ಅತಿಯಾದ ತೈಲ ಬಳಕೆಯಿಂದ ಬರಗಾಲ

oil-consumption
oil-consumption
Published on

ಪ್ರಮುಖ ಮುಖ್ಯಾಂಶಗಳು

  • ಇಂಗಾಲ ಡೈ ಆಕ್ಸೈಡ್‌ನಿಂದ ಪರಿಸರ ನಾಶಕ್ಕೆ ಕಾರಣ
  • ಮಹಾರಾಷ್ಟ್ರ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪಾಸಾ ಪಟೇಲ್ ಹೇಳಿಕೆ
  • ಕಬ್ಬಿನಿಂದ ಎಥನಾಲ್ ಉತ್ಪಾದನೆ/ಬಳಕೆ ಕುರಿತು ವಿಚಾರ ಸಂಕಿರಣ
ಬೆಂಗಳೂರು: ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್ ಬಳಕೆಯಿಂದಾಗಿ ಪರಿಸರ ದುರ್ಬಲವಾಗುತ್ತಿದೆ. ಇದು ಹವಾಮಾನ ವೈಪರೀತ್ಯ ಎಂದು ಹೇಳಬಹುದಾಗಿದ್ದರೂ, ಮನುಷ್ಯನ ಪ್ರಜ್ಞೆ ಇಲ್ಲದೆ ತೈಲ ಸಂಪತ್ತನ್ನು ಬರಿದು ಮಾಡುತ್ತಿರುವುದರಿಂದ ಬರಗಾಲಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಮಹಾರಾಷ್ಟ್ರ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಪಾಸಾ ಪಟೇಲ್ ಹೇಳಿದ್ದಾರೆ.
ನಗರದ ಪಶುವೈದ್ಯಕೀಯ ಕಾಲೇಜಿನ ಆವರಣದಲ್ಲಿರುವ ಅಲುಮ್ನಿ ಸಂಘದ ಅಶ್ರಯದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘ ಸೋಮವಾರ ಆಯೋಜಿಸಿದ್ದ ‘ಕೃಷಿ ಉತ್ಪನ್ನಗಳಿಂದ ಎಥನಾಲ್ ಉತ್ಪಾದನೆ, ಬಳಕೆ ರೈತರಿಗೆ ಹೇಗೆ ಸಹಕಾರಿ’ ವಿಷಯದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಲೀ. ಪೆಟ್ರೋಲ್ ತೆಗೆಯುವುದಕ್ಕೆ ಭೂಮಿಯಿಂದ 3 ಕೆಜಿ ಕಾರ್ಬನ್ ಡೈ ಆಕ್ಸೈಡ್ ಬಳಸಲಾಗುತ್ತಿದೆ. ಇದರ ಪರಿಣಾಮ ವಾಯುಮಾಲಿನ್ಯಕ್ಕೆ ಅವಕಾಶವಾಗುತ್ತದೆ. ಹೀಗಾದಲ್ಲಿ ಹಿಂದೆ ಬೀಳುತ್ತಿದ್ದ ಪ್ರಮಾಣದಷ್ಟು ಮಳೆ ಈಗ ಬರುತ್ತಿಲ್ಲ. ಮಳೆ ಬೀಳುವ ಸಮಯ, ಸ್ಥಳವೂ ಬದಲಾಗಿದೆ. ಕಾರ್ಬನ್ ಡೈ ಆಕ್ಸೈಡ್ ಭೂಮಿಯ ಕೆಳಗಿದ್ದು, ಇದು ಮೇಲೆ ಬಂದಲ್ಲಿ ಮನುಷ್ಯರ ಬದುಕಿಗೆ ಕಷ್ಟವಾಗುತ್ತದೆ. ಇದನ್ನು ಅರಿತಾದರೂ, ನಾವು ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕಿದೆ ಎಂದು ಅವರು ಕಿವಿಮಾತು ಹೇಳಿದರು.

ಬಳಕೆಯ ಮಿತಿ ಹೆಚ್ಚಳವಾಗಲಿ:

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ದೇಶದಲ್ಲಿ ಉತ್ಪಾದನೆಯಾಗುವ ಎಥನಾಲನ್ನು ಕೇಂದ್ರ ಸರ್ಕಾರ ದಕ್ಷಿಣ ರಾಜ್ಯಗಳಿಗೆ ಕಡಿಮೆ ಬಳಕೆಗೆ ಮಿತಿ ಹಾಕಿದ್ದು, ಉತ್ತರದ ರಾಜ್ಯಗಳಿಗೆ ಹೆಚ್ಚು ಬಳಕೆಗೆ ಅವಕಾಶ ಕೊಟ್ಟಿದೆ. ಈ ನೀತಿಯಲ್ಲಿ ಬದಲಾಗಬೇಕಿದೆ. ನನ್ನ ಮಾಲೀಕತ್ವದ 11 ಕಾರ್ಖಾನೆಗಳಲ್ಲಿ ನಿತ್ಯ 1 ಲಕ್ಷ ಲೀ. ಎಥನಾಲ್ ಉತ್ಪಾದಿಸಲಾಗುತ್ತಿದೆ. ಎಥನಾಲ್ ಉತ್ಪಾದನೆ ಮಾಡುವ ಮುನ್ನ ಕ್ವಿಂಟಾಲ್ಗೆ ಮೆಕ್ಕೆಜೋಳದ ಬೆಲೆ 2,800 ರೂ.ಗಿಂತ ಜಾಸ್ತಿ ಆಗಿರಲಿಲ್ಲ. ಆದರಿಂದು ಕ್ವಿಂಟಾಲ್‌ಗೆ 3,200 ರೂ.ಗೆ ಏರಿದೆ ಎಂದರು.
ಕಾರ್ಯಕ್ರಮದಲ್ಲಿ ಅಲುಮ್ನಿ ಸಂಘದ ಅಧ್ಯಕ್ಷ ಎಚ್.ಎಲ್. ಹರೀಶ್, ಬೆಳೆಗಾರ ಸಂಘದ ಪ್ರಧಾನ ಕಾರ್ಯದರ್ಶಿ ಮಹೇಶ್ ಬೆಳಗಾಂವ್ಕರ್ ಹಾಗೂ ಇತರರಿದ್ದರು.

ರಾಜ್ಯದಲ್ಲಿ ವಾರ್ಷಿಕ 135 ಕೋಟಿ ಲೀ. ಉತ್ಪಾದನೆ:

ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರೈತರ ಆಲೆಮನೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಎಥನಾಲ್ ಉತ್ಪಾದನೆ ಮಾಡಿಕೊಳ್ಳುವ ತಂತ್ರಜ್ಞಾನವನ್ನು ಒದಗಿಸಬೇಕು. ದೇಶದಲ್ಲಿ ವಾರ್ಷಿಕ 1,700ರಿಂದ 1,800 ಕೋಟಿ ಲೀ. ಎಥನಾಲ್ ಉತ್ಪಾದಿಸುವ ಸಾಮರ್ಥ್ಯವಿದೆ. ಕರ್ನಾಟಕವು ದೇಶದಲ್ಲೇ ಎಥನಾಲ್ ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದ್ದು, ವಾರ್ಷಿಕ 135 ಕೋಟಿ ಲೀ. ಉತ್ಪಾದಿಸುತ್ತಿದೆ. ಸದ್ಯ ನಮ್ಮ ರಾಜ್ಯದಲ್ಲಿ 56ಕ್ಕೂ ಅಧಿಕ ಎಥನಾಲ್ ಉತ್ಪಾದನಾ ಘಟಕ/ಡಿಸ್ಟಿಲರಿಗಳಿದ್ದು, ಇನ್ನಷ್ಟು ಹೆಚ್ಚಿಸಿಕೊಳ್ಳಲು ವಿುಲ ಅವಕಾಶ ಇದೆ ಎಂದರು.

2040ರ ವೇಳೆಗೆ ದೇಶಕ್ಕೆ ತೈಲ ಸಂಗ್ರಹಿಸುವುದು ಸವಾಲಾಗಲಿದೆ. ಪ್ರತಿ ಲೀ. 300-400 ರೂ. ಆಗಬಹುದು. ಅದಕ್ಕಾಗಿ ಎಥನಾಲ್ ಉತ್ಪಾದಿಸಿ ಜನಬಳಕೆಗೆ ತರಬೇಕಿದೆ. ಜತೆಗೆ ಭವಿಷ್ಯದಲ್ಲಿ ಅನಿಲ ಸಿಲೆಂಡರ್ ಅಭಾವವೂ ಕಾಡಲಿದೆ. ಹಾಗಾಗಿ ಈಗಿನಿಂದಲೇ ಎಥನಾಲ್ ಬಳಸುವುದು ಯುಕ್ತ. ಎಥನಾಲ್ ಬಳಸುವುದರಿಂದ ಬೈಕ್ ಇಂಜಿನ್ ಹಾಳಾಗುವುದಿಲ್ಲ.

- ಹರಿಣಿಕುಮಾರ್, ವಿಶ್ರಾಂತ ಪ್ರಾಧ್ಯಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net