ಹಲಸೂರು ಕೆರೆಗೆ ಅಭಿವೃದ್ಧಿಯ ಮೊಹರು

lakedevelopment
lakedevelopment
Published on

ಪ್ರಮುಖ ಮುಖ್ಯಾಂಶಗಳು

  • 100 ಕೋಟಿ ರೂ. ವೆಚ್ಚದಲ್ಲಿ ಜಲತಾಣಕ್ಕೆ ಹೊಸ ರೂಪ
  • ಪ್ರವಾಸಿ ತಾಣವಾಗಿಸಲು ಕೇಂದ್ರ ನಗರ ಪಾಲಿಕೆ ಕ್ರಮ
ಬೆಂಗಳೂರು: ಮಹಾನಗರದ ಕೇಂದ್ರ ಭಾಗದಲ್ಲಿರುವ ಅತಿದೊಡ್ಡ ಜಲತಾಣ ಖ್ಯಾತಿಯ ಹಲಸೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸುವ ಕಾರ್ಯಕ್ಕೆ ಕೇಂದ್ರ ನಗರ ಪಾಲಿಕೆಯು ಚಾಲನೆ ನೀಡಿದೆ.
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ಕೆರೆ ಕಾಲಾನಂತರ ಬ್ರಿಟಿಷ್ ಆಡಳಿತದಲ್ಲಿ ಇನ್ನಷ್ಟು ವಿಸ್ತರಣೆ ಕಂಡಿತು. ಪ್ರಸ್ತುತ ಕೆರೆಯು ಹಲವು ದಶಕಗಳಿಂದ ಕಾರ್ಪೋರೇಷನ್ ಸುಪರ್ದಿಯಲ್ಲಿದ್ದರೂ, ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ. ಕೊಳಚೆನೀರು ಸೇರ್ಪಡೆಯಿಂದಾಗಿ ಕೆರೆ ಕಲುಷಿತಗೊಂಡು ಜನಾಕರ್ಷಣೆ ಕಳೆದುಕೊಂಡಿದೆ. ಈ ಸಮಸ್ಯೆಯನ್ನು ನಿವಾರಿಸಿ ಹಲಸೂರು ಕೆರೆಗೆ ಕಾಯಕಲ್ಪ ನೀಡಲು ಪಾಲಿಕೆಯು ಹೊಸ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಿ ಕಾಮಗಾರಿಯನ್ನು ಆರಂಭಿಸಿದೆ.
ಹಲಸೂರು ಕೆರೆಯು 123 ಎಕರೆ ಪ್ರದೇಶದಷ್ಟು ವಿಸ್ತಾರಗೊಂಡಿದೆ. ಅದರ ಗಡಿಯ ಸುತ್ತಲೂ ನಡಿಗೆ ಕೈಗೊಂಡರೆ 3 ಕಿ.ಮೀ. ಆಗುತ್ತದೆ. ಇಷ್ಟು ದೊಡ್ಡ ಕೆರೆಯೊಂದು ಕೇಂದ್ರ ಪಾಲಿಕೆಯಲ್ಲಿರುವುದು ಇದೊಂದೇ ಜಲತಾಣವಾಗಿದೆ. ಹಾಗಾಗಿ ಕೇಂದ್ರ ಪಾಲಿಕೆ, ಸಣ್ಣ ನೀರಾವರಿ ಇಲಾಖೆ ಹಾಗೂ ರಾಜ್ಯ ಸರ್ಕಾರ ಕ್ರಮವಾಗಿ 50 ಕೋಟಿ ರೂ., 30 ಕೋಟಿ ರೂ. ಮತ್ತು 20 ಕೋಟಿ ರೂ. ಸೇರಿ ಒಟ್ಟು 100 ಕೋಟಿ ರೂ. ಅನುದಾನ ಕ್ರೋಡೀಕರಿಸಿ ಪುನಶ್ಚೇತನಕ್ಕೆ ಒಪ್ಪಿಗೆ ದೊರೆತಿದೆ. ಡಿಪಿಆರ್‌ಗೆ ಕರ್ನಾಟಕ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಪ್ರಾಧಿಕಾರ (ಕೆಟಿಡಿಸಿಎ) ಕೂಡ ಅನುಮೋದನೆ ನೀಡಿರುವುದರಿಂದ ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ.

25 ವರ್ಷದ ಬಳಿಕ ಹೂಳು ಹೊರಕ್ಕೆ:

ಹಲಸೂರು ಕೆರೆಯ ಸುತ್ತ ರಸ್ತೆ ಇರುವುದರಿಂದ ಸದ್ಯ ಒತ್ತುವರಿಮುಕ್ತವಾಗಿದೆ. ಆದರೆ, ಕೊಳಚೆನೀರು ಹರಿಯುವಿಕೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹೂಳು ಸಂಗ್ರಹಗೊಂಡಿದೆ. 2001-02ನೇ ಸಾಲಿನ ಬಳಿಕ ಈವರೆಗೆ ಹೂಳೆತ್ತುವಿಕೆ ಕಾರ್ಯ ಕೈಗೊಂಡಿರಲಿಲ್ಲ. 25 ವರ್ಷದ ನಂತರ ಹೂಳೆತ್ತುವ ಕೆಲಸಕ್ಕೆ ಚಾಲನೆ ದೊರೆತಿದ್ದು, ಈ ಕೆಲಸ ಪೂರ್ಣಗೊಂಡಲ್ಲಿ ಕೆರೆಯಲ್ಲಿ ನೀರಿನ ಸಂಗ್ರಹ ಅಧಿಕಗೊಳ್ಳಲಿದೆ. ವರ್ಷದುದ್ದಕ್ಕೂ ನೀರು ಸಂಗ್ರಹ ಮಾಡಬಹುದಾಗಿದ್ದು, ಬೋಟಿಂಗ್ ಸಹಿತ ಪ್ರವಾಸಿಗರಿಗೆ ಇನ್ನಿತರ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ ಎಂದು ಸ್ಥಳೀಯ ಶಾಸಕ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

1.5 ವರ್ಷದಲ್ಲಿ ಕೆರೆಗೆ ಹೊಸರೂಪ:

ಹಲಸೂರು ಕೆರೆ ಅಭಿವೃದ್ಧಿ ಯೋಜನೆಯಲ್ಲಿ ಹೂಳೆತ್ತುವಿಕೆ, ಏರಿ ಭದ್ರಪಡಿಸಿ ಹೊಸದಾಗಿ ನಿರ್ಮಿಸುವುದು, ನೀರಿನ ಒಳ/ಹೊರ ಹರಿವಿನ ತೂಬುಗಳ ಪುನಶ್ಚೇತನ, ಕಲುಷಿತ ನೀರು ಹರಿಯುವಿಕೆಗೆ ಶಾಶ್ವತ ತಡೆ ಹಾಕುವ ಕೆಲಸಕ್ಕೆ ಆದ್ಯತೆ ನೀಡಲಾಗುತ್ತದೆ. ಜತೆಗೆ ಕೆರೆಸುತ್ತ ನಡಿಗೆ ಪಥ, ಕಿರು ಉದ್ಯಾನ, ಮಕ್ಕಳ ಆಟದ ಮೈದಾನ ಅಭಿವೃದ್ಧಿಪಡಿಸಲಾಗುತ್ತದೆ. ಕಾರಂಜಿ, ಓಪನ್ ಜಿಮ್, ಶೌಚಾಲಯ ಸಹಿತ ಇತರ ನಾಗರಿಕ ಸೌಲಭ್ಯವನ್ನೂ ಒದಗಿಸಲಾಗುತ್ತದೆ. ಈ ಎಲ್ಲ ಕಾರ್ಯವನ್ನು 1.5 ವರ್ಷದೊಳಗೆ ಪೂರ್ಣಗೊಳಿಸಲು ಗಡವು ವಿಧಿಸಲಾಗಿದೆ.

ಬೋಟಿಂಗ್ ಆಕರ್ಷಣೆ:

ಬೆಂಗಳೂರಿನ ಕೆರೆಗಳಲ್ಲಿ ಬೋಟಿಂಗ್ ಸೌಲಭ್ಯ ಬೆರೆಳೆಣಿಕೆ ಕಡೆಗಳಲ್ಲಿ ಮಾತ್ರ ಇದೆ. ಆದರೂ ಈ ಸೌಲಭ್ಯ ಮಳೆಗಾಲ ಸೇರಿ ಕೆಲವೇ ತಿಂಗಳಲ್ಲಿ ಲಭ್ಯ. ಪುನಶ್ಚೇತನಗೊಳ್ಳಲಿರುವ ಹಲಸೂರು ಕೆರೆಯಲ್ಲಿ ವರ್ಷಪೂರ್ತಿ ಬೋಟಿಂಗ್ ಸೌಲಭ್ಯ ಕಲ್ಪಿಸುವ ಪ್ರಸ್ತಾಪ ಇದೆ. ಕೆರೆ ಆಳವಾಗಿ ಇರುವುದರಿಂದ ದೊಡ್ಡ ಗಾತ್ರ ಬೋಟಿಂಗ್‌ಗೂ ಅವಕಾಶ ಸಿಗಲಿದೆ. ವರ್ಷದುದ್ದಕ್ಕೂ ಪರಿಸರಸ್ನೇಹಿ ಕಾರ್ಯಕ್ರಮ ಆಯೋಜಿಸುವ ಉದ್ದೇಶವೂ ಇದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
"

ಕೆಲ ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಲಸೂರು ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಮಹಾನಗರದ ಪ್ರಮುಖ ಪ್ರವಾಸಿ ತಾಣವಾಗಿ ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ. 3 ಹಂತಗಳಲ್ಲಿ ಪುನಶ್ಚೇತನ ಕಾರ್ಯ ನಡೆಯಲಿದ್ದು, ಮೊದಲ ಹಂತದಲ್ಲಿ ಹೂಳೆತ್ತುವಿಕೆ ಕೆಲಸ ಪ್ರಗತಿಯಲ್ಲಿದೆ. ಈಗಾಗಲೇ 80 ಕೋಟಿ ರೂ. ಅನುದಾನ ಮಂಜೂರಾತಿ ದೊರೆತಿದ್ದು, ಸರ್ಕಾರದಿಂದ 20 ಕೋಟಿ ರೂ. ಸೇರಿ ಒಟ್ಟು 100 ಕೋಟಿ ರೂ. ವೆಚ್ಚದಲ್ಲಿ ಕೆರೆಗೆ ಕಾಯಕಲ್ಪ ನೀಡುವ ಗುರಿ ಹೊಂದಲಾಗಿದೆ.

- ರಿಜ್ವಾನ್ ಅರ್ಷದ್, ಶಿವಾಜಿನಗರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net