ಕಬ್ಬು ಬೆಳೆಗಾರರ ರಕ್ಷಣೆಗೆ ಪ್ರಧಾನಿಗೆ ಸಿಎಂ ಪತ್ರ

ಕಬ್ಬು ಬೆಳೆಗಾರರ ಹಿತ ಕಾಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರು ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಗೃಹ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಎಂಎಸ್ಪಿ ನಿಗದಿ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಈ ಮೂಲಕ ಗಮನ ಸೆಳೆದಿದ್ದಾರೆ.
CM DK Shivakumar
CM DK Shivakumar
Published on: 

ಬೆಂಗಳೂರು: ಸದ್ಯದಲ್ಲೇ ಕಬ್ಬು ಅರೆಯುವ ಋತು ಆರಂಭವಾಗಲಿದ್ದು ಕಬ್ಬು ಬೆಳೆಗಾರರ ಬೇಡಿಕೆ ಆಧರಿಸಿ ಅವರ ಹಿತ ಕಾಯಲು ಕೇಂದ್ರ ಸರ್ಕಾರ ತುರ್ತಾಗಿ ಮಧ್ಯಪ್ರವೇಶಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಧಾನಮಂತ್ರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೋಮವಾರ ಪತ್ರ ಬರೆದಿರುವ ಸಿಎಂ, ಗೃಹ ಮತ್ತು ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಎಂಎಸ್ಪಿ ನಿಗದಿಪಡಿಸುವುದೂ ಸೇರಿದಂತೆ ಇನ್ನಿತರ ವಿಷಯಗಳ ಕುರಿತು ಗಮನ ಸೆಳೆದಿದ್ದಾರೆ.

2019ರ ಫೆಬ್ರುವರಿ ರವರಿ 14ರಿಂದ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪ್ರತಿ ಕೆಜಿಗೆ 31 ರೂ.ನಲ್ಲೇ ಇದೆ. ಆದರೆ ಎಫ್ ಆರ್ ಪಿ ಪ್ರತಿ ಟನ್‌ಗೆ 2,750-3,650 ರೂ.ಗೆ ಏರಿದೆ. 2019 ರ ಸಕ್ಕರೆ ಬೆಲೆಯಲ್ಲಿ ಕಾರ್ಖಾನೆಗಳು ಕಬ್ಬಿಗೆ ನ್ಯಾಯಯುತ ಬೆಲೆ ಪಾವತಿಸಲು ಸಾಧ್ಯವಿಲ್ಲ. ಹೀಗಾಗಿ ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಿಸಲು ವಿನಂತಿಸಿದ್ದಾರೆ.

ಗೃಹ-ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಎಂಎಸ್ಪಿ ನಿಗದಿಪಡಿಸಿದರೆ ಗೃಹಬಳಕೆ ಗ್ರಾಹಕರನ್ನು ರಕ್ಷಿಸಬಹುದು ವಾಣಿಜ್ಯ ಖರೀದಿದಾರರು ನ್ಯಾಯಯುತ ಬೆಲೆ ಪಾವತಿಸುವಂತೆ ಮಾಡುತ್ತದೆ ಎಂದು ಉಲ್ಲೇಖಿಸಿದ್ದಾರೆ. ಖರೀದಿ ಟೆಂಡರ್‌ನಿಂದ ಕಬ್ಬು ಆಧಾರಿತ ಎಥೆನಾಲ್ ಹೊರಗಿಟ್ಟಿದ್ದನ್ನು ಮರು ಪರಿಶೀಲಿಸಲು ಕೋರಿದ್ದಾರೆ.

ತೈಲ ಮಾರಾಟ ಕಂಪನಿಗಳು ಬಿಡುಗಡೆ ಮಾಡಿದ ಟೆಂಡರ್‌ನಲ್ಲಿ, ಕಬ್ಬಿನ ಹಾಲು, ಸಕ್ಕರೆ ಸಿರಪ್, ಬಿ-ಹೆವಿ ಮೋಲಾಸಿಸ್‌ಗಳಿಂದ ಉತ್ಪಾದಿಸುವ ಎಥೆನಾಲ್ ಹೊರಗಿಡಲಾಗಿದೆ. ಆದರೆ ಸಿ-ಹೆವಿ ಮೋಲಾಸಿನಿಂದ ಉತ್ಪಾದಿಸುವ ಎಥೆನಾಲ್ ಅರ್ಹವಾಗಿದೆ.

ಕರ್ನಾಟಕವು ವಾರ್ಷಿಕ 225 ಕೋಟಿ ಲೀಟರ್ ಕಬ್ಬು ಆಧರಿತ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಕಚ್ಚಾವಸ್ತುಗಳನ್ನು ಹೊರಗಿಟ್ಟರೆ ಸಕ್ಕರೆ ಕಾರ್ಖಾನೆಗಳ ಆದಾಯದ ಕುಸಿಯಲಿದೆ ಇದರಿಂದ ಬೆಳೆಗಾರರಿಗೆ ಸಕಾಲಕ್ಕೆ ಹಣ ಪಾವತಿಸುವ ಸಾಮರ್ಥ್ಯ ಕುಗ್ಗುತ್ತದೆ.

ಹೀಗಾಗಿ ಈ ನಿರ್ಧಾರ ಮರುಪರಿಶೀಲಿಸುವ ಜತೆಗೆ ಕಾರ್ಖಾನೆಗಳ ಸಾಮರ್ಥ್ಯ ಆಧರಿಸಿ ಕಬ್ಬು ಆಧಾರಿತ ಕಚ್ಚಾವಸ್ತುಗಳಿಂದ ಎಥನಾಲ್ ಉತ್ಪಾದನೆಗೆ ನ್ಯಾಯಯುತ ಹಂಚಿಕೆ ಮಾಡುವಂತೆ ವಿನಂತಿಸಿದ್ದಾರೆ.

ಕಬ್ಬು ಆಧಾರಿತ ಎಥೆನಾಲ್ ಬೆಲೆ ಹೆಚ್ಚಿಸಿ

ಕಬ್ಬಿಗೆ ಪಾವತಿಸುವ ಬೆಲೆ ಪ್ರತಿ ವರ್ಷ ಹೆಚ್ಚಾಗುತ್ತಿದ್ದರೂ 2022ರಿಂದ ಕಬ್ಬು ಆಧರಿತ ಎಥೆನಾಲ್ ಬೆಲೆ ಬದಲಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ಧಾನ್ಯ ಆಧಾರಿತ ಎಥೆನಾಲ್ ಬೆಲೆ ಹೆಚ್ಚಿಸಲಾಗಿದೆ. ಹೆಚ್ಚುತ್ತಿರುವ ಕಬ್ಬಿನ ವೆಚ್ಚ ಸರಿದೂಗಿಸಲು ಕಬ್ಬು ಆಧಾರಿತ ಎಥೆನಾಲ್ ಬೆಲೆ ಪರಿಷ್ಕರಣೆಯ ಅಗತ್ಯ ಪ್ರತಿಪಾದಿಸಿದ್ದಾರೆ.

ಪತ್ರದ ಮುಖ್ಯಾಂಶ

- ಸಕ್ಕರೆಯ ಕನಿಷ್ಠ ಮಾರಾಟ ಬೆಲೆ ಪರಿಷ್ಕರಣೆ

- ಗೃಹ-ವಾಣಿಜ್ಯ ಸಕ್ಕರೆಗೆ ಪ್ರತ್ಯೇಕ ಎಂಎಸ್ಪಿ ನಿಗದಿ

- ಕಬ್ಬು ಆಧಾರಿತ ಎಥನಾಲ್ ಬೆಲೆಯನ್ನು ಹೆಚ್ಚಳ

- ಮೂಲ ಇಳುವರಿ ಶೇ. 9.50 ಕ್ಕೆ ಮರುಸ್ಥಾಪನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net