಳ ಮಟ್ಟದ ಸಮಿತಿ ರಚಿಸಲಾಗಿದೆ. ಜತಗೆ ಪ್ರಾಜೆಕ್ಟ್ ಮೇಲೆ ನಿರಂತರವಾಗಿ ನಿಗಾ ವಹಿಸಲುಯೋಜನೆ ನಿರ್ವಹಣೆ, ಪಿಎಂಸಿಗೂ ಅವಕಾಶ ಮಾಡಿಕೊಡಲಾಗಿದೆ. ಈ ಕಾರ್ಯಕ್ಕೆ ಪ್ರತ್ಯೇಕ ಕಂಪನಿಗಳಿಗೆ ಗುತ್ತಿಗೆ ನಿಡಲಾಗಿದೆ. ಈ ಎಲ್ಲ ಷರತ್ತನ್ನು ವಿಶ್ಚಬ್ಯಾಂಕ್ ಆರ್ಥಿಕ ನೆರವು ನೀಡುವಾಗ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈಗ ಪ್ರತಿ ಪ್ಯಾಕೇಜ್‌ನಡಿ ಕಾಮಗಾರಿ ಪೂರ್ಣಕ್ಕೆ 24 ತಿಂಗಳು ಗಡುವು ನೀಡಲಾಗಿದೆ. ತಾಂತ್ರಿಕತೆ, ಅಧಿಕಾರಿ/ಸಿಬ್ಬಂದಿ, ಕಾರ್ಮಿಕರ ಪಡೆ ಹೊಂದಿಸಿಕೊಂಡು ಕಾರ್ಯನಿರ್ವಹಿಸುವುದು ಸವಾಲಿನ ಕೆಲಸವಾಗಲಿದೆ ಎಂದು ಅಧಿಕಾರಿ ವರ್ಗವೇ ಹೇಳಿರುವುದು 2028ರ ಡೆಡ್‌ಲೈನ್ ಒಳಗೆ ಕಾಮಗಾರಿ ಪೂರ್ಣವಾಗುವುದು ಅನುಮಾನ ಮೂಡಿಸಿದೆ.

ಒತ್ತುವರಿ ತೆರವಾಗದೆ ಕಾಮಗಾರಿ ಕಷ್ಟ:

ಪ್ರಸ್ತುತ ನಗರದಲ್ಲಿ 842 ಕಿ.ಮೀ. ಉದ್ದದ ಮಳೆನೀರುಗಾಲುವೆ ಜಾಲವಿದೆ. ಈ ಪೈಕಿ ಈಗಾಗಲೇ 440 ಕಿ.ಮೀ. ಉದ್ದದಷ್ಟು ರಾಜಕಾಲುವೆಗಳು ಅಭಿವೃದ್ಧಿಗೊಂಡಿದ್ದು, ಇನ್ನೂ 402 ಕಿ.ಮೀ. ಉದ್ದದಷ್ಟು ಪುನಶ್ಚೇತನ ಬಾಕಿ ಇದೆ. ಇದನ್ನು ಹೊಸ ಯೋಜನೆಯಲ್ಲಿ ಕೈಗೆತ್ತಿಕೊಳ್ಳಬೇಕಿದ್ದು, ಒತ್ತುವರಿ ಪ್ರಕರಣಗಳು ಅಡ್ಡಿಯಾಗಲಿವೆ. ಮುಖ್ಯವಾಗಿ ಕೋರಮಂಗಲ ಹಾಗೂ ಚಲ್ಲಘಟ್ಟ ಕಣಿವೆ ಭಾಗದಲ್ಲಿ ಒತ್ತುವರಿ ಪ್ರಕರಣಗಳು ಹೆಚ್ಚಿದ್ದು, ಇವುಗಳನ್ನು ನಿವಾರಿಸದೆ ಕಾಮಗಾರಿ ಜಾರಿ ಕಷ್ಟವಾಗಲಿದೆ ಎಂಬ ವಾದ ಮುಂದಿಡಲಾಗಿದೆ.

ಬಫರ್ ಜಾಗದಲ್ಲಿ ರಸ್ತೆ ನಿರ್ಮಾಣ:

ಮಳೆನೀರುಗಾಲುವೆಗಳ ಪುನಶ್ಚೇತನ ಯೋಜನೆ ಜಾರಿಯಿಂದ ರಾಜಕಾಲುವೆಗಳನ್ನು ಶುಚಿಯಾಗಿಡುವ ಯತ್ನಕ್ಕೆ ಜಿಬಿಎ ಮುಂದಾಗಿದೆ. ಜತೆಗೆ ಪ್ರಮುಖ ನೀರುಗಾಲುವೆಗಳ ಎರಡೂ ಬದಿಯ ಬಫರ್ ಜಾಗದಲ್ಲಿ ಹೊಸದಾಗಿ ರಸ್ತೆ ನಿರ್ಮಿಸಿ ಸಂಚಾರಕ್ಕೆ ಅವಕಾಶ ನೀಡುವ ಉದ್ದೇಶ ಹೊಂದಲಾಗಿದೆ. ಕೆಲವೆಡೆ ರಾಜಕಾಲುವೆಗಳು ಬಹುದೂರ ಹಾದುಹೋಗುತ್ತಿರುವ ಕಾರಣ ಸ್ಥಳೀಯ ಜನರು ಸುತ್ತುಬಳಸಿ ಗಮ್ಯ ತಲುಪಬೇಕಿದೆ. ಬಫರ್ ಜಾಗದಲ್ಲಿ ರಸ್ತೆ ನಿರ್ಮಾಣವಾದ ಬಳಿಕ ಅಂದಾಜು 300 ಕಿ.ಮೀ. ಉದ್ದದ ರಸ್ತೆ ಸೌಲಭ್ಯ ಸಿಗಲಿದೆ ಎಂಬುದು ಡಿಸಿಎಂ ಡಿ.ಕೆ. ಶಿವಕುಮಾರ್ ಇಂಗಿತ ವ್ಯಕ್ತಪಡಿಸಿದ್ದಾರೆ.
"

ವಿಶ್ವಬ್ಯಾಂಕ್ ನೆರವಿನ ಕೆಡಬ್ಲ್ಯುಎಸ್‌ಆರ್‌ಪಿ ಯೋಜನೆ ಅಡಿಯಲ್ಲಿ 15 ಪ್ಯಾಕೇಜ್‌ಗಳಿಗೆ ಸರ್ಕಾರ ಒಪ್ಪಿಗೆ ನೀಡಿದೆ. ಇದನ್ನಾಧರಿಸಿ ಅರ್ಹ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುತ್ತಿದೆ. ಗಡುವಿನೊಳಗೆ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿದೆ. ಪ್ರತಿ ಕಾಮಗಾರಿ ಮೇಲ್ವಿಚಾರಣೆಗೆ ಅಧಿಕಾರಿಗಳ ತಂಡ ರಚಿಸಿದ್ದು, ಪ್ರಾಜೆಕ್ಟ್ ಪೂರ್ಣಗೊಂಡ ಬಳಿಕ ನಗರವು ಪ್ರವಾಹಮುಕ್ತ ಆಗಲಿದೆ.

- ರಾಜೇಶ್, ಮುಖ್ಯ ಇಂಜಿನಿಯರ್, ಜಿಬಿಎ (ಮಳೆನೀರುಗಾಲುವೆ ವಿಭಾಗ)

"

ಪಾಲಿಕೆಯಲ್ಲಿನ ಮಳೆನೀರುಗಾಲುವೆ ವಿಭಾಗವು ಕೈಗೊಳ್ಳುವ ಕಾಮಗಾರಿಗಳು ಕೋಟ್ಯಂತರ ರೂ. ವೆಚ್ಚ ಮಾಡಿದರೂ, ಉದ್ದೇಶ ಪೂರ್ಣಗೊಳ್ಳುತ್ತಿಲ್ಲ. ಬದಲಾಗಿ ಅಕ್ರಮದ ವಾಸನೆ ಸದಾ ಕೇಳಿಬರುತ್ತಿದೆ. ಹಾಲಿ ನೂತನ ಯೋಜನೆ ಕೂಡ ಭ್ರಷ್ಟಾಚಾರದಿಂದ ಮುಕ್ತವಾಗಿಲ್ಲ. ದೊಡ್ಡ ಮೊತ್ತದ ಕಮಿಷನ್ ಪಡೆದು ಹೊರ ರಾಜ್ಯದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿರುವುದು ಸರ್ಕಾರದ ಖಜಾನೆ ಖಾಲಿ ಮಾಡಲಿದೆಯೆ ಹೊರತು ರಾಜಕಾಲುವೆಗಳು ಶುಚಿಯಾಗುವುದು ಅನುಮಾನ.

- ಎನ್.ಆರ್. ರಮೇಶ್, ಬಿಜೆಪಿ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net