ಬರ, ತರಕಾರಿ ದರದಲ್ಲಿ ಏರಿಳಿತ

* ಅಕಾಲಿಕ ಮಳೆಯೂ ಕಾರಣ * ಹೂವಿನ ದರದಲ್ಲಿ ಭಾರಿ ಕುಸಿತ
ತರಕಾರಿ ಹಾಗೂ ಸೊಪ್ಪು ಬೆಲೆಯಲ್ಲಿ ಏರಿಳಿತ
ತರಕಾರಿ ಹಾಗೂ ಸೊಪ್ಪು ಬೆಲೆಯಲ್ಲಿ ಏರಿಳಿತ
Published on: 

ಬೆಂಗಳೂರು: ಬರಗಾಲದಿಂದಾಗಿ ಬೆಳೆಯಲ್ಲಿ ಕುಸಿತ ಕಂಡುಬಂದಿದ್ದು, ತರಕಾರಿಗಳಿಗೆ ಬೇಡಿಕೆಯೊಂದಿಗೆ ಬೆಲೆ ಹೆಚ್ಚಿದ್ದರೂ, ಅಕಾಲಿಕ ಮಳೆಯಿಂದಾಗಿ ಕೆಲವೆಡೆ ಕೆಲ ತರಕಾರಿ ಹಾಗೂ ಸೊಪ್ಪು ಸೇರಿ ಬೆಳೆ ಚೆನ್ನಾಗಿ ಆಗುತ್ತಿದೆ. ಪರಿಣಾಮ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹಾಗೂ ವಾರದಿಂದ ವಾರಕ್ಕೆ ತರಕಾಗಿ ಬೆಲೆಯಲ್ಲಿ ಏರಿಳಿತವಾಗುತ್ತದೆ.

ಹವಾಮಾನ, ಬೆಳೆ ಉತ್ಪಾದನೆ, ಮಾರುಕಟ್ಟೆಗೆ ಬರುವ ತರಕಾರಿಗಳ ಪ್ರಮಾಣ, ಸಾಗಣೆ ವೆಚ್ಚ ಮತ್ತು ಗ್ರಾಹಕರ ಬೇಡಿಕೆ ಎಲ್ಲವೂ ಬೆಲೆ ಏರಿಳಿತಕ್ಕೆ ಕಾರಣವಾಗಿದೆ. ಮಾರುಕಟ್ಟೆಗೆ ತರಕಾರಿ ಹೆಚ್ಚು ಬಂದರೆ ಬೆಲೆ ಇಳಿಯುತ್ತದೆ, ಬೇಡಿಕೆ ಇದ್ದಾಗ ಕಡಿಮೆ ಬಂದರೆ ಬೆಲೆ ಏರುತ್ತದೆ ಎನ್ನುತ್ತಾರೆ ವ್ಯಾಪಾರಿಗಳು. ಹೀಗಾಗಿ ಬದನೆ, ಆಲುಗಡ್ಡೆ, ಟೊಮೆಟೊ, ನವಿಲುಕೋಸು, ಹೂ ಕೋಸು ಸೇರಿ ಕೆಲ ತರಕಾರಿಗಳ ಬೆಲೆ ಕಡಿಮೆಯಾಗಿದೆ.

ಕಳೆದ ವಾರದವರೆಗೂ ಕೊತ್ತಂಬರಿ ಸೊಪ್ಪು ಕಂತೆಗೆ 60-70 ರೂ. ಇದ್ದದ್ದು, ಈಗ 40-50 ರೂ. ಆಗಿದೆ. ಸೊಪ್ಪು ಸಹ ಕಂತೆಗೆ 30 ಇದ್ದದ್ದು, 20-25 ರೂ. ಆಗಿದೆ. ಹೀಗೆ ದಿನಕ್ಕೊಂದು ರೀತಿ ಬೆಲೆ ಏರಿಳಿತವಾಗುತ್ತಿರುವುದರಿಂದ ಅಡುಗೆ ಮನೆ ಬಜೆಟ್‌ನಲ್ಲೂ ಏರುಪೇರಾಗುತ್ತಿದೆ. ಇತ್ತ ಗ್ರಾಹಕರಿಗೆ ಬೆಲೆ ಏರಿಳಿತದ ಸಮಸ್ಯೆಯಾದರೆ, ಅತ್ತ ರೈತರು ಬರಗಾದಲ್ಲೂ ಬೆಳೆ ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಬದನೆಕಾಯಿ, ಟೊಮೆಟೊ, ಸೊಪ್ಪು ಸೇರಿ ಕೆಲ ತರಕಾರಿಗಳನ್ನು ಕೇಳುವವರೇ ಇಲ್ಲದಂತಾಗಿದ್ದು, ವ್ಯಾಪಾರಿಗಳು ಕೇಳಿದ ದರಕ್ಕೆ ಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದಸರಾ, ನವರಾತ್ರಿಯಲ್ಲಿ ಇನ್ನಿಲ್ಲದ ಬೇಡಿಕೆಯೊಂದಿಗೆ ಮಾರಾಟವಾಗುತ್ತಿದ್ದ ಹೂವಿನ ದರ ದಿಢೀರ್ ಕುಸಿದಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಬರದ ನಡುವೆಯೂ ಈ ಬಾರಿ ಹೆಚ್ಚಿನ ರೈತರು ಹೂವು ಬೆಳೆ ಬೆಳೆದಿದ್ದಾರೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೂವಿನ ರಾಶಿಯೇ ಇದೆ. ಪರಿಣಾಮ, ಕೆ.ಆರ್. ಮಾರುಕಟ್ಟೆಯಲ್ಲಿ ಹೂವಿನ ದರ ಶೇ.60 ಕುಸಿತ ಕಂಡಿದೆ. ದಸರಾ ಸಂದರ್ಭದಲ್ಲಿ ಕೆ.ಜಿ.ಗೆ 250-300 ರೂ.ವರೆಗೆ ಇದ್ದ ಸೇವಂತಿಗೆ ಈಗ ಕೆ.ಜಿ.ಗೆ 50-80 ರೂ. ಇದೆ. ಜತೆಗೆ ಗುಲಾಬಿ, ಸುಗಂಧರಾಜ ಇತರೆ ಹೂವಿನ ದರವೂ ಇಳಿಕೆಯಾಗಿದೆ. ಮಾತ್ರವಲ್ಲ ಸದಾ ಸಾವಿರ ರೂ. ಗಡಿಯಲ್ಲಿರುತ್ತಿದ್ದ ಮಲ್ಲಿಗೆ ಹಾಗೂ ಕನಕಾಂಬರ ಹೂವಿನ ದರವೂ ಕುಸಿಯುತ್ತಿದೆ. ಮಲ್ಲಿಗೆ ಕೆ.ಜಿ. 350-400 ರೂ.ಗೆ ಮಾರಾಟವಾಗುತ್ತಿದೆ.