ಹಾಡುಹಗಲೇ ಮಹಿಳೆ ಕುತ್ತಿಗೆಗೆ ಚಾಕು ಇಟ್ಟು ಚಿನ್ನ ದರೋಡಗೆ ಯತ್ನ

ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮಧೇಟು
Crime
Crime
Published on: 

ಬೆಂಗಳೂರು: ಹೆಲ್ಮೆಟ್ ಧರಿಸಿಕೊಂಡು ಅಂಗಡಿಯೊಳಗೆ ನುಗ್ಗಿದ್ದ ವ್ಯಕ್ತಿಯೋರ್ವ ಮಹಿಳೆಯ ಕುತ್ತಿಗೆಗೆ ಚಾಕು ಇರಿಸಿ ಚಿನ್ನದ ಸರ ದರೋಡೆಗೆ ಯತ್ನಿಸಿದವನನ್ನು ಸಾರ್ವಜನಿಕರು ಹಿಡಿದು ಧರ್ಮಧೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸೂರ್ಯಸಿಟಿ ನಗರದ ನಿವಾಸಿ ಪ್ರಭುರಾಜ್ ಅಲಿಯಾಸ್ ರಾಜ್(40) ಬಂಧಿತ ಆರೋಪಿ. ಇಂದಿರಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ. ಅ.31ರಂದು ಬೆಳಗ್ಗೆ ಇಂದಿರಾನಗರದ ಪ್ರೀಮಿಯಂ ಶೂ ಆ್ಯಂಡ್ ಬ್ಯಾಗ್ ರಿಪೇರಿ ಶಾಪ್‌ನಲ್ಲಿ ಘಟನೆ ನಡೆದಿದೆ. 23 ವರ್ಷದ ಮಹಿಳೆಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಗೆ ತಿಂಗಳ ಹಿಂದೆ ಕೆಲಸದಿಂದ ವಜಾಗೊಳಿಸಲಾಗಿತ್ತು. ಮಹಿಳೆ ಇಂದಿರಾನಗರದ 100 ಅಡಿ ರಸ್ತೆಯಲ್ಲಿರುವ ಖಾಸಗಿ ಅಂಗಡಿಯಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದರು. ಅ.31ರಂದು ಬೆಳಗ್ಗೆ 11.30ರ ಸುಮಾರಿಗೆ ಅಂಗಡಿಗೆ ಬಂದ ಆರೋಪಿ, ಹೆಲ್ಮೆಟ್ ತೆಗೆಯದೆ, ಶೂಗಳನ್ನು ತೋರಿಸುವಂತೆ ಹೇಳಿದ್ದಾನೆ. ಅಷ್ಟರಲ್ಲಿ ನನ್ನನ್ನು ಯಾರು ಕೊಲ್ಲಲು ಬರುತ್ತಿದ್ದಾರೆ. ಕೂಗಾಡದಂತೆ ಹೇಳಿ, ಆಕೆಯ ಬಾಯಿ ಮುಚ್ಚಿದ್ದಾನೆ. ಅದರಿಂದ ಗಾಬರಿಗೊಂಡ ಮಹಿಳೆ ಆತನಿಂದ ಪಾರಾಗಲು ಯತ್ನಿಸಿದ್ದಾರೆ.

ಆರೋಪಿಯಿಂದ ತಪ್ಪಿಸಿಕೊಳ್ಳಲು ಆಗದ ಮಹಿಳೆ ರಕ್ಷಣೆಗೆ ಕೂಗಿದ್ದಾರೆ. ಗಾಬರಿಗೊಂಡ ಆರೋಪಿ ಆಕೆಯ ಕುತ್ತಿಗೆಗೆ ಚಾಕು ಇಟ್ಟು, ಆಕೆಯ ಬಾಯಿಗೆ ಬಟ್ಟೆ ತುರುಕಿದ್ದಾನೆ. ಜತೆಗೆ ಆಕೆಯ ಕೈಗಳಿಗೆ ಪೆವಿಕ್ವಿಕ್ ಹಾಕಿ ಎರಡು ಕೈಗಳನ್ನು ಟೇಬಲ್‌ಗೆ ಅಂಟಿಸಿದ್ದಾನೆ. ನಂತರ ಆಕೆಯ ಚಿನ್ನದ ಸರ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಅಲ್ಲದೆ, ಮಹಿಳೆಯ ನೆರವಿಗೆ ಬಂದ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರ ಕಡೆಯೂ ಚಾಕು ಬೀಸಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ಹೇಳಿದರು.

ಸಾರ್ವಜನಿಕರಿಂದ ಹಲ್ಲೆ

ತಾನು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಆರೋಪಿ ಮಹಿಳೆಯ ಕೂದಲು ಹಿಡಿದುಕೊಂಡು ಕುತ್ತಿಗೆಗೆ ಚಾಕು ಇರಿಸಿ ನನ್ನನ್ನು ಯಾರಾದರೂ ತಡೆದರೆ, ಈಕೆಯನ್ನು ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ನಂತರ ಅಂಗಡಿಯಿಂದ ಹೊರಗಡೆ ಬಂದು ಆಟೋವನ್ನು ನಿಲ್ಲಿಸಿ ಹತ್ತಲು ಯತ್ನಿಸಿದ್ದಾನೆ. ಆಗ ಸಾರ್ವಜನಿಕರು, ಮಹಿಳೆಗೆ ಯಾವುದೇ ತೊಂದರೆ ಕೊಡಬೇಡ. ಆಕೆಯನ್ನು ಬಿಟ್ಟುಬಿಡು, ನಿನಗೆ ಯಾರು ತೊಂದರೆ ಕೊಡಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ನಂತರ ಆಟೋ ಹತ್ತುವಾಗ ಆರೋಪಿಯನ್ನು ಸಾರ್ವಜನಿಕರು ಹಿಡಿದುಕೊಂಡು, ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ .

ಪತ್ನಿ ಚಿಕಿತ್ಸೆಗೆ ಕೃತ್ಯ

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥ ಎಂಬ ಅನುಮಾನ ಇತ್ತು. ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಹಣದ ಅವಶ್ಯಕತೆ ಇದ್ದುದ್ದರಿಂದ ಈ ರೀತಿ ಮಾಡಬೇಕಾಯಿತು ಎಂದು ಹೇಳಿದ್ದಾನೆ. ಮತ್ತೊಮ್ಮೆ ಯಾರು ನನ್ನನ್ನು ಕೊಲ್ಲಲು ಬರುತ್ತಿದ್ದಾರೆ. ಆದ್ದರಿಂದ ಆತ್ಮರಕ್ಷಣೆಗೆ ಮಹಿಳೆಯನ್ನು ಹಿಡಿದುಕೊಂಡೆ ಎಂದು ಹೇಳುತ್ತಿದ್ದ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಪೊಲೀಸರು ಒಪ್ಪಿಸಲಾಗಿದೆ.