

ಬೆಂಗಳೂರು: ದೀಪಾವಳಿ ಹಬ್ಬದ ಸಡಗರದಲ್ಲಿ ಪಟಾಕಿ ಅವಘಡಗಳಿಂದ ಸಂಭವಿಸುವ ಕಣ್ಣಿನ ಹಾನಿ ತಪ್ಪಿಸಲು ಮಿಂಟೋ ಸೇರಿ ನಗರದ ಕಣ್ಣಿನ ಆಸ್ಪತ್ರೆಗಳು ಗಾಯಾಳುಗಳ ಚಿಕಿತ್ಸೆಗೆ ಅಗತ್ಯ ಸಿದ್ಧತೆಗಳೊಂದಿಗೆ ಹಬ್ಬದ ದಿನಗಳಲ್ಲಿ 24/7 ಸೇವೆ ನೀಡಲು ಸಜ್ಜಾಗಿವೆ.
ಕತ್ತಲೆಯಿಂದ ಬೆಳೆಕಿನೆಗೆಡೆ ಕೊಂಡೊಯ್ಯುವ ದೀಪಾವಳಿ ಆಚರಣೆಯಲ್ಲಿ ಯಾರೂಬ್ಬರೂ ದೃಷ್ಟಿ ಕಳೆದುಕೊಂಡು ಕತ್ತಲೆಯೆಡೆಗೆ ಹೋಗಬಾರದು. ಈ ನಿಟ್ಟಿನಲ್ಲಿ ಪಟಾಕಿ ಹಚ್ಚುವವರು ಸೇರಿ ಎಲ್ಲ ವಯೋಮಾನದವರೂ ಜಾಗ್ರತೆ ವಹಿಸಬೇಕು ಎಂದು ಮಿಂಟೋ ಆಸ್ಪತ್ರೆ ನಿರ್ದೇಶಕ ಡಾ. ಸುರೇಶ್ ಬಾಬು ಎಚ್ಚರಿಸಿದ್ದಾರೆ.
ಪಟಾಕಿ ಅವಘಡಗಳಿಂದ ಕಣ್ಣಿನ ಹಾನಿ ಮಾಡಿಕೊಂಡವರಿಗೆ ಚಿಕಿತ್ಸೆ ನೀಡುವ ಸಂಬಂಧ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ವ್ಯವಸ್ಥೆಗಳೊಂದಿಗೆ 25 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಅಗತ್ಯ ಔಷಧಗಳ ದಾಸ್ತಾನು ವ್ಯವಸ್ಥೆ ಸಹ ಮಾಡಿಕೊಳ್ಳಲಾಗಿದೆ. ಹಬ್ಬದ ಸಂದರ್ಭದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಲಭ್ಯವಿರಲಿದ್ದು, ದಿನದ 24 ಗಂಟೆಗಳ ಸೇವೆ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐದು ವರ್ಷಗಳಲ್ಲಿ 247 ಮಂದಿಗೆ ಚಿಕಿತ್ಸೆ:
ಪ್ರತಿ ವರ್ಷ ಪಟಾಕಿ ಹಾನಿಗೆ ಒಳಗಾಗುವವರಲ್ಲಿ ಶೇ. 40 ಮಂದಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರುತ್ತಾರೆ. ಅವರಲ್ಲೂ ಗಂಡು ಮಕ್ಕಳೇ ಹೆಚ್ಚಿನವರು. ಮಿಂಟೋ ಆಸ್ಪತ್ರೆಯಲ್ಲಿ 2021ರಲ್ಲಿ 34, 2022ರಲ್ಲಿ 45, 2023ರಲ್ಲಿ 41, 2024ರಲ್ಲಿ 71, 2025ರಲ್ಲಿ 56 ಸೇರಿ ಕಳೆದ 5 ವರ್ಷಗಳಲ್ಲಿ 247 ಮಂದಿಗೆ ಪಟಾಕಿ ಅವಘಡಗಳಲ್ಲಿ ಗಾಯಗೊಂಡು ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 115 ಮಂದಿ ನೇರವಾಗಿ ಪಟಾಕಿ ಸಿಡಿಸಲು ಹೋಗಿ ಗಾಯಗೊಂಡವರಾಗಿದ್ದು, ಉಳಿದ 132 ಮಂದಿ ದಾರಿಯಲ್ಲಿ ಹೋಗುತ್ತಿದ್ದವರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ತುರ್ತು ಚಿಕಿತ್ಸೆ ಪಡೆಯಿರಿ: ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸ್ವಚ್ಛವಾದ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜುವುದು, ನೀರಿನಿಂದ ತೊಳೆದುಕೊಳ್ಳಬಾರದು. ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ತೆರಳಿ, ತುರ್ತು ಚಿಕಿತ್ಸೆ ಪಡೆಯಬೇಕು. ಪಟಾಕಿ ಸಿಡಿಸಿದ ಬಳಿಕ ಅದರ ಮೇಲೆ ನೀರು ಹಾಕಬೇಕು. ಇದರಿಂದ ಮಾಲಿನ್ಯದ ಪ್ರಮಾಣ ಕಡಿಮೆ ಆಗುವ ಜತೆಗೆ ಬಿಸಿ ತುಂಡುಗಳಿಂದಾಗುವ ಅಪಾಯವೂ ತಪ್ಪಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವೈದ್ಯಕೀಯ ಅಧೀಕ್ಷಕಿ ನಿಷಾತ್ ಸುಲ್ತಾನಾ, ಎಚ್ಒಡಿ ಡಾ. ಶಶಿಧರ್ ಇತರರು ಇದ್ದರು. ಪಟಾಕಿಯಿಂದ ಕಣ್ಣಿಗೆ ಹಾನಿಯಾದಲ್ಲಿ ಸಹಾಯವಾಣಿ: 9481740137 ಸಂಪರ್ಕಿಸಬಹುದು.
ಸಲಹೆಗಳು:
* ಪಟಾಕಿಗಳನ್ನು ತೆರೆದ ಮತ್ತು ಸುರಕ್ಷಿತ ಸ್ಥಳದಲ್ಲಿ ಮಾತ್ರ ಸಿಡಿಸಬೇಕು
* ಪಟಾಕಿ ಸಿಡಿಸುವಾಗ ದೊಡ್ಡವರ ಮೇಲ್ಚಿಚಾರಣೆ ಇರಲಿ
*ಪಟಾಕಿ ಖರೀದಿಸಲೇ ಬೇಕಾದಲ್ಲಿ ಐಎಸ್ಐ ಗುರುತಿನ ಹಸಿರು ಪಟಾಕಿಗಳನ್ನು ಖರೀದಿಸಿ
*ಪಟಾಕಿಗಳ ಮೇಲಿರುವ ಎಚ್ಚರಿಕೆ, ಸೂಚನೆ ಅನುಸರಿಸಿ
*ಸುರಕ್ಷಿತ ಅಂತರ ಕಾಯ್ದುಕೊಂಡು ಪಟಾಕಿ ಸಿಡಿಸಿ
*ಬೆಂಕಿ ಹಾಗೂ ಥಟ್ಟನೆ ಹೊತ್ತಿಕೊಳ್ಳುವ ವಸ್ತುಗಳ ಬಳಿ ಪಟಾಕಿ ಸಂಗ್ರಹಿಸಿಡಬೇಡಿ
*ಮಕ್ಕಳು ಒಂಟಿಯಾಗಿ ಪಟಾಕಿ ಸಿಡಿಸುವುದಕ್ಕೆ ಅವಕಾಶ ನೀಡಬೇಡಿ
* ಕೈಗಳಲ್ಲಿ ಹಿಡಿದು ಪಟಾಕಿಗಳನ್ನು ಸಿಡಿಸಬೇಡಿ
* ಪಟಾಕಿ ಹಚ್ಚುವಾಗ ಬೆಂಕಿ ಹೊತ್ತಿದರೆ ಆರಿಸಲು ಹತ್ತಿರದಲ್ಲಿ ನೀರಿ ಅಥವಾ ಮರಳನ್ನು ಇಟ್ಟುಕೊಳ್ಳಿ
*ಪಟಾಕಿ ಸಿಡಿದಾಗ ಯಾವುದಾದರೂ ಕಿಡಿ ನಿಮ್ಮ ಕಣ್ಣನ್ನು ಸೇರಿದರೆ ಕಣ್ಣನ್ನು ಉಜ್ಜಿಕೊಳ್ಳಬೇಡಿ
ಸುಟ್ಟಗಾಯಕ್ಕೆ ಚಿಕಿತ್ಸೆ:ಪಟಾಕಿ ಅವಘಡದಿಂದ ಸಂಭವಿಸುವ ಸುಟ್ಟ ಗಾಯಗಳಿಗೆ ತುರ್ತು ಚಿಕಿತ್ಸೆ ನೀಡಲು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಮಹಾಬೋಧಿ ಸುಟ್ಟ ಗಾಯಗಳ ಚಿಕಿತ್ಸಾ ಕೇಂದ್ರ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಈ ಕೇಂದ್ರಕ್ಕೆ ಅಗತ್ಯ ವೈದ್ಯರು, ಶುಶ್ರೂಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ದಿನದ 24 ಗಂಟೆಯೂ ಇಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ.
ಸಹಾಯವಾಣಿಗಳು
ಮಿಂಟೊ ಆಸ್ಪತ್ರೆ: 9481740137
ನಾರಾಯಣ ನೇತ್ರಾಲಯ: ರಾಜಾಜಿನಗರ ಶಾಖೆ- 080 66121641/1643 ಅಥವಾ 9902546046
ನಾರಾಯಣ ನೇತ್ರಾಲಯ, ಎನ್ಎಚ್ ಹೆಲ್ತ್ ಸಿಟಿ ಬೊಮ್ಮಸಂದ್ರ: 080 66660658 ಅಥವಾ 9902821128
ನಾರಾಯಣ ನೇತ್ರಾಲಯ ಇಂದಿರಾನಗರ ಶಾಖೆ: 080 66974000 ಅಥವಾ 9916024455
ನಾರಾಯಣ ನೇತ್ರಾಲಯ ಬನ್ನೇರುಘಟ್ಟ ರಸ್ತೆ ಶಾಖೆ: 080 66121618 ಅಥವಾ 9035154170
ನಾರಾಯಣ ನೇತ್ರಾಲಯ ವೈಟ್ಫೀಲ್ಡ್ ಶಾಖೆ: 080-66121658 ಅಥವಾ 9535258004
ಶಂಕರ ಕಣ್ಣಿನ ಆಸ್ಪತ್ರೆ: (ಮಾರತಹಳ್ಳಿ) 080 69038900 ಅಥವಾ 9739270477
ಜಯನಗರದ ನೇತ್ರಧಾಮ: 080 26088000 ಅಥವಾ 9448071816
ಡಾ. ಅಗರವಾಲ್ ಕಣ್ಣಿನ ಆಸ್ಪತ್ರೆ: ಬನ್ನೇರುಘಟ್ಟ ಶಾಖೆ 08048193419, ರಾಜರಾಜೇಶ್ವರಿ ನಗರ ಶಾಖೆ 918048193501