130ನೇ ಬೋಸ್ಟನ್ ಮ್ಯಾರಥಾನ್​ನಲ್ಲಿ ಮಿಂಚಿದ ಬೆಂಗಳೂರಿಗರು; ಪದಕ ಗೆದ್ದ ಪ್ರಜ್ವಲ್​ ಯೋಗೇಶ್​

ಬೋಸ್ಟನ್​ ಮ್ಯಾರಥಾನ್​ನಲ್ಲಿ ಮಿಂಚಿದ ಬೆಂಗಳೂರಿಗರು, ಪದಕ ಗೆದ್ದ ಪ್ರಜ್ವಲ್ ಯೋಗೇಶ್ ಗೌಡ
ಬೋಸ್ಟನ್​ ಮ್ಯಾರಥಾನ್​ನಲ್ಲಿ ಮಿಂಚಿದ ಬೆಂಗಳೂರಿಗರು, ಪದಕ ಗೆದ್ದ ಪ್ರಜ್ವಲ್ ಯೋಗೇಶ್ ಗೌಡ
Published on
ಅಮೆರಿಕ: ಏ.20ರಂದು ಬೋಸ್ಟನ್​ನಲ್ಲಿ ಆಯೋಜಿಸಿದ್ದ 2026ರ 130ನೇ ಬೋಸ್ಟನ್​ ಮ್ಯಾರಥಾನ್​ನಲ್ಲಿ ಬೆಂಗಳೂರಿನ ಓಟಗಾರರು ಮಿಂಚಿದ್ದಾರೆ.
ಜಾಗತಿಕವಾಗಿ 29,376 ಜನರು ಓಟದಲ್ಲಿ ಭಾಗವಹಿಸಿದ್ದು, ಅದರಲ್ಲಿ 135 ಮಂದಿ ಭಾರತೀಯರು ಮುಂದಿನ ಹಂತಕ್ಕೆ ಕ್ವಾಲಿಫೈ ಆದರು. ಈ ಪೈಕಿ 115 ಓಟಗಾರರು ಯಶಸ್ವಿಯಾಗಿ ಮ್ಯಾರಥಾನ್​ ಪೂರ್ಣಗೊಳಿಸಿದ್ದಾರೆ. ರಾಯಲ್ ಸ್ಪೋರ್ಟ್ಸ್ ಗ್ರೂಪ್ ಪ್ರತಿನಿಧಿಸುವ ಮತ್ತು ಟ್ರೇನರ್ ಆಗಿರುವ​ ಗುರುಪ್ರಸಾದ್ ಬಿ. ನಡಗಡ್ಡಿ ಅವರ ನೇತೃತ್ವದಲ್ಲಿ ತರಬೇತಿ ಪಡೆದ ಬೆಂಗಳೂರಿನ ಓಟಗಾರರು ಅಗ್ರ 5 ಭಾರತೀಯ ಪುರುಷರ ಪಟ್ಟಿಯಲ್ಲಿ ಸ್ಥಾನ ಪಡೆದರು.

ಗಮನ ಸೆಳೆದ ಬೆಂಗಳೂರಿಗರು

ಮೂಲತಃ ಹಾಸನ ಜಿಲ್ಲೆಯವರಾದ ಪ್ರಜ್ವಲ್ ಎಸ್ ವೈ, 02:34:22 ಸಮಯದಲ್ಲಿ ಅದ್ಭುತ ಓಟದ ಮೂಲಕ ಮ್ಯಾರಥಾನ್​ನಲ್ಲಿ ಅತ್ಯಂತ ವೇಗದ ಭಾರತೀಯರಾಗಿ ಹೊರಹೊಮ್ಮಿದರು. ಇವರಿಗೆ 29,376ರಲ್ಲಿ 567ನೇ ಸ್ಥಾನ ಲಭಿಸಿದೆ. ಇನ್ನು ಬೆಂಗಳೂರಿನ ಉದಯ್ ಪ್ರಸಾದ್, 02:48:51 ಸಮಯದಲ್ಲಿ ಟಾಪ್​ 5ರಲ್ಲಿ ಸ್ಥಾನ ಪಡೆದದ್ದು ವಿಶೇಷ.
ಜಾಗತಿಕ ವೇದಿಕೆಯಲ್ಲಿ ಇಂತಹ ಸಾಧನೆಗಳು ವಿಶೇಷವಾಗಿ ಬೆಂಗಳೂರಿನ ಓಟಗಾರರ ಗ್ರೂಪ್​​ಗಳು ವಿದೇಶದಲ್ಲಿ ಆಯೋಜಿಸುವ ಮ್ಯಾರಥಾನ್​ಗಳಲ್ಲಿ ಪಾಲ್ಗೊಳ್ಳುವಿಕೆ ಮೆಚ್ಚುವಂತದ್ದು. ಇದು ಲಾಂಗ್​ ಡಿಸ್ಟೇನ್ಸ್ ರನ್ನಿಂಗ್​ನ ಶ್ರೇಷ್ಠತೆಯನ್ನು ಹೆಚ್ಚಿಸುತ್ತದೆ ಎಂದು ಬೆಂಗಳೂರಿನ ರಾಯಲ್​ ಸ್ಪೋರ್ಟ್​ ಗ್ರೂಪ್​ ಸಂತಸ ವ್ಯಕ್ತಪಡಿಸಿದೆ.

ಸಚಿವ ಎಂ.ಬಿ. ಪಾಟೀಲ್ ಮೆಚ್ಚುಗೆ

ಬೋಸ್ಟನ್ ಮ್ಯಾರಥಾನ್ ವೇದಿಕೆಯಲ್ಲಿ ಪ್ರಜ್ವಲಿಸಿದ ‘ವೃಕ್ಷಥಾನ್ ಹೆರಿಟೇಜ್ ರನ್’ ಪ್ರತಿಭೆ. ಪದಕ ಹಿಡಿದು ಪ್ರಜ್ವಲಿಸುತ್ತಿರುವ ಇವರ ಹೆಸರು ಪ್ರಜ್ವಲ್ ಯೋಗೇಶ್ ಗೌಡ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹೆಮ್ಮೆಯ ಪುತ್ರ. ಒಂದು ವರ್ಷ ಹಿಂದೆ ಬಾಸ್ಟನ್‌ ಗೆ ಹೋಗಿ ಮ್ಯಾರಥಾನ್​ನಲ್ಲಿ ಪಾಲ್ಗೊಳ್ಳುತ್ತೇನೆ. ಅಲ್ಲಿ ಗೆಲ್ಲುತ್ತೇನೆ ಎಂಬ ಕನಸೂ ಕಂಡಿರಲಿಲ್ಲ. ಆದರೆ, ಇಂದು 2026ರ 130ನೇ ಆವೃತ್ತಿಯಲ್ಲಿ ಪಾಲ್ಗೊಂಡು ಭಾರತದ ವೇಗವಂತನಾಗಿ ಇತಿಹಾಸ ನಿರ್ಮಿಸಿದ್ದಾರೆ ಎಂದು ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ಹಿನ್ನೆಲೆ ಇಲ್ಲದ ಬಡ ಕೃಷಿಕ ಕುಟುಂಬದಿಂದ ಹೊರಟು, ಓಟಗಾರನಾಗುವ ಕನಸನ್ನು ಅಮೆರಿಕದ ಬೋಸ್ಟನ್ ನೆಲದಲ್ಲೂ ಸಾಕಾರಗೊಳಿಸಿರುವುದು ನಿಜಕ್ಕೂ ಪ್ರೇರಣಾದಾಯಕ. ವಿಜಯಪುರದ ಗುರುಪ್ರಸಾದ್ ನಡಗಟ್ಟಿ ಅವರಿಂದ ತರಬೇತಿ ಪಡೆದಿರುವ ಪ್ರಜ್ವಲ್ ಅವರ ಈ ಸಾಧನೆ ಅಮೋಘವಾದದ್ದು. ವಿಜಯಪುರದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ವೃಕ್ಷತ್ಥಾನ್ ಹೆರಿಟೇಜ್ ರನ್​ನಲ್ಲಿ ಪಾಲ್ಗೊಳ್ಳುತ್ತಾ ಬರುತ್ತಿದ್ದಾರೆ. ವಿಜಯಪುರದ ಹಸಿರಿನ ಮೇಲಿನ ಅವರ ಬದ್ಧತೆ ಮೆಚ್ಚುವಂತಹದ್ದು. ಅವರ ಸಾಧನೆ ಅನೇಕ ಯುವಕರಿಗೆ ದಾರಿ ದೀಪವಾಗಲಿ. ಪ್ರಜ್ವಲ್ ಯೋಗೇಶ್ ಗೌಡ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಿ, ಕರುನಾಡಿನ ಕೀರ್ತಿಯನ್ನು ಜಗದಗಲ ಬೆಳಗಲಿ ಎಂಬ ಹಾರೈಕೆ ನಮ್ಮದು ಎಂದು ಶುಭಹಾರೈಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net