

ಬೆಂಗಳೂರು: ಕಳ್ಳತನವಾಗಿದ್ದ ಚಿನ್ನಾಭರಣ ಖರೀದಿ ಹಾಗೂ ದಾಖಲೆ ಇಲ್ಲದ ವಸ್ತುಗಳ ಸ್ವಾಧೀನಪಡಿಸಿಕೊಳ್ಳುವ ಮೂಲಕ ಅಕ್ರಮದಲ್ಲಿ ಪಾಲ್ಗೊಂಡಿರುವ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಪ್ರೈ.ಲಿ ಹಾಗೂ ಅದರ ನಿರ್ದೇಶಕರು, ಷೇರುದಾರ ಮೆಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿದೆ.
ಬೆಂಗಳೂರು ವಲಯದ ಇ.ಡಿ ಅಧಿಕಾರಿಗಳು ಸೆ.23 ಮತ್ತು 24ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) 2002ರ ಸೆಕ್ಷನ್ 17ರಡಿ ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ವಿಶಾಖಪಟ್ಟಣ ಸೇರಿ ನಾಲ್ಕು ನಗರಗಳ 16 ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ಕಾರ್ಯಾಚರಣೆ ನಡೆಸಿದೆ.
ಕಂಪನಿಯು ಕಳ್ಳತನ ಮಾಡಿರುವ ಚಿನ್ನಾಭರಣಗಳನ್ನು ನಿರಂತರವಾಗಿ ಖರೀದಿಸಿ ವ್ಯವಹರಿಸುತ್ತಿತ್ತು. ಈ ಅಕ್ರಮ ಚಟುವಟಿಕೆಗಳಿಂದ ಬೃಹತ್ ಪ್ರಮಾಣದ ಆದಾಯ ಸಂಗ್ರಹಿಸಲಾಗಿದೆ ಎಂಬ ಶಂಕೆಯ ಮೇಲೆ ತನಿಖೆ ನಡೆಯುತ್ತಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನವಾಗಿರುವ ಚಿನ್ನಾಭರಣಗಳ ಖರೀದಿ ಮತ್ತು ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ದಾಖಲಾಗಿರುವ ಹಲವು ಎಫ್‌ಐಆರ್‌ಗಳು ಹಾಗೂ ಸಲ್ಲಿಕೆಯಾಗಿರುವ ಆರೋಪಪಟ್ಟಿಗಳ ಆಧಾರದ ಮೇಲೆ ಇ.ಡಿ ತನಿಖೆ ಆರಂಭಿಸಿದೆ. ಪೊಲೀಸ್ ತನಿಖೆಯಿಂದ ಲಭ್ಯವಾದ ಮಾಹಿತಿಯ ಜತೆಗೆ, ಹಣ ಅಕ್ರಮ ವರ್ಗಾವಣೆ ಹಾಗೂ ಕಳ್ಳತನದಿಂದ ಬಂದ ಆಧಾರದ ಮೇಲೆ ಇಡಿ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿ ಪರಿಶೀಲಿಸಿದೆ.
ಶೋಧ ಕಾರ್ಯಾಚರಣೆಯಲ್ಲಿ ಅಟ್ಟಿಕಾ ಗೋಲ್ಡ್‌ನ ಮುಖ್ಯ ಕಚೇರಿ, ಶಾಖೆಗಳು, ನಿರ್ದೇಶಕರು, ಮಾಜಿ ನಿರ್ದೇಶಕರು ಹಾಗೂ ಷೇರುದಾರರ ನಿವಾಸಗಳು ಸೇರಿದಂತೆ ಪ್ರಮುಖ ಸ್ಥಳಗಳನ್ನು ಪರಿಶೀಲಿಸಲಾಗಿದೆ.ಪ್ರಮುಖ ಆರೋಪಿಗಳಾದ ಪಿ.ಎಸ್.ಆಯುಬ್ ಅಲಿಯಾಸ್ ಬೊಮ್ಮನಹಳ್ಳಿ ಬಾಬು, ಎ. ಒಬೆದುಲ್ಲಾ, ಮೊಹಮ್ಮದ್ ಸಲ್ಮಾನ್ ಹಾಗೂ ಎ.ಅರ್ಬಿನ್ ತಾಜ್ ಸೇರಿ ಪ್ರಮುಖ ವ್ಯಕ್ತಿಗಳಿಗಾಗಿ ಇ.ಡಿ ಶೋಧ ನಡೆಸಿದೆ. ಮತ್ತೊಂದೆಡೆ ಎರಡು ದಿನ ಇ.ಡಿ ದಾಳಿ ಬಳಿಕ ಆದಾಯ ತೆರಿಗೆ (ಐಟಿ) ಅಧಿಕಾಗಳ ತಂಡ ಕೂಡ ಅಟ್ಟಿಕಾ ಗೋಲ್ಡ್ ಕಂಪನಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ ಎನ್ನಲಾಗಿದೆ.
ಇ.ಡಿ ದಾಳಿ ಸಂದರ್ಭದಲ್ಲಿ 7.52 ಲಕ್ಷ ನಗದು ಸೇರಿ ವಿದೇಶಿ ಕರೆನ್ಸಿ, ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದೆ. ವಶಪಡಿಸಿಕೊಂಡಿರುವ ಆಸ್ತಿಗಳು ಅಪರಾಧದ ಆದಾಯಕ್ಕೆ ಸಂಬಂಧಿಸಿದವೆಯೇ ಎಂಬುದರ ಕುರಿತು ಮುಂದಿನ ತನಿಖೆಯಲ್ಲಿ ಪರಿಶೀಲನೆ ನಡೆಯಲಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಇನ್ನಷ್ಟು ದಾಖಲೆಗಳು, ಹಣಕಾಸು ವಹಿವಾಟುಗಳು ಹಾಗೂ ಸಂಬಂಧಿತ ವ್ಯಕ್ತಿಗಳ ಪಾತ್ರದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.