ರಂಗಭೂಮಿ ಮೇಲೆ ಕಾರ್ಪೋರೇಟ್ ಹಿಡಿತ

* ಜಿ.ಎನ್. ಮೋಹನ್ ಆತಂಕ * ಜಿ.ಎಸ್. ರಾಮರಾವ್ ನೆನಪಿನ ರಂಗ ಉತ್ಸವ
ಸಂಚಯ ರಂಗತಂಡ ಹಮ್ಮಿಕೊಂಡಿದ್ದ ಜಿ.ಎಸ್.ಆರ್. ನೆನಪಿನ ರಂಗ ಉತ್ಸವದಲ್ಲಿ ಆರ್. ಮುದ್ದಣ್ಣಗೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ಎನ್. ಮೋಹನ್, ಸಿ. ಬಸವಲಿಂಗಯ್ಯ, ಚಿತ್ರಶೇಖರ್ ಇತರರಿದ್ದರು.
ಸಂಚಯ ರಂಗತಂಡ ಹಮ್ಮಿಕೊಂಡಿದ್ದ ಜಿ.ಎಸ್.ಆರ್. ನೆನಪಿನ ರಂಗ ಉತ್ಸವದಲ್ಲಿ ಆರ್. ಮುದ್ದಣ್ಣಗೆ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಿ.ಎನ್. ಮೋಹನ್, ಸಿ. ಬಸವಲಿಂಗಯ್ಯ, ಚಿತ್ರಶೇಖರ್ ಇತರರಿದ್ದರು.
Published on: 

ಬೆಂಗಳೂರು: ಕನ್ನಡ ರಂಗಭೂಮಿಯ ಮೇಲೆ ಕಾರ್ಪೋರೇಟ್ ಹಿಡಿತ ಹೆಚ್ಚಾಗುತ್ತಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ಜಿ.ಎನ್. ಮೋಹನ್ ಹೇಳಿದ್ದಾರೆ.

ಸಂಚಯ ರಂಗತಂಡ ವತಿಯಿಂದ ಆಯೋಜಿಸಲಾಗಿದ್ದ ಮೂರು ದಿನಗಳ ‘ಜಿ.ಎಸ್. ರಾಮರಾವ್ ನೆನಪಿನ ರಂಗ ಉತ್ಸವ’ದಲ್ಲಿ ಮಾತನಾಡಿದರು. ಹಿಂದೆ ನಾಲ್ಕು ಗೋಡೆಗಳ ಮಧ್ಯದಿಂದ ನಾಟಕಗಳನ್ನು ಜನಸಾಮಾನ್ಯರ ಬಳಿಗೆ ತಲುಪಿಸುವ ಚಳವಳಿ ನಡೆಯಿತು. ಅದಕ್ಕೆ ಸಂಚಯ ತಂಡದ ಸ್ಥಾಪಕ ಜಿ.ಎಸ್. ರಾಮರಾವ್ ಮತ್ತಿತರರು ಶ್ರಮಿಸಿದ್ದರು. ಆದರೆ ಈಗ ಅದಕ್ಕೆ ತದ್ವಿರುದ್ಧವಾದ ಪ್ರವೃತ್ತಿ ಆರಂಭವಾಗಿದೆ. ಮತ್ತೆ ನಾಲ್ಕು ಗೋಡೆಯಲ್ಲಿ ರಂಗಭೂಮಿಯನ್ನು ಬಂಧಿಸುವ ಹುನ್ನಾರ ನಡೆಯುತ್ತಿದೆ ಎಂದರು.

ರಂಗಭೂಮಿಯ ಮೇಲೆ ಕಾನೂನು ಕ್ರಮಗಳು ಹೆಚ್ಚಾಗುತ್ತಿದ್ದು, ರಂಗಗೀತೆಗಳನ್ನು ಹಾಡಲಿಕ್ಕೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. ರಂಗಭೂಮಿ ಹಣ ಮಾಡುವ ವ್ಯವಹಾರವಲ್ಲ. ಹಾಗಾಗಿ ಈ ಕಾನೂನುಗಳಿಗೆ ಮಾನವೀಯ ಮಾನದಂಡ ಅಗತ್ಯ. ರಂಗಭೂಮಿಯ ಸ್ಪರ್ಶಕ್ಕೆ ಸಿಕ್ಕವರು ಮಾನವೀಯತೆಯ ಬೆಳಕು ಹೊತ್ತು ಸಾಗುತ್ತಾರೆ ಎಂದು ಹೇಳಿದರು.

ಸಂಚಯ ಅಧ್ಯಕ್ಷ ಚಿತ್ರಶೇಖರ್, ಹಿರಿಯ ಬೆಳಕು ತಜ್ಞ ಆರ್. ಮುದ್ದಣ್ಣ ಅವರಿಗೆ ಜಿ.ಎಸ್.ಆರ್. ನೆನಪಿನ ಮೊದಲ ವರ್ಷದ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉತ್ಸವದ ಅಂಗವಾಗಿ ಸಂಚಾರಿ ತಂಡ ‘ಹಕ್ಕಿಯನ್ನು ಪ್ರೀತಿಸಿದ ಬೆಟ್ಟ’ ಹಾಗೂ ನೆನಪು ತಂಡದ ಕಲಾವಿದರು ‘ಜ್ಞಾತ ಪರ್ವ’ ನಾಟಕಗಳನ್ನು ಪ್ರಸ್ತುತಪಡಿಸಿದರು.

ರಂಗಭೂಮಿ ಒಂದು ದ್ವೀಪವಲ್ಲ, ಸಾಮೂಹಿಕ ಚಟುವಟಿಕೆ. ಅದನ್ನು ಜನಪರ ಮಾಡುವ ಆಂದೋಲನ ಅಗತ್ಯವಿದ್ದು, ರಂಗಭೂಮಿಯನ್ನು ಆಧುನಿಕ ತಂತ್ರಜ್ಞಾನ ಇಲ್ಲವಾಗಿಸುತ್ತದೆ ಎನ್ನುವ ಆತಂಕ ಬೇಡ. -ಸಿ.ಬಸವಲಿಂಗಯ್ಯ, ಹಿರಿಯ ರಂಗ ನಿರ್ದೇಶಕ