ಎಸ್​ಟಿಪಿ ಸಾಮರ್ಥ್ಯ ವೃದ್ಧಿಗೆ ಜಲಮಂಡಳಿ ಸಜ್ಜು |STP

ಎಸ್ ಟಿ ಪಿ
ಎಸ್ ಟಿ ಪಿ
Published on

ಪ್ರಮುಖ ಮುಖ್ಯಾಂಶಗಳು

  • 9 ಘಟಕಗಳ ಸ್ಥಾಪನೆಗೆ ಟೆಂಡರ್​ ಆಹ್ವಾನ
  • 2,071.49 ಕೋಟಿ ರೂ.ಮೊತ್ತದ ಯೋಜನೆ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ನಗರದ ಒಳಚರಂಡಿ ನೀರಿನ ಸಂಸ್ಕರಣಾ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲುಎಸ್​ಎಸ್​ಬಿ) ರಾಜಧಾನಿಯಲ್ಲಿ ಹೊಸದಾಗಿ 9 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು (ಎಸ್​ಟಿಪಿ) ಸ್ಥಾಪಿಸಲು ಮುಂದಾಗಿದೆ.
2,071.49 ಕೋಟಿ ರೂ. ಮೊತ್ತದಲ್ಲಿ 535 ಎಂಎಲ್​ಡಿ ಸಾಮರ್ಥ್ಯದ 9 ಎಸ್​ಟಿಪಿಗಳನ್ನು ನಿರ್ಮಿಸಲು ಜಲಮಂಡಳಿಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಈಗಾಗಲೆ ಅನುಮೋದನೆಯೂ ಲಭಿಸಿದ್ದು, ಸಾಲ ಪಡೆಯುವ ಮತ್ತು ಟೆಂಡರ್​ ಪ್ರಕ್ರಿಯೆ ಪ್ರಗತಿಯಲ್ಲಿದೆ. ಟೆಂಡರ್​ ಆಹ್ವಾನಿಸಿದ ಬಳಿಕ 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಈ ಯೋಜನೆ ಪೂರ್ಣಗೊಂಡ ನಂತರ ನಗರದ ಒಟ್ಟು ಒಳಚರಂಡಿ ಸಂಸ್ಕರಣಾ ಸಾಮರ್ಥ್ಯ 1,883.5 ಎಂಎಲ್​ಡಿಗೆ ಏರಿಕೆಯಾಗಲಿದೆ. ಆದರೆ, ರಾಜಧಾನಿಯಲ್ಲಿ 2,740 ಎಂಎಲ್​ಡಿಗೂ ಅಧಿಕ ಸಾಮರ್ಥ್ಯ ತಲುಪಬೇಕು ಎಂಬ ಗುರಿ ಹೊಂದಿದೆ. ಹುಳಿಮಾವು, ಅಗರ, ಹಲಸೂರು ಸೇರಿ ನಗರದಾದ್ಯಂತ ಸುಮಾರು 9 ಕಡೆಗಳಲ್ಲಿ ಒಳಚರಂಡಿ ನೀರು ಸಂಸ್ಕರಣಾ ಘಟಕಗಳು ಸ್ಥಾಪನೆಯಾಗಲಿದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಸುಮಾರು 2,120 ಎಂಎಲ್​ಡಿ ಒಳಚರಂಡಿ ನೀರು ಉತ್ಪತ್ತಿಯಾಗುತ್ತಿದ್ದು, ಕಾವೇರಿ ಐದನೇ ಹಂತದ ಜಲವೃದ್ಧಿ ಯೋಜನೆ ಜಾರಿಗೆ ಬಂದ ಬಳಿಕ ಇದಕ್ಕೆ ಇನ್ನೂ 620 ಎಂಎಲ್​ಡಿ ಸೇರ್ಪಡೆಯಾಗುವ ನಿರೀಕ್ಷೆಯಿದೆ.
ಜೈವಿಕ ಅನಿಲದಿಂದ ವಿದ್ಯುತ್​ ಉತ್ಪಾದನೆ: 
ಈ ಒಂಬತ್ತು ಘಟಕಗಳಲ್ಲಿ 6 ಎಸ್​ಟಿಪಿಗಳು ಜೈವಿಕ ಅನಿಲದ ಮೂಲಕ ವಿದ್ಯುತ್​ ಉತ್ಪಾದನೆ ಮಾಡಲಿದ್ದು, ಗರಿಷ್ಠ 4 ಮೆಗಾವಾಟ್​ ವಿದ್ಯುತ್​ ಉತ್ಪತ್ತಿಯಾಗಲಿದೆ. ಇದು ನಗರದಲ್ಲಿ ಮೊದಲ ಬಾರಿಗೆ ಅಳವಡಿಸಲಾಗುತ್ತಿರುವ ತಂತ್ರಜ್ಞಾನವಾಗಿದ್ದು, ಈಗಾಗಲೆ ಹೆಬ್ಬಾಳ ಮತ್ತು ವೃಷಭಾವತಿ ಕಣಿವೆಯ ಎಸ್​ಟಿಪಿಗಳಲ್ಲಿ ಈ ವ್ಯವಸ್ಥೆ ಇದೆ. ಉತ್ಪಾದನೆಯಾದ ವಿದ್ಯುತ್​ ಘಟಕದ ಕಾರ್ಯಾಚರಣೆಗೆ ಬಳಕೆಯಾಗಲಿದ್ದು, ಕನಿಷ್ಠ ಶೇ.50 ವಿದ್ಯುತ್​ ಅಗತ್ಯವನ್ನು ಜೈವಿಕ ಅನಿಲದಿಂದಲೇ ಪೂರೈಸುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಬೆಸ್ಕಾಂ ಮೇಲಿನ ಅವಲಂಬನೆ ಕಡಿಮೆಯಾಗುವ ಮೂಲಕ ವಿದ್ಯುತ್​ ವೆಚ್ಚದಲ್ಲಿ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಕ್ಸ್​:
ಮುಖ್ಯಾಂಶಗಳು
* 2026ರ ಜೂನ್​ ಒಳಗಾಗಿ 26 ಹೊಸ ಎಸ್​ಟಿಪಿಗಳನ್ನು ಸ್ಥಾಪಿಸಲು ಜಲಮಂಡಳಿ ಯೋಜನೆ ರೂಪಿಸಿದೆ
* ಇತ್ತೀಚೆಗೆ ನಗರ ವ್ಯಾಪ್ತಿಗೆ ಸೇರಿಸಲಾದ 110 ಗ್ರಾಮಗಳಲ್ಲಿ 14 ಎಸ್​ಟಿಪಿ ಸ್ಥಾಪನೆಯಾಗುತ್ತಿದ್ದು, ಇವುಗಳ ಸಾಮರ್ಥ್ಯ 124 ಎಂಎಲ್​ಡಿ
* 535 ಎಂಎಲ್​ಡಿ ಸಾಮರ್ಥ್ಯದ 9 ಹೊಸ ಎಸ್​ಟಿಪಿ ಯೋಜನೆಯ ಭಾಗವಾಗಿದೆ
* ಮುಂದಿನ ಹಂತವಾಗಿ 385 ಎಂಎಲ್​ಡಿ ಸಾಮರ್ಥ್ಯದ 5 ಎಸ್​ಟಿಪಿಗಳ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆ
* ಕಗ್ಗದಾಸಪುರ, ಹೆಸರಘಟ್ಟ, ವರ್ತೂರು, ತಳಘಟ್ಟಪುರ, ನಾಗಸಂದ್ರ ಮತ್ತು ಜೋಗಿ ಕೆರೆ ಸಮೀಪ ಪ್ರಮುಖ ಘಟಕ ನಿಮಾರ್ಣ.
ಹಣಕಾಸು ವ್ಯವಸ್ಥೆ
ಒಂಬತ್ತು ಎಸ್​ಟಿಪಿಗಳ ನಿಮಾರ್ಣಕ್ಕೆ ರಾಜ್ಯ ಸರ್ಕಾರ ಮತ್ತು ಜಲಮಂಡಳಿ ತಲಾ ಶೇ.25 ವೆಚ್ಚ ಭರಿಸಲಿದ್ದು, ಉಳಿದ ಮೊತ್ತವನ್ನು ಸಾಲದ ಮೂಲಕ ಸಂಗ್ರಹಿಸಲಾಗುತ್ತದೆ. ಹಣಕಾಸು ಸಂಸ್ಥೆಗಳಿಂದ ಸಾಲದ ವ್ಯವಸ್ಥೆಗಾಗಿ ಈಗಾಗಲೆ ಪ್ರಯತ್ನಗಳು ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸರಸ್ನೇಹಿ ತಂತ್ರಜ್ಞಾನ
ಹೊಸ ಟಕಗಳಲ್ಲಿ ಆಧುನಿಕ ಅನೈರೋಬಿಕ್​ ಎ20 ತಂತ್ರಜ್ಞಾನ ಮತ್ತು ಡಿಸ್ಕ್​ ಫಿಲ್ಟರ್​ ಹೊಂದಿದ ತೃತೀಯ ಹಂತದ ಶೋಧನಾ ಘಟಕಗಳನ್ನು ಅಳವಡಿಸಲಾಗುತ್ತದೆ. ಇದರಿಂದ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನಿಗದಿಪಡಿಸಿರುವ ಹೊಸ ಮಾನದಂಡಗಳನ್ನು ಪೂರೈಸಲು ಸಹಕಾರಿಯಾಗಲಿದೆ. ಸಂಸ್ಕರಣೆಯಿಂದ ದೊರೆಯುವ ಸ್ಲಡ್ಜ್​ ಅನ್ನು ಗೊಬ್ಬರವಾಗಿ ಬಳಸಬಹುದಾಗಿದ್ದು, ಇದನ್ನು ಮಾರಾಟ ಮಾಡುವ ಮೂಲಕವೂ ಮಂಡಳಿಗೆ ಆದಾಯ ಸಿಗಲಿದೆ. ಜತೆಗೆ ದುರ್ವಾಸನೆ ನಿಯಂತ್ರಣ ಘಟಕಗಳನ್ನು ಅಳವಡಿಸಿ ಪರಿಸರದ ಮೇಲೆ ಬೀರುವ ದುಷ್ಪರಿಣಾಮವನ್ನು ಕಡಿಮೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೋಟ್​:
ಜಲಮಂಡಳಿಯು ಒಟ್ಟು 2,071.49 ಕೋಟಿ ರೂ.ಗಳ ಮೊತ್ತದಲ್ಲಿ 535 ಎಂಎಲ್​ಡಿ ಸಾಮರ್ಥ್ಯದ 9 ಎಸ್​ಟಿಪಿಗಳನ್ನು ನಿರ್ಮಿಸಲು ಮುಂದಾಗಿದ್ದು, ಶ್ರೀ ಸಾಲ, ಟೆಂಡರ್​ ಪ್ರಕ್ರಿಯೆಗಳು ನಡೆಯಲಿದೆ. 2026ರ ಮಧ್ಯದಲ್ಲಿ ಸುಮಾರು 26 ನೂತನ ಎಸ್​ಟಿಪಿಗಳನ್ನು ಹೊಂದುವ ಗುರಿ ಇದೆ. 110 ಹಳ್ಳಿಗಳ ವ್ಯಾಪ್ತಿಯಲ್ಲೂ 14 ಟಕಗಳು ಬರಲಿವೆ.
> ಡಾ. ರಾಮ್​ ಪ್ರಸಾತ್​ ಮನೋಹರ್​, ಜಲಮಂಡಳಿ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net