

ಬೆಂಗಳೂರು: ಮೇಕೆದಾಟು ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಎಂತಹುದೇ ಪರಿಸ್ಥಿತಿ ಎದುರಾದರೂ ರಾಜ್ಯದ ಹಿತಾಸಕ್ತಿ ಕಾಪಾಡಲು ಬದ್ಧ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೇಕೆದಾಟು ನಮ್ಮಹಕ್ಕು. ಸುಪ್ರೀಂ ಆದೇಶದಂತೆ ಯೋಜನೆ ಜಾರಿಗೊಳಿಸುವುದು ನಮ್ಮ ಕರ್ತವ್ಯ. ತಮಿಳುನಾಡು ವಿರೋಧ ವ್ಯಕ್ತಪಡಿಸುವ ಬದಲು ನಿಯೋಗದೊಂದಿಗೆ ಬಂದರೆ ಆ ರಾಜ್ಯಕ್ಕೆ ಆಗುವ ಅನುಕೂಲ ವಿವರಿಸುತ್ತೇನೆ ಎಂದು ವಿಧಾನ ಸೌಧದಲ್ಲಿ ಶನಿವಾರ ಸ್ಪಷ್ಟಪಡಿಸಿದರು.
ನಮ್ಮ ರಾಜ್ಯ- ನಮ್ಮ ಹಕ್ಕು ಎಂಬುದು ನಮ್ಮ ನಿಲುವು. ತಮಿಳುನಾಡು ಕೂಡ ಇದನ್ನು ಅರ್ಥ ಮಾಡಿಕೊಂಡು ನಿಯೋಗ ಬಂದರೆ ಅಣೆಕಟ್ಟು ನಿರ್ಮಾಣ ಜಾಗಕ್ಕೆ ಕರೆದೊಯಸ್ದು ಅವರಿಗೆ ವಿವರಿಸುತ್ತೇನೆ
ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷರ ಆಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿ, ಅಲ್ಲಿ ರಾಜಕೀಯ ನಡೆಯುತ್ತಿದೆ. ಕಾಂಗ್ರೆಸ್ ವಿರೋಧಿಸದಿದ್ದರೆ ಡಿಎಂಕೆ ವಿರೋಧಿಸುತ್ತದೆ. ಡಿಎಂಕೆ ವಿರೋಧಿಸದಿದ್ದರೆ ಎಐಎಡಿಎಂಕೆ ವಿರೋಧಿಸುತ್ತದೆ.
ಎಲ್ಲರೂ ಸುಪ್ರೀಂ ಆದೇಶ ಪಾಲಿಸಬೇಕು. ತಮಿಳುನಾಡು 177 ಟಿಎಂಸಿ ಅಡಿ ನೀರು ಪಡೆಯುವುದು ಅವರ ಹಕ್ಕು. ನಮ್ಮ ಹಕ್ಕುಗಳನ್ನು ರಕ್ಷಿಸುವ ಜತೆಗೆ ಅವರ ಹಕ್ಕುಗಳನ್ನೂ ಗೌರವಿಸುತ್ತೇವೆ. ಅಣೆಕಟ್ಟು ನಿರ್ಮಿಸಿ ನೀರು ಒದಗಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯ ಎಂದರು.
ಕೇಂದ್ರ ಸರ್ಕಾರ ಈ ಯೋಜನೆಯಡಿ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಬದಲಿ ಜಾಗ ನೀಡಲು ತಿಳಿಸಿದ್ದು ಅದರ ಹೊರತಾಗಿ ಇದು ನಮ್ಮ ಜಾಗದಲ್ಲಿ ನಿರ್ಮಾಣವಾಗುವ ನಮ್ಮ ಯೋಜನೆ ಎಂದರು.
ಮೇಕೆದಾಟು ಬಗ್ಗೆ ತಮಿಳುನಾಡಿಗೆ ಆತಂಕ ಬೇಡ. ಕರ್ನಾಟಕದ ಹಕ್ಕನ್ನು ರಕ್ಷಿಸಿಕೊಳ್ಳುವ ಜತೆಗೆ ಆ ರಾಜ್ಯಕ್ಕೆ ಸಲ್ಲಬೇಕಾದ ನೀರಿನ ಹಕ್ಕು ರಕ್ಷಿಸುವ ಜವಾಬ್ದಾರಿ ಕೂಡ ನಮ್ಮ ಮೇಲಿದೆ ಎಂದು ಸಿಎಂ ಹೇಳಿದರು.
ಸುಪ್ರೀಂ ಕೋರ್ಟ್ 177 ಟಿಎಂಸಿ ಅಡಿ ನೀರಿನ ಹಕ್ಕಿನ ಕುರಿತು ಸ್ಪಷ್ಟಪಡಿಸಿದೆ. ಅಣೆಕಟ್ಟು ನಿರ್ಮಿಸಿ ಅವರಿಗೆ ಸಲ್ಲಬೇಕಾದ ನೀರು ಕೊಡುತ್ತವೆ ಎಂದರು.
ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅಗತ್ಯವಿರುವ ಅರಣ್ಯ ಮತ್ತು ಪರಿಸರ ಇಲಾಖೆ ಅನುಮತಿಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದೇನೆ. ಎಲ್ಲ ಪಕ್ಷಗಳೂ ಯೋಜನೆ ವಿಚಾರದಲ್ಲಿ ಒಪ್ಪಿಗೆ ಸೂಚಿಸಿವೆ. ಅಗತ್ಯ ದಾಖಲೆ ಸಲ್ಲಿಸಲಾಗುತ್ತಿದೆ. ಅನುಮತಿ ದೊರೆತರೆ ಯೋಜನೆ ಮುಂದಕ್ಕೆ ಒಯ್ಯಲು ಸರ್ಕಾರ ಸಿದ್ಧವಿದೆ ಎಂದು ಮಾಹಿತಿ ನೀಡಿದರು
ಬೆಂಗಳೂರಿನ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಗೆ ಕೇಂದ್ರ ವಿರೋಧಿಸಿದೆ.ಯೋಜನೆ ಅಗತ್ಯ ಕುರಿತು ಸಚಿವ ಕೃಷ್ಣ ಬೈರೇಗೌಡರೊಂದಿಗೆ ಪ್ರಧಾನಿಗೆ ವಿವರಿಸಲಾಗಿದೆ. ಬೆಂಗಳೂರಲ್ಲಿ ರಸ್ತೆಗಳ ಪ್ರಮಾಣ ಶೇ.8ರಷ್ಟಿದೆ. ಇತರ ನಗರಗಳಲ್ಲಿ ಇದು ಶೇ.18- 20ರಷ್ಟಿದೆ.
ಬೆಂಗಳೂರಿನಲ್ಲಿ ಪ್ರತಿ ಚದರ ಅಡಿಗೆ 50 ಸಾವಿರ ರೂ. ಪರಿಹಾರ ನೀಡಬೇಕಾದ ಸ್ಥಿತಿ ಇದೆ. ಇದನ್ನು ನಾವಷ್ಟೇ ಭರಿಸುವುದು ಕಷ್ಟ. ಹೀಗಾಗಿ ಕೇಂದ್ರ- ರಾಜ್ಯ ಸರ್ಕಾರಗಳು ವೆಚ್ಚ ಹಂಚಿಕೊಂಡು ಡಬಲ್ ಡೆಕ್ಕರ್ ಯೋಜನೆ ಜಾರಿಗೊಳಿಸಬೇಕಿದೆ. ಈ ಸಂಬಂಧ ಸರ್ವಪಕ್ಷ ನಿಯೋಗದೊಂದಿಗೆ ದಿಲ್ಲಿಗೆ ಬರುವೆ ಎಂದು ತಿಳಿಸಿದ್ದು ಪ್ರಧಾನಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ವಿದ್ಯುತ್ ಬಿಲ್ ಹೊರೆ 30 ಸಾವಿರ ಕೋಟಿಗೆ ಏರಿಕೆ : ರೈತರ ಪಂಪ್ಸೆಟ್ಗಳ ವಿದ್ಯುತ್ ಬಿಲ್ ಹೊರೆ ಹಿಂದೆ ಸುಮಾರು 20 ಸಾವಿರ ಕೋಟಿ ರೂ.ನಿಂದ 30 ಸಾವಿರ ಕೋಟಿಗೆ ಏರಿದೆ. ಬರದ ಕಾರಣ ಬಳಕೆ ಹೆಚ್ಚಿದೆ. ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ಪೂರೈಕೆ ಸೇರಿ ಹಲವು ಕಾರಣಗಳಿಂದ ಬಿಲ್ ಮೊತ್ತ ಹೆಚ್ಚಾಗಿದೆ. ಸರ್ಕಾರ ಈ ಎಲ್ಲ ಸಮಸ್ಯೆ ಪರಿಹರಿಸಲಿದೆ ಎಂದರು.