ನಗರದಲ್ಲಿರುವ ಮಳೆನೀರುಗಾಲುವೆಗಳು 4 ಕಣಿವೆ (ಹೆಬ್ಬಾಳ, ವೃಷಭಾವತಿ, ಚಲ್ಲಘಟ್ಟ, ಕೋರಮಂಗಲ) ವ್ಯಾಪ್ತಿಯ 860 ಕಿ.ಮಿ. ಉದ್ದಕ್ಕೂ ವಿಸ್ತರಿಸಿದೆ. ಆಯಾ ಪ್ರದೇಶ ಆಧರಿಸಿ 40-100 ಅಡಿ ಅಗಲವಾಗಿ ಹರಿಯುವ ಈ ನೀರುಗಾಲುವೆಯೇ ಪ್ರವಾಹಕ್ಕೆ ಆಸ್ಪದ ನೀಡಿದೆ. ಹಲವೆಡೆ ಸರಿಯಾದ ತಡೆಗೋಡೆ ಇಲ್ಲದಿರುವುದು, ತಗ್ಗುಪ್ರದೇಶಗಳಲ್ಲಿ ನೀರುಗಾಲುವೆಗೆ ಮಳೆನೀರು ಸರಾಗವಾಗಿ ಹರಿಯದಿರುವುದು, ಹೂಳು ತುಂಬಿರುವುದು ಇತ್ಯಾದಿ ಕಾರಣದಿಂದ ಇವುಗಳು ಮೃತ್ಯುಕೂಪಗಳಾಗಿ ಮಾರ್ಪಟ್ಟಿವೆ. ಇದರಿಂದ ಕೆರೆ, ಕಾಲುವೆಗಳ ಬದಿಯಿರುವ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನೀರುಪಾಲು ಆಗುವುದು ಮುಂದುವರಿದಿದೆ. ಈ ಸಮಸ್ಯೆ ನಿವಾರಿಸಲು ಮಳೆನೀರುಗಾಲುವೆಗಳಿಗೆ ಆರ್‌ಸಿಸಿ ರಿಟೈನಿಂಗ್ ವಾಲ್‌ಗಳು ಸೇರಿ ನೀರಿನ ಧಾರಣ ರಚನೆ, ಪ್ರಕೃತಿ ಆಧಾರಿತ ಪರಿಹಾರ ರಚನೆ, ಕಲ್ವರ್ಟ್ ಮತ್ತು ಸೇತುವೆಗಳ ಪ್ರವಾಹ ರಕ್ಷಣಾ ರಚನೆಗಳ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ಈ ಯೋಜನೆ ಪೂರ್ಣಗೊಂಡಲ್ಲಿ ನಗರವು ಪ್ರವಾಹಮುಕ್ತ ಆಗಲಿದೆ ಎಂದು ಜಿಬಿಎ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.