ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಸೂಚನೆ

fill-potholes-quickly
fill-potholes-quickly
Published on

ಪ್ರಮುಖ ಮುಖ್ಯಾಂಶಗಳು

  • ಜಿಬಿಎ ಮುಖ್ಯ ಆಯುಕ್ತರಿಂದ 5 ಪಾಲಿಕೆಗಳ ಅಭಿವೃದ್ಧಿ ಕಾರ್ಯ ಪರಾಮರ್ಶೆ
  • ಖಾಲಿ ಸೈಟ್‌ಗಳ ಸ್ವಚ್ಛತಾ ಕಾರ್ಯ ಚುರುಕುಗೊಳಿಸಲು ನಿರ್ದೇಶನ
ಬೆಂಗಳೂರು: ಮಹಾನಗರದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಉಂಟಾಗಿರುವ ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಎಂ.ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ವಿವಿಧ ವಿಷಯಗಳಿಗೆ ಸಂಬಂಧಿಸಿ ಮಂಗಳವಾರ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಗುರುತಿಸಿರುವ ರಸ್ತೆ ಗುಂಡಿಗಳನ್ನು ಕೂಡಲೇ ಮುಚ್ಚುವ ಕಾರ್ಯ ಕೈಗೊಳ್ಳಬೇಕು. ಗುಂಡಿಗಳನ್ನು ಮುಚ್ಚಿರುವ ಕುರಿತು ವಿಭಾಗವಾರು ಪಟ್ಟಿ ಸಿದ್ಧಪಡಿಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದರು.
ರಸ್ತೆಗಳಲ್ಲಿ ಯಾವುದೇ ಅಪಘಾತ ಉಂಟಾಗದಂತೆ ಗುಂಡಿಗಳನ್ನು ಮುಚ್ಚಬೇಕು. ಪಾಲಿಕೆವಾರು ರಸ್ತೆ ಗುಂಡಿ ಮುಚ್ಚುವ ಯಂತ್ರಗಳನ್ನು ಖರೀದಿಸಿ, ದುರಸ್ತಿ ಕಾರ್ಯವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು. ಮಳೆಯಾಗುವ ವೇಳೆ ಎಕೋಫಿಕ್ಸ್ ಮೂಲಕ ಗುಂಡಿಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಬೇಕು. ವಾರ್ಡ್ ರಸ್ತೆಗಳಲ್ಲಿಯೂ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಸಿ ಅವುಗಳನ್ನು ಖಾತರಿಪಡಿಸಿಕೊಳ್ಳಲು ಹಿರಿಯ ಅಧಿಕಾರಿಗಳು ಖುದ್ದಾಗಿ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ:

ನಗರದಲ್ಲಿ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಡಿ ಈವರೆಗೆ 1.84 ಲಕ್ಷ ಮೆಟ್ರಿಕ್ ಟನ್ ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸಲಾಗಿದೆ. ಇನ್ನೂ ಇತರೆಡೆ ತ್ಯಾಜ್ಯ ತೆರವುಗೊಳಿಸಬೇಕಿದೆ ಎಂಬುದನ್ನು ಪರಿಶೀಲಿಸಿ, ತೆರವು ಕಾರ್ಯವನ್ನು ಕೈಗೊಳ್ಳಬೇಕು. ತ್ಯಾಜ್ಯ ತೆರವುಗೊಳಿಸಿರುವ ಸ್ಥಳಗಳಲ್ಲಿ ಪಿಪಿಪಿ ಮಾದರಿಯಲ್ಲಿ ಸುಂದರೀಕರಣ ಕಾರ್ಯ ಕೈಗೊಳ್ಳುವಂತೆ ಸೂಚಿಸಿದರು.
ಸಭೆಯಲ್ಲಿ ಪಾಲಿಕೆಗಳ ಆಯುಕ್ತರಾದ ಡಿ.ಎಸ್. ರಮೇಶ್, ಪಿ.ಸುನೀಲ್ ಕುಮಾರ್, ಕೆ.ಎನ್. ರಮೇಶ್, ಜಿ.ಜಗದೀಶ್, ಡಾ. ಕೆ.ವಿ. ರಾಜೇಂದ್ರ, ವಿಶೇಷ ಆಯುಕ್ತ ನಿತೇಶ್, ಬಿಎಸ್‌ಡಬ್ಲ್ಯುಎಂಎಲ್ ಸಿಇಒ ಕರೀಗೌಡ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವಾಹನಗಳ ತೆರವು ಕಾರ್ಯ ಚುರುಕುಗೊಳಿಸಿ:

ಹಳೆಯ ಹಾಗೂ ನಿರುಪಯುಕ್ತ ವಾಹನಗಳ ತೆರವು ಕಾರ್ಯಾಚರಣೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ಇನ್ನೂ ಯಾವೆಲ್ಲ ಪ್ರದೇಶಗಳಲ್ಲಿ ಹಳೆಯ ವಾಹನಗಳಿವೆ ಎಂಬುದನ್ನು ಪರಿಶೀಲಿಸಿ, ನಿಯಮಾನುಸಾರ ನೋಟಿಸ್ ಅಂಟಿಸಿ ಅವುಗಳನ್ನು ಡಂಪಿಂಗ್ ಯಾರ್ಡ್‌ಗೆ ಸ್ಥಳಾಂತರಿಸಬೇಕು. ವಾಹನಗಳ ಮಾಲೀಕರು ನಿಗದಿತ ಅವಧಿಯಲ್ಲಿ ಹಾಜರಾಗದಿದ್ದಲ್ಲಿ ಹರಾಜು ಪ್ರಕ್ರಿಯೆ ಕೈಗೊಳ್ಳುವಂತೆ ಮುಖ್ಯ ಆಯುಕ್ತರು ಸೂಚಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net