ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಕಡಿವಾಣ: ಆರೋಗ್ಯ ಸಚಿವ ಯು.ಟಿ.ಖಾದರ್

* ನಿಯಮ ಉಲ್ಲಂಸಿದರೆ ಕಠಿಣ ಕ್ರಮ * ‘ತಂಬಾಕು ಮುಕ್ತ ಯುವ ಅಭಿಯಾನ 4.0’ಕ್ಕೆ ಚಾಲನೆ
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ (ಎನ್‌ಟಿಸಿಪಿ) ಅಡಿಯಲ್ಲಿ ನಗರದ ಆರೋಗ್ಯ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ‘ತಂಬಾಕು ಮುಕ್ತ ಯುವ ಅಭಿಯಾನ 4.0’ಕ್ಕೆ ಆರೋಗ್ಚಾಯ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದರು.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ (ಎನ್‌ಟಿಸಿಪಿ) ಅಡಿಯಲ್ಲಿ ನಗರದ ಆರೋಗ್ಯ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ‘ತಂಬಾಕು ಮುಕ್ತ ಯುವ ಅಭಿಯಾನ 4.0’ಕ್ಕೆ ಆರೋಗ್ಚಾಯ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದರು.
Published on: 

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರಿಂದ ಧೂಮಪಾನಿಗಳಷ್ಟೇ ಅಲ್ಲದೆ, ಸುತ್ತಮುತ್ತಲಿನ ಜನರೂ ಪರೋಕ್ಷ ಧೂಮಪಾನದ ದುಷ್ಪರಿಣಾಮಗಳಿಗೆ ತುತ್ತಾಗುತ್ತಾರೆ. ಹೀಗಾಗಿ ಧೂಮಪಾನಿಗಳು ನಿಗದಿತ ಧೂಮಪಾನ ವಲಯಗಳನ್ನು ಮಾತ್ರ ಬಳಸಬೇಕು ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ (ಎನ್‌ಟಿಸಿಪಿ) ಅಡಿಯಲ್ಲಿ ನಗರದ ಆರೋಗ್ಯ ಸೌಧದಲ್ಲಿ ಮಂಗಳವಾರ ಆಯೋಜಿಸಿದ್ದ ‘ತಂಬಾಕು ಮುಕ್ತ ಯುವ ಅಭಿಯಾನ 4.0’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಐಟಿ ಪಾರ್ಕ್‌ಗಳು ಹಾಗೂ ಕಾರ್ಪೊರೇಟ್ ಕಂಪನಿಗಳಲ್ಲಿ ಧೂಮಪಾನ ವಲಯಗಳನ್ನು ನಿಯಂತ್ರಿಸುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಲವು ವರ್ಷಗಳಿಂದ ಧೂಮಪಾನದ ಅಭ್ಯಾಸ ಬೆಳೆಸಿಕೊಂಡಿರುವವರನ್ನು ಏಕಾಏಕಿ ತಡೆಯುವುದು ಪ್ರಾಯೋಗಿಕವಾಗಿ ಕಷ್ಟಸಾಧ್ಯ. ಎಷ್ಟೇ ನಿರ್ಬಂಧಗಳಿದ್ದರೂ ಧೂಮಪಾನದ ಅಭ್ಯಾಸ ಹೊಂದಿರುವವರು ಅದನ್ನು ಮುಂದುವರಿಸಲು ದಾರಿ ಕಂಡುಕೊಳ್ಳುತ್ತಾರೆ. ಆದರೆ, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಅಕ್ಕಪಕ್ಕದಲ್ಲಿರುವವರೂ ಪರೋಕ್ಷ ಧೂಮಪಾನಕ್ಕೆ ಒಳಗಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಧೂಮಪಾನ ವಲಯಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದರು.

ತಂಬಾಕು ನಿಯಂತ್ರಣಕ್ಕೆ ಸರ್ಕಾರದ ಕ್ರಮ:

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದರ ವಿರುದ್ಧ ಈಗಾಗಲೇ ಕಾನೂನು ಹಾಗೂ ನಿಯಮಗಳಿವೆ. ಸುಮಾರು 140 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ ತಂಬಾಕು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವುದು ಪ್ರಾಯೋಗಿಕವಾಗಿ ಸವಾಲಿನ ಸಂಗತಿಯಾಗಿದೆ. ಆದರೂ, ವಿವಿಧ ನಿರ್ಬಂಧಗಳ ಮೂಲಕ ತಂಬಾಕು ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಕದ್ದುಮುಚ್ಚಿ ಇ-ಸಿಗರೇಟ್ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಧೂಮಪಾನ ವಲಯಗಳ ಬಳಕೆಯ ಮೇಲೂ ನಿಗಾ ವಹಿಸಲಾಗುವುದು. ಧೂಮಪಾನದಿಂದ ಇತರರಿಗೆ ಯಾವುದೇ ತೊಂದರೆ ಅಥವಾ ಆರೋಗ್ಯದ ಅಪಾಯ ಉಂಟಾಗದಂತೆ ನೋಡಿಕೊಳ್ಳುವುದು ಹಾಗೂ ನಿಗದಿತ ವಲಯಗಳಲ್ಲಿ ನಿಯಮಗಳ ಪಾಲನೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ತಂಬಾಕು ಜಾಹೀರಾತುಗಳ ನಿಯಂತ್ರಣಕ್ಕೆ ಚಿಂತನೆ

ಸಿನಿಮಾ ಹಾಗೂ ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು ಸಿಗರೇಟ್ ಸೇದುವ ದೃಶ್ಯಗಳನ್ನು ನೋಡಿ ಯುವಜನರು ಧೂಮಪಾನದ ಅಭ್ಯಾಸ ಬೆಳೆಸಿಕೊಳ್ಳಬಾರದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಕಿವಿಮಾತು ಹೇಳಿದರು.

ಹಣಕ್ಕಾಗಿ ಸೆಲೆಬ್ರಿಟಿಗಳು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ, ನೀವು ಸಿಗರೇಟ್ ಸೇದಿ ಅನಾರೋಗ್ಯಕ್ಕೀಡಾಗಿ ಐಸಿಯುಗೆ ದಾಖಲಾದರೆ ಅವರಾರೂ ನಿಮ್ಮನ್ನು ನೋಡಲು ಬರುವುದಿಲ್ಲ. ಹೀಗಾಗಿ ಇಂತಹ ಜಾಹೀರಾತುಗಳಿಂದ ಪ್ರಭಾವಿತರಾಗಬಾರದು ಎಂದು ಎಚ್ಚರಿಸಿದರು.

ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ನಿಯಂತ್ರಿಸುವ ಅಗತ್ಯವಿದೆ. ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವ ಜಾಹೀರಾತುಗಳನ್ನು ಪ್ರದರ್ಶಿಸುವ ಬಿಎಂಟಿಸಿ ಬಸ್‌ಗಳ ಮೇಲೆ ನಿರ್ಬಂಧ ಹೇರುವ ಕುರಿತು ಸರ್ಕಾರ ಪರಿಶೀಲಿಸುತ್ತಿದೆ. ಈಗಾಗಲೇ ಹಲವು ಕಡೆಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವ ಜಾಹೀರಾತು ಫಲಕಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಪಾನ್ ಮಸಾಲಾ ಉತ್ಪನ್ನಗಳ ಜಾಹೀರಾತುಗಳಲ್ಲಿ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವುದು ಮಕ್ಕಳ ಮೇಲೆ ಪ್ರಭಾವ ಬೀರಿ, ಅವರಲ್ಲಿ ಅನಾರೋಗ್ಯಕರ ಅಭ್ಯಾಸಗಳನ್ನು ಬೆಳೆಸುವ ಅಪಾಯವಿದೆ ಎಂದು ಹೇಳಿದರು.

ಇದೇ ವೇಳೆ ತಂಬಾಕು ಉತ್ಪಾದನಾ ಕಂಪನಿಗಳಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್) ಸ್ವೀಕರಿಸದಿರಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.

ಜಾಗೃತಿ ಅಭಿಯಾನದ ಮೂಲಕ ತಂಬಾಕು ಮುಕ್ತ ಸಮಾಜದ ಗುರಿ

ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಆರಂಭವಾಗಿರುವ ‘ತಂಬಾಕು ಮುಕ್ತ ಯುವ ಅಭಿಯಾನ 4.0’ ಜಾಗೃತಿ ಕಾರ್ಯಕ್ರಮಗಳ ಜತೆಗೆ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಒತ್ತು ನೀಡಲಿದೆ.

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ (ಕೋಟ್ಪಾ-2003) ಪರಿಣಾಮಕಾರಿ ಅನುಷ್ಠಾನ ಹಾಗೂ ಸಮುದಾಯದ ಸಹಭಾಗಿತ್ವದ ಮೂಲಕ ಮಕ್ಕಳು ಮತ್ತು ಯುವಜನರನ್ನು ತಂಬಾಕು ಸೇವನೆಯಿಂದ ರಕ್ಷಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

ವಿಶ್ವವಿದ್ಯಾಲಯಗಳನ್ನು ತಂಬಾಕು ಮುಕ್ತವೆಂದು ಘೋಷಿಸುವುದು, ತಂಬಾಕು ಮುಕ್ತ ಗ್ರಾಮಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಉತ್ತೇಜಿಸುವುದು, ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಅಭಿಯಾನ ನಡೆಸುವುದು ಮತ್ತು ತಂಬಾಕು ಮುಕ್ತ ಪ್ರತಿಜ್ಞೆ ಸ್ವೀಕರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ರಾಜ್ಯಾದ್ಯಂತ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಸರ್ಕಾರಿ ಇಲಾಖೆಗಳು, ಶಿಕ್ಷಣ ಸಂಸ್ಥೆಗಳು, ಜಿಲ್ಲಾಡಳಿತಗಳು ಹಾಗೂ ಸ್ಥಳೀಯ ಸಂಸ್ಥೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ.

ಸೆಲೆಬ್ರಿಟಿಗಳು ತಂಬಾಕು ಬಳಸುವ ದೃಶ್ಯಗಳನ್ನು ನೋಡಿ ಯುವಜನರು ಅದನ್ನೇ ಸ್ಫೂರ್ತಿಯಾಗಿ ಸ್ವೀಕರಿಸಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ದುಶ್ಚಟಗಳಿಂದ ದೂರವಿದ್ದು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡರೆ ಭವಿಷ್ಯ ಉಜ್ವಲವಾಗಿರುತ್ತದೆ. ಸಿಗರೇಟ್ ಸೇದಿ ಯಾರೂ ದೊಡ್ಡ ವ್ಯಕ್ತಿಗಳಾಗಿಲ್ಲ. ತಂಬಾಕು ಮುಕ್ತ ಸಮಾಜ ನಿರ್ಮಾಣದ ಕಾರ್ಯದಲ್ಲಿ ರಾಜ್ಯದ ರಾಯಭಾರಿಗಳು ನಮ್ಮ ವಿದ್ಯಾರ್ಥಿಗಳೇ ಆಗಿದ್ದಾರೆ. ಯು.ಟಿ. ಖಾದರ್, ಆರೋಗ್ಯ ಸಚಿವರು