

ಬೆಂಗಳೂರು: ನಗರದ FKCCI ಸಭಾಂಗಣದಲ್ಲಿ ನ.15ರಂದು ನಡೆದ ಬಸವ ಮಂಟಪ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಡಲಾದ ಭಾಷಣಗಳು ಹಾಗೂ ಪ್ರಸಾರವಾದ ವಿಡಿಯೋಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಠಾಣಾಧಿಕಾರಿಗೆ ಸಲ್ಲಿಸಿರುವ ದೂರಿನಲ್ಲಿ, ಬಸವ ಮಂಟಪ ಕಾರ್ಯಕ್ರಮದಲ್ಲಿ ಕೆಲವು ಭಾಷಣಕಾರರು ಮಾಡಿದ ಹೇಳಿಕೆಗಳು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋಗಳು ಹಾಗೂ ಇತರ ದೃಶ್ಯ-ಶ್ರವ್ಯ ದಾಖಲೆಗಳ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಲಾಗಿದೆ.
ಅಂದು ಎಫ್ಕೆಸಿಸಿಐ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಲವು ಭಾಷಣಕಾರರು ಬಸವಣ್ಣನವರ ವಿಚಾರಧಾರೆಗಳು ಹಾಗೂ ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಕಾರ್ಯಕ್ರಮದ ವಿಡಿಯೋಗಳು ಫೇಸ್ಬುಕ್ ಮತ್ತು ಯೂಟ್ಯೂಬ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಅವುಗಳಲ್ಲಿನ ಹೇಳಿಕೆಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದೂರುದಾರರು ಒತ್ತಾಯಿಸಿದ್ದಾರೆ.
ದೂರಿನೊಂದಿಗೆ ಸಂಬಂಧಿತ ಫೇಸ್ಬುಕ್ ಪೋಸ್ಟ್ಗಳು ಮತ್ತು ಯೂಟ್ಯೂಬ್ ವಿಡಿಯೋಗಳ ಲಿಂಕ್ಗಳನ್ನು ಸಾಕ್ಷ್ಯವಾಗಿ ಸಲ್ಲಿಸಿದ ಅವರು, ಭಾಷಣಕಾರರು ಹಾಗೂ ಕಾರ್ಯಕ್ರಮದ ಆಯೋಜಕರ ಪಾತ್ರದ ಕುರಿತು ತನಿಖೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದೆ.