ಜಿಕೆವಿಕೆಯಲ್ಲಿ ‘ಕೃಷಿಕರ ಜ್ಞಾನ ಸೌಧ’ ಕಟ್ಟಡ ಉದ್ಘಾಟನೆ ನಾಳೆ

farmers-knowledge-centre
farmers-knowledge-centre
Published on

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರು ಕೃಷಿ ವಿವಿಯ ವಿಸ್ತರಣಾ ನಿರ್ದೇಶನಾಲಯದ ಹೊಸ ಬಿಲ್ಡಿಂಗ್
  • ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಂದ ಲೋಕಾರ್ಪಣೆ
ಬೆಂಗಳೂರು: ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (ಯುಎಎಸ್-ಬಿ) ವಿಸ್ತರಣಾ ನಿರ್ದೇಶನಾಲಯದ ನೂತನ ಕಟ್ಟಡ ‘ಕೃಷಿಕರ ಜ್ಞಾನ ಸೌಧ’ವನ್ನು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಅವರಿಂದ ಗುರುವಾರ (ಸೆ.17) ಲೋಕಾರ್ಪಣೆ ಮಾಡಲಿದ್ದಾರೆ.
ವಿವಿಯ ಕ್ಯಾಂಪಸ್ ಜಿಕೆವಿಕೆಯ ಪ್ರವೇಶ ದ್ವಾರದ ಬಳಿ ನಿರ್ಮಿಸಿರುವ ಈ ಕಟ್ಟಡದಲ್ಲಿ ವಿಸ್ತರಣಾ ನಿರ್ದೇಶನಾಲಯಕ್ಕೆ ಸಂಬಂಧಿಸಿದ ಎಲ್ಲ ವಿಭಾಗಗಳು ಹಾಗೂ ಕಾರ್ಯಚಟುವಟಿಕೆಗಳನ್ನು ಒಂದೇ ಸೂರಿನಡಿ ತಂದು ಸೌಲಭ್ಯ ಕಲ್ಪಿಸಲಾಗಿದೆ. ಈ ಬಿಲ್ಡಿಂಗ್‌ನಲ್ಲಿ 4 ತರಬೇತಿ ಸಭಾಂಗಣಗಳು, ಕೃಷಿಕರಿಗೆ ತರಬೇತಿ ನೀಡಲು ಮೂಲಸೌಕರ್ಯವೂ ಹೊಂದಿದೆ. ಜತೆಗೆ ಕೃಷಿ ದೂರ ಶಿಕ್ಷಣ ಕೇಂದ್ರ, ಅಧ್ಯಯನ ಕೇಂದ್ರ, ಕೃಷಿ ಮಾಹಿತಿ ಘಟಕ ಹಾಗೂ 'ಸಮೇತಿ' ತರಬೇತಿ ಘಟಕವೂ ಕಾರ್ಯಾಚರಿಸಲಿದೆ.
ನೂತನ ಕಟ್ಟಡದಲ್ಲಿ ತರಬೇತಿಗೆ ಆಗಮಿಸುವ ರೈತರಿಗಾಗಿ ಫಾರ್ಮರ್ಸ್‌ ಲಾಂಜ್, ಕೆಫೆಟೇರಿಯ, ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗುತ್ತದೆ. ಈ ಕಟ್ಟಡಕ್ಕೆ ಹೊಂದಿಕೊಂಡಿರುವ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಮೂಲಕ ಬಿತ್ತನೆ ಬೀಜ, ನರ್ಸರಿ ಸಸಿಗಳು, ಜೈವಿಕ ಗೊಬ್ಬರ, ಕೃಷಿ ಪ್ರಕಟಣೆಗಳ ಮಾರಾಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಈ ಆವರಣಕ್ಕೆ ಆಗಮಿಸುವ ಕೃಷಿಕರಿಗೆ ಸಮಗ್ರ ಮಾಹಿತಿಯುಳ್ಳ ಕೃಷಿ ವಿಜ್ಞಾನಗಳ ವಸ್ತುಪ್ರದರ್ಶನಾಲಯ, ಬೇಕರಿ ತರಬೇತಿ ಕೇಂದ್ರ ಕೂಡ ಕಾರ್ಯಾಚರಿಸುತ್ತಿದೆ. ಹಾಗಾಗಿ ರೈತರಿಗೆ ವಿವಿಧ ತರಬೇತಿ ಹಾಗೂ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಸಿಗುವಂತೆ ಮಾಡಲು ವಿಸ್ತರಣಾ ನಿರ್ದೇಶನಾಲಯದ ಕಟ್ಟಡವನ್ನು ನಿರ್ಮಿಸಲಾಗಿದೆ ಎಂದು ಕೃಷಿ ವಿವಿಯ ಕುಲಪತಿ ಡಾ. ಎಸ್.ವಿ. ಸುರೇಶ್ ತಿಳಿಸಿದ್ದಾರೆ.

ಹೆಬ್ಬಾಳದಿಂದ ಜಿಕೆವಿಕೆಗೆ ಶಿಫ್ಟ್​:

ಕೃಷಿ ವಿಸ್ತರಣಾ ನಿರ್ದೇಶನಾಲಯದ ಈ ಮೊದಲು ಹೆಬ್ಬಾಳದಲ್ಲಿ ಕಾರ್ಯಾಚರಿಸುತ್ತಿತ್ತು. ಇಲ್ಲಿ ಪಶುವೈದ್ಯಕೀಯ ಕಾಲೇಜು ಹಾಗೂ ಕೃಷಿ ವಿಸ್ತರಣಾ ನಿರ್ದೇಶನಾಲಯವು ಒಂದೇ ಆವರಣದಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಣೆ ಮಾಡುತ್ತಿತ್ತು. ಕೆಲ ವರ್ಷಗಳ ಹಿಂದೆ ಇಲ್ಲಿನ ಎಲ್ಲ ಜಮೀನು ಹಾಗೂ ಕಟ್ಟಡಗಳನ್ನು ಪಶುವೈದ್ಯಕೀಯ ಕಾಲೇಜಿಗೆ (ಬೀದರ್ ಪಶುವೈದ್ಯಕೀಯ ವಿಶ್ವವಿದ್ಯಾಲಯ) ಬಿಟ್ಟುಕೊಟ್ಟ ಕಾರಣ, ಜಿಕೆವಿಕೆ ಕ್ಯಾಂಪಸ್‌ನಲ್ಲಿ ಹೊಸ ಬಿಲ್ಡಿಂಗ್ ನಿರ್ಮಿಸುವುದು ಯುಎಎಸ್-ಬಿಗೆ ಅನಿವಾರ್ಯವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net