ಪದೇ ಪದೆ ಡಾಕ್ಯುಮೆಂಟ್ ತೋರಿಸೋ ತಲೆನೋವಿಲ್ಲ; ಕೆಂಪೇಗೌಡ ಏರ್‌ಪೋರ್ಟ್‌ನ ಇಂಟರ್ನ್ಯಾಷನಲ್​ಪ್ರಯಾಣಿಕರಿಗೂ ಬಂತು 'ಡಿಜಿ ಯಾತ್ರಾ'!..Bengaluru

ಪದೇ ಪದೆ ಡಾಕ್ಯುಮೆಂಟ್ ತೋರಿಸೋ ತಲೆನೋವಿಲ್ಲ; ಕೆಂಪೇಗೌಡ ಏರ್‌ಪೋರ್ಟ್‌ನ ಇಂಟರ್ನ್ಯಾಷನಲ್​ಪ್ರಯಾಣಿಕರಿಗೂ ಬಂತು 'ಡಿಜಿ ಯಾತ್ರಾ'!..Bengaluru
Published on: 
  • 'ಡಿಜಿ ಯಾತ್ರಾ – ಇಂಟರ್ನ್ಯಾಷನಲ್ ಪ್ಯಾಸೆಂಜರ್ ಟ್ರಯಲ್ಸ್' ಎಂಬ ಪ್ರಾಯೋಗಿಕ ಸೇವೆಗೆ ಚಾಲನೆ.

  • ಇನ್ಮುಂದೆ ಅಂತರಾಷ್ಟ್ರೀಯ ಪ್ರಯಾಣಿಕರಿಗೂ ಪದೇ ಪದೆ ಡಾಕ್ಯುಮೆಂಟ್ ತೋರಿಸುವ ಅಗತ್ಯವಿಲ್ಲ.

  • ಪ್ರಯಾಣಿಕರ ಪಯಣವನ್ನು ಸರಳಗೊಳಿಸುವಲ್ಲಿ ತಂತ್ರಜ್ಞಾನ ಬಳಕೆಗೆ ಒತ್ತು.

Bengaluru airport Digi Yatra: ಬೆಂಗಳೂರು: ಇನ್ಮುಂದೆ ಕೆಂಪೇಗೌಡ ಏರ್ಪೋರ್ಟ್​ನ ಇಂಟರ್ನ್ಯಾಷನಲ್ ಪ್ರಯಾಣಿಕರು ಪದೇ ಪದೆ ನಿಮ್ಮ ಡಾಕ್ಯುಮೆಂಟ್​ಗಳನ್ನು ಸಿಬ್ಬಂದಿಗೆ ತೋರಿಸುವ ಕಿರಿಕಿರಿ ಇರೋದಿಲ್ಲ. ಏಕೆಂದರೆ, 'ಡಿಜಿ ಯಾತ್ರಾ' ಸೌಲಭ್ಯವನ್ನು ಇದೀಗ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಆಯ್ದ ಅಂತಾರಾಷ್ಟ್ರೀಯ ವಿಮಾನಗಳ ನಿರ್ಗಮನಕ್ಕಾಗಿ 'ಡಿಜಿ ಯಾತ್ರಾ – ಇಂಟರ್ನ್ಯಾಷನಲ್ ಪ್ಯಾಸೆಂಜರ್ ಟ್ರಯಲ್ಸ್' ಎಂಬ ಪ್ರಾಯೋಗಿಕ ಸೇವೆಗೆ ಚಾಲನೆ ನೀಡಿದೆ.

ಈ ಮೂಲಕ ಪ್ರಯಾಣಿಕರು ಏರ್ಪೋರ್ಟ್​ನಲ್ಲಿ ಪ್ರತಿ ಬಾರಿ ತಮ್ಮ ದಾಖಲೆಯನ್ನು ತೋರಿಸುವ ಸಮಸ್ಯೆ ಇರುವುದಿಲ್ಲ. ಮುಖ ಗುರುತಿಸುವಿಕೆ (ಫೇಸ್ ರೆಕಗ್ನಿಷನ್) ತಂತ್ರಜ್ಞಾನದ ಮೂಲಕ ಸುಲಭವಾಗಿ ವಿಮಾನ ನಿಲ್ದಾಣದೊಳಗೆ ಪ್ರವೇಶಿಸಬಹುದಾಗಿದೆ.

ಪ್ರಕ್ರಿಯೆ ಹೇಗಿರಲಿದೆ?

ವಿದೇಶಕ್ಕೆ ಪ್ರಯಾಣ ಬೆಳೆಸುವ ಪ್ರಯಾಣಿಕರು ಡಿಜಿ ಡಿಜಿ ಯಾತ್ರಾ ಆ್ಯಪ್‌ನಲ್ಲಿ ತಮ್ಮ ಇ-ಪಾಸ್‌ಪೋರ್ಟ್ ಚಿಪ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮೌಲ್ಯೀಕರಿಸಬೇಕು. ಆನಂತರ ಫೋಟೋ ವೆರಿಫಿಕೇಶನ್ ನಡೆಯುತ್ತದೆ. ಈ ಪ್ರಕ್ರಿಯೆಯು ಪೂರ್ಣಗೊಂಡ ಬಳಿಕ ಪ್ರಯಾಣಿಕರ ಸುರಕ್ಷಿತ ಡಿಜಿಟಲ್ ಗುರುತು ಸೃಷ್ಟಿಯಾಗುತ್ತದೆ.

ಇದನ್ನು ಬಳಸಿಕೊಂಡು ವಿಮಾನ ನಿಲ್ದಾಣದ ವಿವಿಧ ತಪಾಸಣಾ ಹಂತಗಳಲ್ಲಿ ಬಯೋಮೆಟ್ರಿಕ್ ಮೂಲಕ ಯಾವುದೇ ಸಂಪರ್ಕವಿಲ್ಲದೆ, ಗೌಪ್ಯತೆ ಕಾಪಾಡಿಕೊಂಡು ಸುಗಮವಾಗಿ ಪ್ರಯಾಣ ಮುಂದುವರಿಸಬಹುದು.

ಆರಂಭಿಕವಾಗಿ ಈ ಪ್ರಾಯೋಗಿಕ ಸೇವೆಯು ವಿಮಾನ ನಿಲ್ದಾಣದ ಟರ್ಮಿನಲ್ ಪ್ರವೇಶ ಮತ್ತು ಭದ್ರತಾ ತಪಾಸಣೆ (ಸೆಕ್ಯುರಿಟಿ ಚೆಕ್) ಹಂತಗಳಲ್ಲಿ ಮಾತ್ರ ಲಭ್ಯವಿರಲಿದೆ. ಇಂಡಿಗೋ ಮತ್ತು ಏರ್ ಇಂಡಿಯಾದ ಆಯ್ದ ಅಂತಾರಾಷ್ಟ್ರೀಯ ವಿಮಾನಗಳಿಗೆ ಈ ಸೌಲಭ್ಯವಿದೆ. ಮುಂದಿನ ದಿನಗಳಲ್ಲಿ ಬೋರ್ಡಿಂಗ್ ಹಂತದವರೆಗೂ ಇದನ್ನು ವಿಸ್ತರಿಸುವ ಉದ್ದೇಶವಿದೆ ಎಂದು ಬೆಂಗಳೂರು ಏರ್ಪೋರ್ಟ್ ಆಡಳಿತ ಮಂಡಳಿಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಮೂಲ ದಾಖಲೆ ಸಲ್ಲಿಕೆ ಕಡ್ಡಾಯ

ಡಿಜಿ ಯಾತ್ರಾ ಸೌಲಭ್ಯವಿದ್ದರೂ, ಇಮಿಗ್ರೇಷನ್‌ ಮತ್ತು ಎಮಿಗ್ರೇಷನ್‌ ಪ್ರಕ್ರಿಯೆಗಳು ಎಂದಿನಂತೆ ನಡೆಯಲಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರು ತಮ್ಮ ಪಾಸ್‌ಪೋರ್ಟ್, ವೀಸಾ ಸೇರಿದಂತೆ ಅಗತ್ಯ ಪ್ರಯಾಣ ದಾಖಲೆಗಳನ್ನು ಭೌತಿಕವಾಗಿ ತಮ್ಮೊಂದಿಗೇ ಕೊಂಡೊಯ್ಯುವುದು ಕಡ್ಡಾಯವಾಗಿದೆ.

ವಿಮಾನಯಾನ ಸಂಸ್ಥೆಗಳ ಕೌಂಟರ್‌ಗಳಲ್ಲಿ ನಡೆಯುವ ಕಡ್ಡಾಯ ದಾಖಲಾತಿ ಪರಿಶೀಲನೆಯನ್ನು ಡಿಜಿ ಯಾತ್ರಾ ಬದಲಿಸುವುದಿಲ್ಲ. ಇದನ್ನು ಪ್ರಯಾಣಿಕರು ಗಮನಿಸಬೇಕು.

ತಂತ್ರಜ್ಞಾನದ ಬಳಕೆಗೆ ಒತ್ತು

ಈ ಹೊಸ ಹೆಜ್ಜೆಯ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌)ನ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫ್ಯಾಂಥೋಮ್, “ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪಯಣವನ್ನು ಸರಳಗೊಳಿಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತಿದೆ. ಇದೀಗ ಡಿಜಿ ಯಾತ್ರಾವನ್ನು ಅಂತಾರಾಷ್ಟ್ರೀಯ ನಿರ್ಗಮನಕ್ಕೂ ವಿಸ್ತರಿಸುತ್ತಿರುವುದು ಪ್ರಯಾಣದ ಅನುಭವವನ್ನು ಇನ್ನಷ್ಟು ಸುಗಮಗೊಳಿಸಲಿದೆ," ಎಂದರು.

ಈ ವರ್ಷದ ಆರಂಭದಲ್ಲಿ ಐಎಟಿಎ, ಇಂಡಿಗೋ, ಸೀಟಾ ಮತ್ತು ಡಿಜಿ ಯಾತ್ರಾ ಸಹಯೋಗದೊಂದಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಸಲಾದ ತಾಂತ್ರಿಕ ಪರೀಕ್ಷೆಗಳ ಆಧಾರದ ಮೇಲೆ ಈ ಅಂತಾರಾಷ್ಟ್ರೀಯ ಪ್ರಾಯೋಗಿಕ ಸೇವೆಯನ್ನು ಅಭಿವೃದ್ಧಿಪಡಿಸಲಾಗಿದೆ.

ಇದರೊಂದಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಪ್ರಯಾಣಿಕರಿಗೆ ವಿಶ್ವದರ್ಜೆಯ ಅನುಭವ ನೀಡುವ ಹಾಗೂ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಏರ್‌ಪೋರ್ಟ್ ಅನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಹೆಜ್ಜೆ ಇಟ್ಟಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net