ಬಿಡಿಎ ಕೇಂದ್ರ ಕಚೇರಿಯ ಕಟ್ಟಡ ನೆಲಸಮಗೊಳಿಸದಿರಲು ಆಗ್ರಹ

bda-head-office
bda-head-office
Published on

ಪ್ರಮುಖ ಮುಖ್ಯಾಂಶಗಳು

  • ಪ್ರಾಧಿಕಾರದ ಚೇರ್ಮನ್​​​ಗೆ ಮನವಿ ಪತ್ರ ಸಲ್ಲಿಕೆ
  • 2 ವರ್ಷದಲ್ಲಿ ದುರಸ್ತಿ/ನವೀಕರಣಕ್ಕೆ 15 ಕೋಟಿ ವೆಚ್ಚ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿಯ ಹಾಲಿ ಕಟ್ಟಡವನ್ನು ನೆಲಸಮಗೊಳಿಸದೆ ಹಾಗೆಯೆ ಉಳಿಸಿಕೊಳ್ಳುವಂತೆ ಪ್ರಾಧಿಕಾರದ ಚೇರ್ಮನ್​​ ಎನ್.ಎ. ಹ್ಯಾರಿಸ್ ಅವರಿಗೆ ಮನವಿ ಮಾಡಲಾಗಿದೆ.
ಬಿಡಿಎಗೂ ಮುನ್ನ ಅಸ್ತಿತ್ವದಲ್ಲಿದ್ದ ನಗರ ಸುಧಾರಣಾ ಟ್ರಸ್ಟ್ ಬೋರ್ಡ್ (ಸಿಐಟಿಬಿ) ಮೂರು ದಶಕಗಳಿಗೂ ಹೆಚ್ಚು ಕಾಲದವರೆಗೆ ಬೆಂಗಳೂರು ಅಭಿವೃದ್ಧಿಗೆ ತನ್ನದೇಯಾದ ಕೊಡುಗೆ ನೀಡಿದೆ. ನಂತರ ಬಿಡಿಎ ಎಂದು ಹೆಸರು ಬದಲಾದ ಬಳಿಕ ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಪ್ರಾಧಿಕಾರದ ಕಚೇರಿ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಗಟ್ಟಿಮುಟ್ಟಾದ ಬಿಲ್ಡಿಂಗ್ ಒಡೆದುಹಾಕುವುದು ಸರಿಯಲ್ಲ. ಈ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಅಧ್ಯಕ್ಷರು ಬಿಡಿಎ ಆಯುಕ್ತರು ಹಾಗೂ ಚೇರ್ಮನ್‌ಗೆ ಪ್ರತ್ಯೇಕ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದ್ದಾರೆ.
ಸಿಐಟಿಬಿಯು ಏಷ್ಯಾ ಖಂಡದಲ್ಲೇ 2ನೇ ನಗರ ಅಭಿವೃದ್ಧಿ ಸಂಸ್ಥೆಯಾಗಿ ಗಮನ ಸೆಳೆದಿತ್ತು. ಇದನ್ನು ಗಮನಿಸಿಯೇ ಮೈಸೂರು ಮಹಾರಾಜರು ಬೆಂಗಳೂರಿನ ಕುಮಾರಪಾರ್ಕ್ ಪಶ್ಚಿಮ ಬಡಾವಣೆಯಲ್ಲಿ 2.5 ಎಕರೆ ಜಮೀನನ್ನು ನೀಡಿ ಕಟ್ಟಡ ನಿರ್ಮಿಸಲು ಅವಕಾಶ ಮಾಡಿಕೊಡಲಾಗಿತ್ತು. ಆದರೀಗ ಬಿಡಿಎಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಖಾಸಗಿಯವರಿಂದ ಬೃಹತ್ ಕಟ್ಟಡ ನಿರ್ಮಿಸಲು ಹಾಲಿ ಬಿಲ್ಡಿಂಗ್ ಒಡೆದುಹಾಕುವುದು ನ್ಯಾಯಸಮ್ಮತವಲ್ಲ. ಈಗಾಗಲೇ ಕಳೆದೆರಡು ವರ್ಷದಿಂದ ದುರಸ್ತಿ/ನವೀಕರಣದ ಹೆಸರಿನಲ್ಲಿ 15 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಖರ್ಚು ಮಾಡಿರುವಾಗ ಕಟ್ಟಡ ನೆಲಸಮಗೊಳಿಸುವ ಪ್ರಕ್ರಿಯೆ ಒಪ್ಪತಕ್ಕದ್ದಲ್ಲ. ಈ ಪ್ರಸ್ತಾಪವನ್ನು ತಕ್ಷಣವೇ ಕೈಬಿಡಬೇಕು ಎಂದು ಎಚ್.ಶಿವರಾಮೇಗೌಡ ಪ್ರಾಧಿಕಾರದ ಚೇರ್ಮನ್ ಹಾಗೂ ಆಯುಕ್ತರನ್ನು ಆಗ್ರಹಿಸಿದ್ದಾರೆ.

ದುರಸ್ತಿ/ನವೀಕರಣಕ್ಕೆ 15 ಕೋಟಿ ವೆಚ್ಚ:

ಬಿಡಿಎ ಕೇಂದ್ರ ಕಚೇರಿಯ ದುರಸ್ತಿ ಹಾಗೂ ನವೀಕರಣಕ್ಕೆ ಎರಡು ವರ್ಷದಲ್ಲಿ 15 ಕೋಟಿ ರೂ.ಗೂ ಹೆಚ್ಚಿನ ಮೊತ್ತವನ್ನು ಖರ್ಚು ಮಾಡಲಾಗಿದೆ. ಈ ಮೊತ್ತದಲ್ಲಿ ದುರಸ್ತಿ ಕಾರ್ಯವಲ್ಲದೆ ಕಚೇರಿಯ ಪೀಠೋಪಕರಣ, ವಿದ್ಯುತ್/ದೂರವಾಣಿ ಬಿಲ್, ಕಂಪ್ಯೂಟರ್ ಖರೀದಿ/ನಿರ್ವಹಣಾ ವೆಚ್ಚವೂ ಸೇರಿದೆ. 2025-26ರಲ್ಲಿ 10.64 ಕೋಟಿ ರೂ. ಹಾಗೂ 2026-27ರಲ್ಲಿ (ಆಗಸ್ಟ್‌ವರೆಗೆ) 14.05 ಕೋಟಿ ರೂ. ವೆಚ್ಚ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net