

ಬೆಂಗಳೂರು: ಕಾಂಗ್ರೆಸ್ ಹೋರಾಟ ಎಸ್ಐಆರ್ಗೆ ಮಾತ್ರ ಸೀಮಿತವಾಗಿಲ್ಲ. ಚುನಾವಣೆ ದುರ್ಬಲಗೊಳಿಸುವಿಕೆ, ಅಕ್ರಮ, ಇವಿಎಂ ಮತ್ತು ವಿವಿಪ್ಯಾಟ್ಗಳ ನಿರ್ವಹಣೆ ವಿರುದ್ಧವೂ ಧ್ವನಿ ಎತ್ತುತ್ತಿದ್ದೇವೆ ಎಂದು ಎಐಸಿಸಿ ವೀಕ್ಷಕರೂ ಆದ ಕೇಂದ್ರದ ಮಾಜಿ ಸಚಿವ ಪಲ್ಲಂರಾಜು ತಿಳಿಸಿದ್ದಾರೆ.
ಚುನಾವಣಾ ಪ್ರಕ್ರಿಯೆಯ ಪ್ರತಿ ಹಂತದಲ್ಲೂ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಬೇಕು ಎಂಬುದು ಕಾಂಗ್ರೆಸ್ ಪಕ್ಷದ ಪ್ರಮುಖ ಬೇಡಿಕೆ. ಕರ್ನಾಟಕ, ಹರಿಯಾಣ ಸೇರಿ ವಿವಿಧ ರಾಜ್ಯಗಳಲ್ಲಿ ನಡೆದ ಅಕ್ರಮಗಳ ಕುರಿತಾದ ಪ್ರಶ್ನೆಗೆ ನಮಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ದೂರಿದರು.
ಎಸ್ಐಆರ್ ಅಡಿ ದೇಶದಾದ್ಯಂತ 13 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾಗಿದೆ. ಹೆಸರು ಅಳಿಸುವ ಪ್ರಕ್ರಿಯೆ ಪಾರದರ್ಶಕವಾಗಿಲ್ಲ. ಅರ್ಹ ಮತದಾರರ ಹಕ್ಕುಗಳಿಗೆ ಧಕ್ಕೆ ಆಗದಂತೆ ಈ ಪ್ರಕ್ರಿಯೆ ನಡೆಯಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಕರ್ನಾಟಕದಲ್ಲೇ 60-70 ಸಾವಿರ ಮತದಾರರ ಹೆಸರುಗಳನ್ನು ಸಮರ್ಪಕ ಕಾರಣವಿಲ್ಲದೆ ಅಳಿಸಲಾಗಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಕುರಿತು ಪ್ರಶ್ನಿಸಿದಾಗ, ಸಾಫ್ಟ್ವೇರ್ ಮೂಲಕ ಅಳಿಸಲಾಗಿದೆ ಎಂಬ ಉತ್ತರ ದೊರೆತಿದೆ.
ಸಾಫ್ಟ್ವೇರ್ನಿಂದ ಹೆಸರುಗಳು ಅಳಿಸಲ್ಪಟ್ಟಿದ್ದರೆ, ಆ ಸಾಫ್ಟ್ವೇರ್ ಹೇಗೆ ಕಾರ್ಯನಿರ್ವಹಿಸುತ್ತದೆ? ಯಾವ ಮಾನದಂಡ ಅನುಸರಿಸುತ್ತದೆ? ಅದರ ನಿರ್ಧಾರಗಳನ್ನು ಯಾರು ಪರಿಶೀಲಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದರು.
ಈ ಪ್ರಕ್ರಿಯೆಯಲ್ಲಿ ಕೃತಕ ಬುದ್ಧಿಮತ್ತೆ ಬಳಕೆಯಾಗುತ್ತಿದೆ. ತಂತ್ರಾಂಶದ ನಿರ್ಧಾರದಿಂದ ಒಬ್ಬ ಅರ್ಹ ಮತದಾರನ ಹೆಸರು ಅಳಿಸಲ್ಪಟ್ಟರೆ ಅದಕ್ಕೆ ಯಾರು ಹೊಣೆ? ಆ ತಪ್ಪನ್ನು ಸರಿಪಡಿಸುವವರು ಯಾರು? ಎಂದು ಚುನಾವಣಾ ಆಯೋಗ ಉತ್ತರಿಸಬೇಕು.
ಚುನಾವಣಾ ವ್ಯವಸ್ಥೆಯಲ್ಲಿ ನಡೆಯುವ ಪ್ರತಿಯೊಂದು ಪ್ರಕ್ರಿಯೆಯೂ ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು. ಯಾವುದೇ ಅನುಮಾನಕ್ಕೆ ಅವಕಾಶವಿರಬಾರದು. ಕಾಂಗ್ರೆಸ್ ಗಂಭೀರ ಪ್ರಶ್ನೆಗಳನ್ನು ಎತ್ತಿದಾಗಲೆಲ್ಲ ಬಿಜೆಪಿ ಮೂಲ ವಿಷಯದಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದೆ. ಹೀಗಾಗಿ ದೇಶಾದ್ಯಂತ ಹೋರಾಟ ತೀವ್ರಗೊಳಿಸಲು ನಿರ್ಧರಿಸಿದ್ದೇವೆ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಆಗ್ರಹಿಸಿರುವಂತೆ, ಕಳೆದ ಎರಡು ವರ್ಷಗಳಲ್ಲಿ ನಡೆದ ಚುನಾವಣೆಗಳನ್ನು ರದ್ದುಗೊಳಿಸಬೇಕು. ಹೆಸರುಗಳನ್ನು ಅಳಿಸುವ ಸಂಪೂರ್ಣ ಪ್ರಕ್ರಿಯೆ ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರಬೇಕು ಎಂದು ಆಗ್ರಹಿಸಿದರು.