ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಬಿತ್ತು ಬ್ರೇಕ್: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲೇ ಚುನಾವಣೆ ಎದುರಿಸಲು ನಿರ್ಧಾರ! BY Vijayendra

BY Vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
Published on: 
Summary

* ವಿಜಯೇಂದ್ರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸಲು ಬಿಜೆಪಿ ನಿರ್ಧಾರ

* ಬಿಜೆಪಿ ವರಿಷ್ಠರಿಂದ ಬದಲಾವಣೆ ಇಲ್ಲ ಗೆಲ್ಲುವವರೆಗೂ ಮುಂದುವರಿಕೆ ಫಾರ್ಮುಲಾ

* ಲಿಂಗಾಯತ ವೋಟ್ ಬ್ಯಾಂಕ್ ಕಾಯ್ದುಕೊಳ್ಳಲು ವಿಜಯೇಂದ್ರ ಮುಂದುವರಿಸಿದ ಬಿಜೆಪಿ

* ಬಣಜಗಳ ಆತಂಕ ಹಿನ್ನೆಲೆ ವಿಜಯೇಂದ್ರ ಬದಲಾಯಿಸದಿರಲು ಹೈಕಮಾಂಡ್ ತೀರ್ಮಾನ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆಯ ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ತೆರೆಬಿದ್ದಿದ್ದು, ಬಿ. ವೈ. ವಿಜಯೇಂದ್ರ ( BY Vijayendra ) ಅವರ ನೇತೃತ್ವದಲ್ಲೇ ಪಕ್ಷವನ್ನು ಗಟ್ಟಿಗೊಳಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಚುನಾವಣೆ ಸಮೀಪಿಸುತ್ತಿರುವ ಈ ಸೂಕ್ಷ್ಮ ಸಮಯದಲ್ಲಿ ಯಾವುದೇ ಹೊಸ ಪ್ರಯೋಗಗಳಿಗೆ ಕೈಹಾಕಿ ರಿಸ್ಕ್ ತೆಗೆದುಕೊಳ್ಳಲು ವರಿಷ್ಠರು ಸಿದ್ಧರಿಲ್ಲ. "ಗೆಲ್ಲುವವರೆಗೂ ಬದಲಾವಣೆ ಇಲ್ಲ, ಚುನಾವಣೆ ಮುಗಿಯುವವರೆಗೂ ಇದ್ದವರೇ ಇರಲಿ" ಎಂಬ ಹೊಸ ಫಾರ್ಮುಲಾವನ್ನು ಹೈಕಮಾಂಡ್ ಅಳವಡಿಸಿಕೊಂಡಿದ್ದು, ಪರ್ಫಾರ್ಮೆನ್ಸ್ ಆಧಾರದ ಮೇಲಷ್ಟೇ ಮುಂದಿನ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಿದೆ ಎಂದು ಬಿಜೆಪಿ ಹೈಕಮಾಂಡ್​ ಉನ್ನತ ಮೂಲಗಳು ತಿಳಿಸಿವೆ.

vijayendra
vijayendra

ಹೈಕಮಾಂಡ್‌ನ ಈ ನಿರ್ಧಾರದ ಹಿಂದೆ ಪ್ರಮುಖವಾಗಿ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡಿವೆ. ರಾಜ್ಯದಲ್ಲಿ ಪ್ರಬಲವಾಗಿರುವ ಲಿಂಗಾಯತ ಮತಬ್ಯಾಂಕ್ ಅನ್ನು ಕಾಯ್ದುಕೊಳ್ಳುವುದು ಬಿಜೆಪಿ ವರಿಷ್ಠರ ಮುಖ್ಯ ಆದ್ಯತೆಯಾಗಿದೆ. ಈ ಹಿಂದೆ ಬಿ. ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿ ಅನುಭವಿಸಿದ ಹಿನ್ನಡೆಯನ್ನು ಮರುಕಳಿಸದಂತೆ ತಡೆಯಲು ಎಚ್ಚರಿಕೆಯ ಹೆಜ್ಜೆ ಇಡಲಾಗಿದೆ. ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರೆ ಯಡಿಯೂರಪ್ಪ ಬಣದಲ್ಲಿ ಅಸಮಾಧಾನ ಸ್ಫೋಟಗೊಂಡು, ಸಾಂಪ್ರದಾಯಿಕ ಲಿಂಗಾಯತ ಮತಗಳು ಕಾಂಗ್ರೆಸ್ ಪಾಲಾಗುವ ಆತಂಕ ಬಿಜೆಪಿ ಅಂಗಳದಲ್ಲಿದೆ.

ರಾಜ್ಯ ಬಿಜೆಪಿಯಲ್ಲಿ ಪ್ರಸ್ತುತ ಎದುರಾಗಿರುವ ಪರ್ಯಾಯ ನಾಯಕತ್ವದ ಕೊರತೆ ಹಾಗೂ ಬಣಗಳ ನಡುವಿನ ಒಮ್ಮತದ ಅಭಾವವೂ ಈ ನಿರ್ಧಾರಕ್ಕೆ ಪ್ರಮುಖ ಕಾರಣವಾಗಿದೆ. ವಿಜಯೇಂದ್ರ ಬದಲಿಗೆ ಮತ್ತೊಬ್ಬ ನಾಯಕನನ್ನು ನೇಮಿಸಿದರೆ ಆಂತರಿಕ ಬಣಜಗಳ ತಾರಕಕ್ಕೇರುವ ಸಾಧ್ಯತೆಯಿದೆ. ಒಬ್ಬ ನಾಯಕನಿಗೆ ಪಟ್ಟ ಕಟ್ಟಿದರೆ ಮತ್ತೊಂದು ಬಣ ಬಂಡಾಯ ಏಳುವ ಭೀತಿ ಹೈಕಮಾಂಡ್ ಅನ್ನು ಕಾಡುತ್ತಿದ್ದು, ಸದ್ಯಕ್ಕಿದ್ದ ಗೊಂದಲ ನಿವಾರಿಸಲು ಅಧ್ಯಕ್ಷರ ಬದಲಾವಣೆಗೆ ಬ್ರೇಕ್ ಹಾಕಲಾಗಿದೆ.

ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಸಂಘಟನಾತ್ಮಕ ಹಿಡಿತ ಚನ್ನಾಗಿದೆ ಎಂಬ ಆಂತರಿಕ ವರದಿಗಳು ಈಗಾಗಲೇ ವರಿಷ್ಠರ ಕೈಸೇರಿವೆ. ವಿಶೇಷವಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವಲ್ಲಿ ವಿಜಯೇಂದ್ರ ಸಫಲರಾಗಿದ್ದಾರೆ ಎಂಬ ರಿಪೋರ್ಟ್ ಹೈಕಮಾಂಡ್ ಸಮಾಧಾನಕ್ಕೆ ಕಾರಣವಾಗಿದೆ.

Vijayendra honored at Kaladagi
Vijayendra honored at Kaladagi

ಸಾಲು ಸಾಲು ಚುನಾವಣೆಗಳು ಎದುರಿಗಿರುವ ಈ ಸಮಯದಲ್ಲಿ ಹೊಸ ಅಧ್ಯಕ್ಷರಿಗೆ ಜವಾಬ್ದಾರಿ ನೀಡಿ ಸಂಘಟನೆ ಕಟ್ಟಲು ಸಮಯವಿಲ್ಲದಿರುವುದರಿಂದ, ಸದ್ಯದ ಸ್ಥಿತಿಯಲ್ಲಿ ವಿಜಯೇಂದ್ರ ಅವರನ್ನೇ ಮುಂದುವರಿಸುವುದು ಪಕ್ಷದ ಹಿತದೃಷ್ಟಿಯಿಂದ ಸೂಕ್ತ ಎಂಬ ತೀರ್ಮಾನಕ್ಕೆ ವರಿಷ್ಠರು ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net