ಬೈಯಪ್ಪನಹಳ್ಳಿಯಲ್ಲಿ 65 ಎಕರೆ ಪ್ರದೇಶದಲ್ಲಿ ವೃಕ್ಷೋದ್ಯಾನ

ಎನ್‌ಜಿಇಎಫ್ ಆವರಣಕ್ಕೆ ಸಚಿವ ಎಂ.ಬಿ. ಪಾಟೀಲ್ ಭೇಟಿ
ಎನ್‌ಜಿಇಎಫ್ ಆವರಣಕ್ಕೆ ಸಚಿವ ಎಂ.ಬಿ. ಪಾಟೀಲ್ ಭೇಟಿ
Published on
ಬೆಂಗಳೂರು: ಬೈಯಪ್ಪನಹಳ್ಳಿಯಲ್ಲಿದ್ದ (Baiyappanahalli ) ಸರ್ಕಾರಿ ಸ್ವಾಮ್ಯದ ಎನ್‌ಜಿಇಎಫ್(NGEF) ಕಾರ್ಖಾನೆಗೆ ಸೇರಿದ 105 ಎಕರೆ ಜಮೀನು ಪೈಕಿ 65 ಎಕರೆಯಲ್ಲಿ ವೃಕ್ಷೋದ್ಯಾನ ಅಭಿವೃದ್ಧಿಪಡಿಸಿ ಮೊದಲ ಹಂತ ಮಾರ್ಚ್‌ನಲ್ಲಿ ಸಾರ್ವಜನಿಕರ ಬಳಕೆಗೆ ಮುಕ್ತ ಮಾಡುವುದಾಗಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಎನ್‌ಜಿಇಎಫ್ ಆವರಣಕ್ಕೆ ಶನಿವಾರ ಭೇಟಿ ನೀಡಿದ ಸಚಿವರು, ವೃಕ್ಷೋದ್ಯಾನ ಕಾಮಗಾರಿ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ವೃಕ್ಷೋದ್ಯಾನವನ್ನು ಹಂತ 1, 1ಎ, 1ಬಿ ಮತ್ತು 2 ಹೀಗೆ 4 ಹಂತಗಳಲ್ಲಿ 37.75 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
1ಎ ಹಂತದ ಕಾಮಗಾರಿ ಮುಂದಿನ 6 ತಿಂಗಳಲ್ಲಿ ಮುಗಿಯಲಿದೆ. ಈ ಜಾಗದಲ್ಲಿ ಈಗಾಗಲೆ ವಿವಿಧ ಜಾತಿಯ 8,500 ಮರಗಳಿವೆ. ವೈಜ್ಞಾನಿಕ ಹೆಸರನ್ನು ಈಗ ಪ್ರದರ್ಶಿಸಲಾಗಿದೆ. ಎಲ್ಲ ಮರಗಳನ್ನು ಉಳಿಸಿಕೊಳ್ಳಲಾಗುತ್ತದೆ. ಇಲ್ಲಿರುವ ನೀಲಗಿರಿ ಜಾತಿಯ ಮರಗಳನ್ನು ಏನು ಮಾಡಬೇಕೆಂಬ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲಿಸಿ ನಡೆಸಿ ತೀರ್ಮಾನಿಸುವುದಾಗಿ ತಿಳಿಸಿದ್ದಾರೆ.
ಹಂತ-1ರ ಕಾಮಗಾರಿಗಳಿಗೆ ಅಗತ್ಯವಿದ್ದ 11.50 ಕೋಟಿ ರೂ. ಈಗಾಗಲೆ ಬಿಡುಗಡೆ ಮಾಡಲಾಗಿದೆ.
ಎನ್‌ಜಿಇಎಫ್ ಆವರಣದಲ್ಲಿನ ಆಡಳಿತ ಕಚೇರಿ ಕಟ್ಟಡಗಳು, ಕೈಗಾರಿಕಾ ಶೆಡ್‌ಗಳು ಸುಭದ್ರವಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಪರೀಕ್ಷಿಸಿ ಹೇಳಿದ್ದಾರೆ. ಆದ್ದರಿಂದ ಈ ಕಟ್ಟಡಗಳಿಗೆ ಹೊಸ ರೂಪ ಕೊಟ್ಟು ಅಗತ್ಯಗಳನ್ನು ಪೂರೈಸಲಾಗುವುದು. ಕಾಂಪೌಂಡಿನ ಹೊರಗೂ ಕಾರ್ಖಾನೆಗೆ ಸೇರಿದ 4.5 ಎಕರೆ ಜಾಗವಿದೆ. 5ರಿಂದ 7 ಸಾವಿರ ವಾಹನಗಳ ನಿಲುಗಡೆಗೆ ಬಹುಮಹಡಿ ಪಾರ್ಕಿಂಗ್ ಲಾಟ್ ನಿರ್ಮಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಸ್ತುತ ಇರುವ 2 ಎಲೆಕ್ಟ್ರಿಕ್ ಮೋಟಾರ್ ಶೆಡ್‌ಗಳಲ್ಲಿ ಕನಿಷ್ಠ 15 ಸಾವಿರ ಆಸನ ವ್ಯವಸ್ಥೆ ಇರುವ ಎರಡು ಪ್ರತ್ಯೇಕ ಕನ್ವೆನ್ಶನ್ ಸೆಂಟರ್ ನಿರ್ಮಿಸಲಾಗುವುದು. ಸಮಾವೇಶ, ವಾರ್ಷಿಕೋತ್ಸವ, ಸಮ್ಮೇಳನ, ವಿಚಾರಸಂಕಿರಣ, ಕಾರ್ಯಕ್ರಮ ಇತ್ಯಾದಿಗಳನ್ನು ಮಾಡಬಹುದು. ಜತೆಗೆ ಇನ್ನೋವರ್ಸ್ ಹೆಸರಿನಲ್ಲಿ ನವೋದ್ಯಮಗಳಿಗೆ ಬೇಕಾದ ಪರಿಪೋಷಣಾ ಕೇಂದ್ರವನ್ನು ಸರ್ಕಾರದ ‘ಕಿಟ್ಸ್’ ಸಂಸ್ಥೆ ವತಿಯಿಂದ ಸ್ಥಾಪಿಸಲಾಗುವುದು. ನವೋದ್ಯಮ ವಲಯದವರು ಬಂದು ಕೆಲಸವನ್ನೂ ಮಾಡಬಹುದು. ಜತೆಗೆ ಐಟಿ-ಬಿಟಿ ಇಲಾಖೆಯು 100 ಕೋಟಿ ರೂ. ವೆಚ್ಚದಲ್ಲಿ ‘ಟೆಕ್ನಾಲಜಿ ಇನ್ನೋವೇಶನ್ ಮ್ಯೂಸಿಯಂ ಅಭಿವೃದ್ಧಿಪಡಿಸಲಾಗುತ್ತದೆ ಎಂದರು.
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ನಮ್ಮ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ. ರವಿಶಂಕರ್, ಎಂಎಸ್‌ಐಎಲ್ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್, ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ವಿಶಾಲ್, ಐಟಿ-ಬಿಟಿ ಇಲಾಖೆ ಕಾರ್ಯದರ್ಶಿ ಡಾ.ಎನ್. ಮಂಜುಳಾ ಜತೆಯಲ್ಲಿದ್ದರು.
ಏನೆಲ್ಲ ಮೂಲಸೌಕರ್ಯಗಳು?
ವೃಕ್ಷೋದ್ಯಾನವು ಹಂತ-1 ಪ್ರವೇಶ ದ್ವಾರದ ಪ್ಲಾಜಾ, ಎಲಿವೇಟೆಡ್ ವಾಕ್-ವೇ, ಸೈಕ್ಲಿಂಗ್ ಪಥ, ನೀರಿನ ಝರಿ/ ಚಿಲುಮೆ/ ಕಾರಂಜಿ, ಫುಡ್ ಕೋರ್ಟ್, ಮಕ್ಕಳು ಆಟವಾಡುವ ಜಾಗ, ಸಾಕುಪ್ರಾಣಿಗಳನ್ನು ಕರೆದುಕೊಂಡು ಬರುವ ಜಾಗ, ಶೌಚಗೃಹ ಮತ್ತು ಇನ್ನಿತರ ಮೂಲಸೌಕರ್ಯ ಒಳಗೊಂಡಿದೆ ಎಂದು ಎಂ.ಬಿ. ಪಾಟೀಲ್ ವಿವರಿಸಿದರು. ಫೇಸ್ 1-ಬಿ ಅಡಿಯಲ್ಲಿ 26.23 ಕೋಟಿ ರೂ. ವಿನಿಯೋಗಿಸುತ್ತಿದ್ದೇವೆ. ಇದರ ಅಡಿಯಲ್ಲಿ ಮತ್ತಷ್ಟು ಎಲಿವೇಟೆಡ್- ವಾಕ್‌ವೇಸ್, ವೀಕ್ಷಣಾ ಗೋಪುರ, ಹಳೆಯ ಆಡಳಿತ ವಿಭಾಗ ನವೀಕರಣ, ಬಯಲು ರಂಗಮಂದಿರ ಅಭಿವೃದ್ಧಿ. ಫೇಸ್-2ರಲ್ಲಿ ಎನ್‌ಜಿಇಎಫ್ ಫ್ಯಾಕ್ಟರಿಯ ಶೆಡ್‌ಗಳನ್ನು ಸ್ಪೋರ್ಟ್ಸ್ ಹಬ್, ಕಲೆ ಮತ್ತು ಸಂಸ್ಕೃತಿಗಳ ಕೇಂದ್ರ, ಸಮುದಾಯ ಭವನ, ಫುಡ್ ಕೋರ್ಟ್ ಅನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net