

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಹಾಗೂ ನಟ ಧನ್ವೀರ್ ಆರೋಪ ಪ್ರತ್ಯಾರೋಪ ತೀವ್ರಗೊಂಡ ಬೆನ್ನಲ್ಲೆ ವಕೀಲರೊಬ್ಬರು ಧನ್ವೀರ್ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ.
ಧನ್ವೀರ್ ಹಾಗೂ ವಿಜಯಲಕ್ಷ್ಮಿ ಅವರ ನಡುವೆ ಕಾನೂನು ಬಾಹಿರವಾಗಿ ಕೋಟ್ಯಂತರ ರೂ. ಹಣದ ವಹಿವಾಟು ನಡೆದಿದೆ ಎಂದು ಆರೋಪಿಸಿದ ವಕೀಲ ಪ್ರಶಾಂತ್ ಅವರು, ಧನ್ವೀರ್ ಗೌಡ ವಿರುದ್ಧ ದೂರು ಸಲ್ಲಿಸಿದ್ದಾರೆ.
ಕಾನೂನಿನ ಪ್ರಕಾರ 2 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ನಡೆಸುವುದು ಕಾನೂನುಬಾಹಿರ. ಆದರೆ ಇಬ್ಬರ ನಡುವೆ ಕೊಟ್ಯಂತರ ರೂ. ವ್ಯವಹಾರ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಆಡಿಯೋ ಮೂಲವೇ ಪ್ರಮುಖ ಅಸ್ತ್ರ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವ್ಯಾಪಕವಾಗಿ ಹರಿದಾಡುತ್ತಿರುವ ಆಡಿಯೋ ಸಂಭಾಷಣೆ ಆಧರಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಹಣಕಾಸಿನ ವಹಿವಾಟಿಗೆ ಸಂಬಂಧಿಸಿದಂತೆ ಈ ಆಡಿಯೋದಲ್ಲಿ ಮಹತ್ವದ ಸುಳಿಗಳಿವೆ ಎಂದು ತಿಳಿಸಿದ್ದಾರೆ.