ಸ್ಕೈಡೆಕ್ ಯೋಜನೆಗೆ ಸ್ಥಳಪರಿಶೀಲನೆ ಕೈಗೊಂಡ ಡಿಸಿಎಂ

site inspection
site inspection
Published on

ಪ್ರಮುಖ ಮುಖ್ಯಾಂಶಗಳು

  • ಬಿಡಿಎನಿಂದ 30-40 ಎಕರೆ ಜಮೀನು ಪಡೆಯಲು ಚಿಂತನೆ
  • ಕೆಂಪೇಗೌಡ ಲೇಔಟ್‌ನಲ್ಲಿ ಹೊಸದಾಗಿ ಜಾಗ ಗುರುತು
ಬೆಂಗಳೂರು: ಉದ್ದೇಶಿತ ಸ್ಕೈ ಡೆಕ್ (ಆಕಾಶ ಗೋಪುರ) ಯೋಜನೆ ಅನುಷ್ಠಾನ ಸಂಬಂಧ ಜಾಗವನ್ನು ಆಖೈರು ಮಾಡುವ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಗುರುವಾರ ಸ್ಥಳಪರಿಶೀಲನೆ ನಡೆಸಿದರು.
ಬಿಡಿಎ ನಿರ್ಮಿತ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಆಕಾಶ ಗೋಪುರ ಯೋಜನೆಗೆ ಅಂದಾಜು 30 ಎಕರೆ ಜಮೀನು ಗುರುತಿಸಲಾಗಿದೆ. ಈ ಜಾಗವು ಯೋಜನೆಗೆ ಸೂಕ್ತ ಆಗಲಿದೆ ಎಂಬ ಆಶಯವನ್ನು ಡಿಸಿಎಂ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವ ಕುರಿತು ಮುಂದಿನ ಪ್ರಕ್ರಿಯೆ ಆರಂಭಿಸುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆಂಪೇಗೌಡ ಬಡಾವಣೆ ವ್ಯಾಪ್ತಿಯ ಚಲ್ಲಘಟ್ಟ ಹಾಗೂ ಭೀಮನಕುಪ್ಪೆ ಗ್ರಾಮಕ್ಕೆ ಸೇರಿರುವ ಜಮೀನನ್ನು ಸ್ಕೈ ಡೆಕ್ ಯೋಜನೆಗೆ ಆಯ್ಕೆ ಮಾಡಲಾಗಿದೆ. ಈ ಹಿಂದೆ ಕೆಂಪೇಗೌಡ ಲೇಔಟ್‌ನ ಬೇರೆ ಜಮೀನನ್ನು ಗುರುತಿಸಲಾಗಿತ್ತು. ಅದು ಯೋಜನೆಗೆ ಸೂಕ್ತ ಆಗಲಾರದು ಎಂಬ ಕಾರಣಕ್ಕೆ ತರಿಸ್ಕೃರಿಸಲಾಗಿತ್ತು. ಹಾಲಿ ಸ್ಥಳವಲ್ಲದೆ ಈಗಾಗಲೇ ನಗರದ ನಾಲ್ಕೈದು ಕಡೆಗಳಲ್ಲಿ ಸ್ಥಳ ಆಯ್ಕೆ ಆಗಿದ್ದರೂ, ವಿಮಾನ ಹಾರಾಟಕ್ಕೆ ಅಡ್ಡಿಯಾಗಲಿದೆ ಎಂಬ ಕಾರಣಕ್ಕೆ ಎಚ್‌ಎಎಲ್ ತಗಾದೆ ಎತ್ತಿತ್ತು. ಹಾಗಾಗಿ ಹೊಸ ಜಾಗದ ಹುಡುಕಾಡಕ್ಕೆ ದೀರ್ಘ ಸಮಯ ಹಿಡಿದಿದೆ.
ಇದೇ ವೇಳೆ ಬಡಾವಣೆಯಲ್ಲಿನ ಪ್ರಮುಖ ರಸ್ತೆ ಹಾಗೂ ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಡಿಸಿಎಂ ಪರಿಶೀಲನೆ ನಡೆಸಿದರು.
ಸ್ಥಳಪರಿಶೀಲನೆ ವೇಳೆ ಬಿಡಿಎ ಅಧ್ಯಕ್ಷ ಎನ್.ಎ. ಹ್ಯಾರಿಸ್, ಆಯುಕ್ತ ಕ್ಯಾ. ಮಣಿವಣ್ಣನ್, ಅಭಿಯಂತರ ಸದಸ್ಯ ಡಾ. ಎಚ್.ಆರ್. ಶಾಂತಾರಾಜಣ್ಣ, ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಹಾಗೂ ಇತರ ಹಿರಿಯ ಅಧಿಕಾರಿಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net