

ಬೆಂಗಳೂರು: ಕಳೆದ ಎರಡು ವರ್ಷಗಳ ಕಾಲ ಆನ್‌ಲೈನ್ ಮೂಲಕ ನಡೆದ ಸಿಇಟಿ ತರಬೇತಿಯನ್ನು ಭೌತಿಕ ತರಗತಿಗಳಿಗೆ ಮಾರ್ಪಡಿಸಿರುವ ಶಾಲಾ ಶಿಕ್ಷಣ ಇಲಾಖೆಯು (ಪದವಿ ಪೂರ್ವ), ರಾಜ್ಯದ 200 ಪದವಿ ಪೂರ್ವ ಕಾಲೇಜುಗಳಲ್ಲಿ ಸಿಇಟಿ ಇಂಟಿಗ್ರೇಟೆಡ್ ತರಗತಿಗಳನ್ನು ಆರಂಭಿಸಲು ಅನುಮೋದನೆ ನೀಡಿದೆ.
ಭೌತಿಕವಾಗಿ ತರಗತಿಗಳನ್ನು ನಡೆಸಿದರೆ ಪರಿಣಾಮಕಾರಿಯಾಗಿರಲಿದೆ ಎಂಬ ಬೇಡಿಕೆ ಸಲ್ಲಿಸಲಾಗಿತ್ತು. ಅದರಂತೆ ಅನುಮೋದನೆ ನೀಡಲಾಗಿದ್ದು, 200 ಕಾಲೇಜುಗಳ 45 ಸಾವಿರ ವಿದ್ಯಾರ್ಥಿಗಳಿಗೆ ಪ್ರತಿ ದಿನ ಒಂದೂವರೆ ಗಂಟೆಗಳ ಸಿಇಟಿ ಭೌತಿಕ ತರಗತಿಗಳನ್ನು ಆಯೋಜಿಸಲು ಯೋಜನೆ ಸಿದ್ಧಪಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಯೋಜನೆ) ಅಧೀನ ಕಾರ್ಯದರ್ಶಿ ಶುಭಮಂಗಳ ಆರ್.ವಿ. ಆದೇಶ ಹೊರಡಿಸಿದ್ದಾರೆ.
ಒಟ್ಟಾರೆ 774 ಸರ್ಕಾರಿ ಪಿಯು ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು, ಅತಿ ಹೆಚ್ಚು ವಿದ್ಯಾರ್ಥಿಗಳಿರುವ 200 ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ 574 ಕಾಲೇಜುಗಳಲ್ಲಿ ಅದೇ ಸಮಯದಲ್ಲಿ ಪಿಎಂ ವಿದ್ಯಾ ಯೋಜನೆಯಿಂದ ಆನ್‌ಲೈನ್‌ನಲ್ಲಿ ವೀಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದೆ.
ಸಿಇಟಿ ತರಬೇತಿಯ ದೈನಂದಿನ ಒಂದು ಗಂಟೆ ಬೋಧನೆಗೆ ಉಪನ್ಯಾಸಕರಿಗೆ 350 ರೂ. ಗೌರವ ಧನ ನೀಡಲಾಗುತ್ತದೆ. ಇದಕ್ಕಾಗಿ ಒಟ್ಟು 2,18 ಕೋಟಿ ರೂ. ವೆಚ್ಚವಾಗಲಿದೆ.
ಕ್ರಾೃಸ್ ಕೋರ್ಸ್‌ಗಳ ಒಂದು ಗಂಟೆ ಅವಧಿ ಬೋಧನೆಗೆ 400 ರೂ. ನಿಗದಿ ಮಾಡಿದ್ದು, 1.31 ಕೋಟಿ ರೂ.ಗಳಾಗಲಿದೆ. ಖರ್ಚುವೆಚ್ಚ ಸೇರಿ ಒಟ್ಟು 3.94 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ.
- ಹಿಂದಿನ ವರ್ಷ ನೀಡುತ್ತಿದ್ದ ಆನ್‌ಲೈನ್ ಬದಲಾಗಿ ದೈನಂದಿನ ತರಗತಿಗಳ ಜತೆಯಲ್ಲಿಯೇ ತರಬೇತಿ ನೀಡುವುದು
- ಆಯಾ ಕಾಲೇಜಿನ ಉಪನ್ಯಾಸಕರೇ ಭೌತಿಕ ತರಗತಿಗಳನ್ನು ತೆಗೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ಮುಕ್ತವಾಗಿ ಚರ್ಚಿಸಲು ಅವಕಾಶ
- ಯಾವುದೇ ಅರ್ಥವಾಗದ ಅಂಶಗಳಿದ್ದಲ್ಲಿ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಮತ್ತೊಮ್ಮೆ ತರಗತಿಗಳನ್ನು ನಡೆಸಬಹುದು
- ವಿದ್ಯಾರ್ಥಿಗಳ ಕಲಿಕೆಗೆ ಅನುಗುಣವಾಗಿ ಕಲಿಕಾ ಮಟ್ಟವನ್ನು ಆಧರಿಸಿ ಉಪನ್ಯಾಸಕರು ಸೂಕ್ತ ವಿವರಣೆ ಮತ್ತು ವಿಧಾನ ಅಳವಡಿಸಿಕೊಳ್ಳಬಹುದು
- ಆಯಾ ವಾರ ಪೂರ್ಣಗೊಂಡ ಪಠ್ಯಕ್ಕೆ ಸಂಬಂಧಿಸಿದಂತೆ ಬಹು ಆಯ್ಕೆ ಪ್ರಶ್ನೆಗಳನ್ನು ಬಿಡಿಸಲು ಕೌಶಲ ಕಲಿಸಬಹುದು. ವಾರಾಂತ್ಯದಲ್ಲಿ ಕಿರು ಪರೀಕ್ಷೆ, ಮಾಸಾಂತ್ಯದಲ್ಲಿ ಮಾದರಿ ಪರೀಕ್ಷೆಗಳನ್ನು ನಡೆಸಬೇಕು.
- ಇದು ಸಿಇಟಿ ಜತೆಗೆ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ 20 ಪ್ರಶ್ನೆಗಳಿಗೆ ಉತ್ತರಿಸಲು ಸಹಕಾರಿ
- ಸಿಇಟಿ ತರಬೇತಿ ನೀಡುವ ಉಪನ್ಯಾಸಕರಿಗೆ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ತರಬೇತಿ
- 68 ದಿನಗಳಲ್ಲಿ 102 ಗಂಟೆ ತರಬೇತಿ