ಮತ್ತೆ 8 ದಿನ ಇ.ಡಿ ವಶಕ್ಕೆ ಜ್ಞಾನೇಂದ್ರ ಕುಮಾರ್

IAS Officer
IAS Officer DESK
Published on: 

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್‌ನನ್ನು ಮತ್ತೆ ಇ.ಡಿ 8 ದಿನ ಕಸ್ಟಡಿಗೆ ಪಡೆದಿದೆ.

ಈ ಹಿಂದೆ ಐದು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದ ಇ.ಡಿ ಅಧಿಕಾರಿಗಳು, ಆರೋಪಿ ವಿಚಾರಣೆಯಲ್ಲಿ ಸಹಕಾರ ನೀಡುತ್ತಿಲ್ಲ. ಈ ಹಿಂದೆ ನಡೆದ ದಾಳಿ ಸಂದರ್ಭದಲ್ಲಿ ನಾಪತ್ತೆಯಾಗಿದ್ದು ಯಾಕೆ? ಇ.ಡಿ ದಾಳಿ ಕುರಿತು ಯಾರು ಮಾಹಿತಿ ನೀಡಿದ್ದರು? ಅಕ್ರಮದಲ್ಲಿ ಎಷ್ಟು ಮಂದಿಯಿಂದ ಹಣ ಪಡೆದುಕೊಂಡಿದ್ದಿರಾ? ಎಂಬ ಹಲವು ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿಲ್ಲ. ಹೀಗಾಗಿ ಆವರನ್ನು ಮತ್ತೆ ವಶಕ್ಕೆ ನೀಡುವಂತೆ ಅಧಿಕಾರಿಗಳು ಕೋರಿದರು. ಅದನ್ನು ಪರಿಗಣಿಸಿದ 4ನೇ ಸೇಷನ್ಸ್ ಕೋರ್ಟ್ ಆರೋಪಿಯನ್ನು ಎಂಟು ದಿನಗಳ ಕಾಲ ವಶಕ್ಕೆ ನೀಡಿ ಆದೇಶಿಸಿದೆ.

ಆರೋಪಿ ಪರ ವಕೀಲರು, ಜ್ಞಾನೇಂದ್ರ ಕುಮಾರ್‌ಗೆ ಬೆನ್ನು ನೋವಿನ ಸಮಸ್ಯೆ ಇದೆ. ಪಿಸಿಯೋಥೆರಪಿ ಅವಶ್ಯಕತೆ ಇದೆ. ವಿಚಾರಣೆ ಹೆಸರಿಗೆ ಅವರಿಗೆ ತೊಂದರೆ ನೀಡಲಾಗುತ್ತಿದೆ ಎಂದು ವಾದಿಸಿದರು.

ಅದಕ್ಕೆ ಆಕ್ಷೇಪಿಸಿದ ಇ.ಡಿ ಪರ ವಕೀಲರು, 2026ರ ಜ. 9ರಂದು ಪರೀಕ್ಷೆ ನಡೆದಿದೆ. ಪರೀಕ್ಷೆಗೂ 6 ತಿಂಗಳು ಮುಂಚಿತವಾಗಿಯೇ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಲಾಗಿದೆ. ಮಧ್ಯವರ್ತಿ ಬಸವರಾಜ್ ಕನ್ನಾಳೆ ಜತೆಗೆ ಚಿನ್ನಾಭರಣ ಖರೀದಿಗೆ ಹಣದ ವ್ಯವಹಾರ ಪ್ರಸ್ತಾಪವಾಗಿತ್ತು. ಜ್ಞಾನೇಂದ್ರ ಸಹೋದರ ಸಂಬಂಧಿ ಬ್ಯಾಂಕ್ ಖಾತೆಗೂ ಲಕ್ಷಾಂತರ ರೂ. ವರ್ಗಾವಣೆಯಾಗಿದೆ. ಇ.ಡಿ ದಾಳಿ ವೇಳೆ ಆತ ಯಾರನ್ನು ಸಂಪರ್ಕಿಸಿದ್ದಾನೆ ಸೇರಿ ಇತರೆ ವಿಚಾರಗಳ ಬಗ್ಗೆ ಆರೋಪಿಯನ್ನು ಪ್ರಶ್ನಿಸಬೇಕು ಎಂದು ಮನವಿ ಮಾಡಿದರು. ಕೊನೆಗೆ ವಾದ-ಪ್ರತಿವಾದ ಆಲಿಸಿದ ಕೋರ್ಟ್, ಆರೋಪಿ ಜ್ಞಾನೇಂದ್ರನನ್ನು 8 ದಿನ ಇಡಿ ಕಸ್ಟಡಿಗೆ ನೀಡಿ ಆದೇಶಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net