ಮಟನ್ ಊಟದಲ್ಲಿ ನಿದ್ದೆ ಮಾತ್ರೆ, ಟಿವಿ ವಾಲ್ಯೂಮ್‌ ಫುಲ್ ಏರಿಸಿ ಏಳು ಜನರ ಕಗ್ಗೋಲೆ: ಮೈ ನಡುಗಿಸುತ್ತೆ ಹತ್ಯಾಕಾಂಡದ ರೋಚಕ ಪ್ಲಾನ್!

ಮಟನ್ ಊಟದಲ್ಲಿ ನಿದ್ದೆ ಮಾತ್ರೆ, ಟಿವಿ ವಾಲ್ಯೂಮ್‌ ಫುಲ್ ಏರಿಸಿ ಏಳು ಜನರ ಕಗ್ಗೋಲೆ: ಮೈ ನಡುಗಿಸುತ್ತೆ ಹತ್ಯಾಕಾಂಡದ ರೋಚಕ ಪ್ಲಾನ್!
Published on: 
  • ಮಟನ್ ಕರಿ ಮಾಡಿದ್ದೇನೆ ಎಂದು ಕರೆದು ನಿದ್ರೆ ಮಾತ್ರೆ ಹಾಕಿದ ಊಟ ತಿನ್ನಿಸಿ ಕೊಲೆ ಮಾಡ್ತಿದ್ದ ಇಂದು ಶೇಖರ್.

  • ಇಂದು ಶೇಖರ್ ಪತ್ನಿ, ಅತ್ತೆ ಮೃತದೇಹ ತಮಿಳುನಾಡಿನಲ್ಲಿ ಪತ್ತೆ.

  • 10 ವರ್ಷದ ಬಾಲಕನನ್ನು ಕೊಲೆ ಮಾಡಲು ಕರೆದೊಯ್ಯುತ್ತಿರುವಾಗಲೇ ಸಿಕ್ಕಿಬಿದ್ದ ಇಂದುಶೇಖರ್.

  • ಟಿವಿ ವಾಲ್ಯೂಮ್​ ಹೆಚ್ಚಿಸಿ, ಮನೆಯ ಗೋಡೆಗಳಿಗೆ ಪ್ಲಾಸ್ಟಿಕ್​ ಅಂಟಿಸಿ, ರಕ್ತದ ಕಲೆ ತಾಕದಂತೆ ಕೊಲೆ ಮಾಡುತ್ತಿದ್ದ ಇಂದು ಶೇಖರ್.

ಬಾಡೂಟಕ್ಕೆ ಸಿಕ್ಕ ಒಂದು ಆಹ್ವಾನ..ನಿದ್ದೆ ಮಾತ್ರೆ ಏಳು ಜನರ ಕತೆಯನ್ನು ಅತ್ಯಂತ ಭೀಕರವಾಗಿ ಮುಗಿಸಿತ್ತು. ಯಾವ ಕ್ರೈಂ ಥ್ರಿಲ್ಲರ್​ ಸಿನಿಮಾಕ್ಕೂ ಕಡಿಮೆ ಇಲ್ಲದ ಒಂದೇ ಕುಟುಂಬದ ಏಳು ಜನರ ಕೊಲೆ ಪ್ರಕರಣವು, ಇಡೀ ಬೆಂಗಳೂರಿನ ಜನರನ್ನು ಬೆಚ್ಚಿ ಬೀಳಿಸಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಚಕ ಮಾಹಿತಿಗಳು ಸಿಗುತ್ತಿದ್ದು, ಪೊಲೀಸರ ತನಿಖೆ ಮುಂದುವರೆದಿದೆ.

ಅಕ್ಟೋಬರ್ 14 ರಿಂದ 31 ರ ನಡುವೆ, ರಾಜಾಜಿನಗರ ವಿ ಬ್ಲಾಕ್‌ನ 59 ನೇ ಕ್ರಾಸ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ಏಳು ಜನರನ್ನು 52 ವರ್ಷದ ಕ್ಯಾಬ್ ಚಾಲಕ ಎಸ್. ಇಂದುಶೇಖರ್ ಕೊಂದಿದ್ದಾನೆ. ಇದಕ್ಕೆ ಕಾರಣ ಪತ್ನಿ ಸಂಬಂಧಿಕರ ಹೆಸರಲ್ಲಿದ್ದ 3 ಕೋಟಿ ರೂ. ಆಸ್ತಿ ಆಸೆಗೆ ಹಾಗೂ ದಂಪತಿ ನಡುವೆ ನಡೆಯುತ್ತಿದ್ದ ಗಲಾಟೆ ವೇಳೆ ಪತ್ನಿ ಸುನೀತಾ ಕುಟುಂಬಸ್ಥರೆಲ್ಲರೂ ಆಕೆಯ ಪರವಾಗಿ ನಿಲ್ಲುತ್ತಿದ್ದದ್ದು ಹಾಗೂ ಇಬ್ಬರ ಮಧ್ಯೆ ಇದ್ದ ವಯಸ್ಸಿನ ಅಂತರ.

9 ಜನರ ಕೊಲೆಗೆ ಪ್ಲ್ಯಾನ್

52 ವರ್ಷದ ಕ್ಯಾಬ್ ಚಾಲಕ ಎಸ್. ಇಂದುಶೇಖರ್, ಒಟ್ಟಾರೆ 9 ಮಂದಿಯನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದ. 15 ದಿನಗಳಲ್ಲಿ ಏಳು ಮಂದಿಯನ್ನು ಕೊಂದಿದ್ದ. ಅಷ್ಟರಲ್ಲೇ ಪೊಲೀಸರು ಆರೋಪಿಯನ್ನು ಬಂಧಿಸಿದ್ದರಿಂದ ಉಳಿದಿಬ್ಬರ ಹತ್ಯೆಯಾಗುವುದು ಅದೃಷ್ಟವಶಾತ್ ತಪ್ಪಿದೆ.

ಇಂದು ಶೇಖರ್​ ಪ್ಲ್ಯಾನ್​ ಹೇಗಿತ್ತು?, ಮೃತದೇಹ ಎಲ್ಲಿ ಪತ್ತೆಯಾಗಿದೆ?

ಅ.14ರ ರಾತ್ರಿ ಪತ್ನಿ ಸುನೀತಾರನ್ನು ಕೊಂದಿದ್ದಾನೆ ಇಂದುಶೇಖರ್​​. ಮಗಳಿಗೆ ಸುನೀತಾ ಹಾಗೂ ಅವರ ಸಂಬಂಧಿಕರ ಮೇಲೆ ದ್ವೇಷ ಹುಟ್ಟುವಂತೆ ಮಾಡಿದ್ದ. ಅಲ್ಲದೆ ಮಗಳನ್ನು ಸುಳ್ಳು ಹೇಳಿ ನಂಬಿಸಿದ್ದ.. ಹೀಗಾಗಿ ಕೊಲೆಗೆ ಸಾಥ್​ ಕೊಟ್ಟಿದ್ದ ಆಕೆ, ತಾಯಿ ಸತ್ತ ಮರುದಿನ ತನ್ನ ಅಜ್ಜಿಗೆ ಕರೆ ಮಾಡಿ, ಮಟನ್​​ ಊಟ ಮಾಡಿದ್ದೇನೆ ಬನ್ನಿ ಎಂದು ಆಹ್ವಾನವಿಟ್ಟಿದ್ದಾಳೆ. ಮೊಮ್ಮಗಳ ಈ ಅಕ್ಕರೆ ಪ್ರೀತಿಯ ಆಹ್ವಾನಕ್ಕೆ ತಿಳಿಯದೇ ಬಂದ ರೂಪವತಿ ಹೆಣವಾದರು.

ಸುನೀತಾ ರೂಪಾವತಿ ನಂತರ ಇಂದು ಶೇಖರ್​ ಟಾರ್ಗೆಟ್​​​ ಬಾಮೈದುನರು ಹಾಗೂ ಅವರ ಪತ್ನಿಯರು. ಇಬ್ಬರು ಬಾಮೈದುನರನ್ನು ಪ್ರತ್ಯೇಕವಾಗಿ ಮನೆಗೆ ಊಟಕ್ಕೆ ಆಹ್ವಾನಿಸಿ, ಅವರಿಗೆ ಇಷ್ಟವಾದ ಬಾಡೂಟ ಮಾಡಿ. ಕಂಠ ಪೂರ್ತಿ ಕುಡಿಸಿ ನಶೆಯಲ್ಲಿರುವಾಗ, ಶಿವಕುಮಾರ್ ಮತ್ತು ಶಂಕರ್‌ನನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿದ್ದ. ಮೃತರ ಗುರುತು ಪತ್ತೆಯಾಗದಂತೆ ಅವರ ಕಟ್ಟಿ ಚೀಲದಲ್ಲಿ ಹಾಕಿಕೊಂಡು ತನ್ನ ಕ್ಯಾಬ್‌ನಲ್ಲೇ ಶವಗಳನ್ನು ಸಾಗಣೆ ಮಾಡಿ ಬಿಸಾಡಿದ್ದ ಎನ್ನಲಾಗಿದೆ.

ಟಿವಿ ವಾಲ್ಯೂಮ್ ಹೆಚ್ಚಿಸಿ, ರಕ್ತ ಹರಡದಂತೆ ಪ್ಲಾಸ್ಟಿಕ್ ಹಾಕಿ ಕೊಲೆ

ಪೊಲೀಸರ ತನಿಖೆಯಿಂದ ಸಿಕ್ಕ ಮಾಹಿತಿ ಪ್ರಕಾರ, ಒಬ್ಬೊಬ್ಬರ ಮುಖಕ್ಕೆ ಒರಳು ಕಲ್ಲಿನಿಂದ ಜಜ್ಜಿ, ಕೈಕಾಲು ಒಂದೊಂದು ರೀತಿ ಹತ್ಯೆ ಮಾಡಿದ್ದ. ಅಕ್ಕ ಪಕ್ಕದ ಮನೆಯವರಿಗೆ ಕೊಲೆಯಾಗುವಾಗ ನೋವಿನ ಚೀರಾಟದ ಶಬ್ಧ ಕೇಳದಂತೆ ಇರಲು, ಟಿವಿ ಧ್ವನಿ ಹೆಚ್ಚಿಸಿ ಮುಂದಿನ ಕಾರ್ಯ ಕೈಗೊಳ್ಳುತ್ತಿದ್ದ. ಇದಕ್ಕೆ ಸಾಥ್ ಕೊಟ್ಟಿದ್ದ ಮಗಳು ರಕ್ತದ ಕಲೆ ಗೋಡೆಗಳ ಮೇಲೆ ಅಥವಾ ಎಲ್ಲಿಯೂ ಹರಡದಂತೆ ತಡೆಯಲು ಪ್ಲಾಸ್ಟಿಕ್​​​​​​​ ಅನ್ನು ಅಂಟಿಸಿದ್ದಳು. ರಕ್ತದ ಕಲೆ ತೊಳೆದು, ಆಸಿಡ್​ ಹಾಕಿ ಮನೆ ಸ್ವಚ್ಛಗೊಳಿಸುತ್ತಿದ್ದಳು.

ಮುಂಜಾನೆ ರಕ್ತದ ಕಲೆಯ ಪ್ಲಾಸ್ಟಿಕ್ ಚೀಲವನ್ನು ಟೊಯೋಟಾ ಎಟಿಯೋಸ್‌ನಲ್ಲಿಟ್ಟು, ವಿವಿಧ ಸ್ಥಳಗಳಲ್ಲಿ ಶವಗಳನ್ನು ವಿಲೇವಾರಿ ಮಾಡುತ್ತಿದ್ದರು. ಪತ್ನಿ ಮತ್ತು ಸಂಬಂಧಿಕರ ದೇಹದಲ್ಲಿದ್ದ ಚಿನ್ನದ ಆಭರಣವನ್ನು ತೆಗೆದುಕೊಂಡು ಮಾರಾಟ ಮಾಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.. ಟೊಯೋಟಾ ಎಟಿಯೋಸ್‌ನಿಂದ ಪೊಲೀಸರು ಕನಿಷ್ಠ ಅರ್ಧ ಡಜನ್ ಸುಗಂಧ ದ್ರವ್ಯ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ,

ಮುಂದಿನ ಗುರಿ 10 ವರ್ಷದ ಬಾಲಕ

ಹಲಸೂರ್ ಗೇಟ್​ ಬಳಿ ಇಂದು ಶೇಖರ್​ನನ್ನು ಪೊಲೀಸರು ಬುಧವಾರ ಬಂಧಿಸಿದರು. ಈ ವೇಳೆ ಆತನ ಕಾರಿನಲ್ಲಿ 10 ವರ್ಷದ ಬಾಲಕ ಯತಿನ್ ಇದ್ದ. ನಿನ್ನ ಅಮ್ಮ-ಅಪ್ಪ ಪ್ರವಾಸಕ್ಕೆ ತೆರಳಿದ್ದಾರೆ ಎಂದು ನಂಬಿಸಿದ್ದ. ತನ್ನ ಹೆತ್ತವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿಯದೆ, ಇಂದುಶೇಖರ್ ಮತ್ತು ಆತನ ಮಗಳ ಜೊತೆ ಹಲವು ದಿನಗಳನ್ನು ಕಳೆದಿದ್ದನು.

ಆತನ ಕೊಲೆಗೂ ಸಂಚು ರೂಪಿಸಿದ್ದ. ಆದರೆ, ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂದಿ ಬೆಟ್ಟ, ಧರ್ಮಸ್ಥಳ, ಕುಕ್ಕೆ ಸೇರಿ ಇತರ ಕಡೆಗೆ ಆತನನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಈ ವೇಳೆ ಅರಣ್ಯ ಪ್ರದೇಶ, ಘಾಟ್‌ಗಳಲ್ಲಿ ಶವಗಳ ಮೂಟೆಗಳನ್ನು ಎಸೆಯುತ್ತಿದ್ದ. ಬಾಲಕ ಅವುಗಳು ಏನು ಎಂದು ಕೇಳಿದರೆ ಕಸದ ಚೀಲ ಎನ್ನುತ್ತಿದ್ದ. ನ.4ರಂದು ಬಾಲಕನನ್ನು ಹಲಸೂರು ಗೇಟ್ ರಸ್ತೆಯಲ್ಲಿ ಇಳಿಸಿ ಹೋಗಿದ್ದ. ಈ ವಿಚಾರವನ್ನು ಯತಿನ್ ಪೊಲೀಸರ ಮುಂದೆ ಹೇಳಿದ್ದಾನೆ.

ಕೊಲೆಗೆ ಕಾರಣ ಏನು?

ಪತ್ನಿಯ ಸಂಬಂಧಿಕರ ಹೆಸರಿನಲ್ಲಿ ಅಂದಾಜು 3 ಕೋಟಿ ರೂ. ಮೌಲ್ಯದ ಆಸ್ತಿ ಇತ್ತು. ಅದನ್ನು ಕಬಳಿಸಲು ಸಂಚು ರೂಪಿಸಿದ್ದ ಆರೋಪಿ, ಎಲ್ಲರನ್ನೂ ಹತ್ಯೆ ಮಾಡಿದರೆ ಆ ಸ್ವತ್ತು ತನ್ನದಾಗಲಿದೆ ಎಂದು ಯೋಚಿಸಿದ್ದ. ಇದೇ ಕಾರಣಕ್ಕೆ ಕುಟುಂಬದಲ್ಲಿದ್ದ 9 ಜನರನ್ನೂ ಕೊಲೆ ಮಾಡಲು ಸಂಚು ರೂಪಿಸಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ಇಂದುಶೇಖರ್‌ನನ್ನು ಶ್ರೀರಾಮಪುರ ಪೊಲೀಸರು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಿದ್ದು, 12 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಕೃತ್ಯದಲ್ಲಿ ಪಾಲ್ಗೊಂಡ ಶಂಕೆಯ ಮೇರೆಗೆ 17 ವರ್ಷದ ಅಪ್ರಾಪ್ತ ಮಗಳನ್ನು ವಿಚಾರಣೆ ನಡೆಸಿದ್ದಾರೆ.

4 ಶವಗಳಿಗಾಗಿ ಹುಡುಕಾಟ

ಸದ್ಯ ಪೊಲೀಸರಿಂದ ಸಿಕ್ಕಿರುವ ಮಾಹಿತಿ ಪ್ರಕಾರ, ಇಂದುಶೇಖರ್ ಅವರ ಪತ್ನಿ ಸುನೀತಾ ಮತ್ತು ಅವರ ತಾಯಿ ರೂಪಾವತಿ ಮೃತದೇಹ ತಮಿಳುನಾಡಿನ ಸೇಲಂ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ. ಕೊಲೆಯಾದವರ ಪೈಕಿ ಮೂವರ ಮೃತದೇಹ ಮಾತ್ರ ಪತ್ತೆಯಾಗಿದ್ದು, ಇನ್ನುಳಿದವರ ದೇಹಕ್ಕಾಗಿ ಹುಡುಕಾಟ ಮುಂದುವರೆದಿದೆ. ರೂಪಾವತಿ ಮತ್ತು ಸುನೀತಾ ಮೃತದೇಹಗಳನ್ನು ಗುರುತಿಸಲು ಮತ್ತು ಅಗತ್ಯ ಕಾನೂನು ವಿಧಿವಿಧಾನಗಳನ್ನು ಪೂರ್ಣಗೊಳಿಸಲು ಕುಟುಂಬ ಸದಸ್ಯರನ್ನು ಒಳಗೊಂಡ 12 ಸದಸ್ಯರ ತಂಡವು ಸೇಲಂಗೆ ಪ್ರಯಾಣ ಬೆಳೆಸಿದೆ.

ನಂದಿ ಬೆಟ್ಟದ ರಂಗಪ್ಪ ಸರ್ಕಲ್ ಬಳಿಯ ಅರಣ್ಯ ಪ್ರದೇಶದಲ್ಲಿ ಏಳು ವರ್ಷದ ಮಗು ಪುನೀತ್ ಮೃತದೇಹ ಮೂಟೆ ಕಟ್ಟಿದ ಚೀಲದಲ್ಲಿ ಶುಕ್ರವಾರ ಪತ್ತೆಯಾಗಿದೆ. ಉಳಿದವರಾದ ಪತ್ನಿ ಸುನೀತಾ, ಅತ್ತೆ ರೂಪವತಿ ತಮಿಳುನಾಡಿನಲ್ಲಿ ಸಿಕ್ಕಿದ್ದು, ಬಾಮೈದ ಶಿವಕುಮಾರ್, ಶಂಕರ್, ದಿವ್ಯಾ ಹಾಗೂ ನಳಿನಿ ಅವರ ಮೃತದೇಹಗಳ ಹುಡುಕಾಟ ಮುಂದುವರಿದಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ

ಶ್ರೀರಾಂಪುರದಲ್ಲಿರುವ ಕುಟುಂಬ ಸದಸ್ಯರ ಪೈಕಿ ಒಬ್ಬೊಬ್ಬರೂ ಕಾಣೆಯಾಗುತ್ತಿರುವ ಬಗ್ಗೆ ನ.3ರಂದು ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ನಾಪತ್ತೆಯಾದವರ ಮೊಬೈಲ್ ನಂಬರ್ ಲೊಕೇಷನ್ ಪತ್ತೆ ಮಾಡಿದಾಗ ಆರೋಪಿ ಮನೆಯಲ್ಲಿಯೇ ಎಲ್ಲರ ಮೊಬೈಲ್‌ಗಳು ಪತ್ತೆಯಾಗಿವೆ. ಇದರಿಂದ ಆರೋಪಿಯನ್ನು ವಶಕ್ಕೆ ಪಡೆದಾಗ ಕೊಲೆ ಸತ್ಯ ಬಯಲಾಗಿದೆ. ಮೃತರ ಮೊಬೈಲ್ ಫೋನ್‌ಗಳನ್ನು ಆರೋಪಿ ಬಳಸುತ್ತಿದ್ದ. ಸಂಬಂಧಿಕರು ಕರೆ ಮಾಡಿದಾಗ ಆಲ್ ಇಂಡಿಯಾ ಟೂರ್ ಬಂದಿದ್ದೇವೆ. ಬರುವುದು ಕೆಲ ದಿನಗಳಾಗಲಿವೆ ಎಂದು ಹೇಳುತ್ತಿದ್ದ. ಅಷ್ಟರಲ್ಲಿ 7 ಮಂದಿ ಹತ್ಯೆ ನಡೆದು 10ರಿಂದ 12 ದಿನ ಕಳೆದುಹೋಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಸಿ ಕ್ಯಾಮೆರಾ ದೃಶ್ಯಗಳು ಪತ್ತೆ

ಕೊಲೆ ಮಾಡಿದ ಬಳಿಕ ಮೃತ ದೇಹಗಳನ್ನು ಸಾಗಣಿ ಮಾಡಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸರೆಯಾಗಿರುವ ದೃಶ್ಯಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆರೋಪಿ ರಾಜಾಜಿನಗರದ ಭಾಷ್ಯಂ ವೃತ್ತ ಸಮೀಪದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಸುತ್ತಲಿನ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿದಾಗ ಕ್ಯಾಬ್‌ನಲ್ಲಿ ಮೃತದೇಹಗಳನ್ನು ಸಾಗಣೆ ಮಾಡಿರುವುದು ಪತ್ತೆಯಾಗಿದೆ. ಕ್ಯಾಬ್ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ, (ಏಜೆನ್ಸೀಸ್).