ಬೀದಿನಾಯಿ ಮಾಹಿತಿ ಸಂಗ್ರಹಣೆಗೆ ಆ್ಯಪ್​ | WVS APP

ಬೀದಿನಾಯಿಗಳ ಸಾಂದರ್ಭಿಕ ಚಿತ್ರ
ಬೀದಿನಾಯಿಗಳ ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಸಹಾಯವಾಣಿಗೆ ಬರುವ ದೂರುಗಳ ದಾಖಲೆಯೊಂದಿಗೆ ಸೂಕ್ತ ಕ್ರಮ
  • ಆಹಾರ ನೀಡಲು ಉತ್ತರ ಪಾಲಿಕೆಯಲ್ಲಿ 68 ತಾಣ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ರಾಜ್ಯಾದ್ಯಂತ ಸದ್ದು ಮಾಡಿದ್ದ ಬೀದಿನಾಯಿಗಳ ಸಮಸ್ಯೆಗೆ ಸರ್ಕಾರವು ಸ್ಥಳಿಯ ಸಂಸ್ಥೆಗಳ ಮೂಲಕ ಪರಿಹಾರ ಒದಗಿಸಲು ಮುಂದಾಗಿದೆ. ರಾಜಧಾನಿಯಲ್ಲೂ ಶ್ವಾನಗಳ ಹಾವಳಿ ಜೋರಿದ್ದು, ಗ್ರೇಟರ್​ ಬೆಂಗಳೂರು ಪ್ರಾಧಿಕಾರ (ಜಿಬಿಎ) ಇದಕ್ಕೆ ಪರಿಹಾರ ನೀಡಲು ಹಂತ ಹಂತವಾಗಿ ಪ್ರಕ್ರಿಯೆ ಶುರು ಮಾಡಿದೆ. ವರ್ಲ್ಡ್​ವೈಡ್​ ವೆಟನರಿ ಸರ್ವೀಸ್​ (ಡಬ್ಲುವಿಎಸ್​) ಆ್ಯಪ್​ ಮೂಲಕ ಮೊದಲಿಗೆ ಎಲ್ಲ ಬೀದಿನಾಯಿಗಳ ವಿವರ ಸಂಗ್ರಹಣೆಗೆ ಐದು ಪಾಲಿಕೆಗಳು ಮುಂದಾಗಿದೆ.
ರ್ನಿಬಂಧಿತ ಸ್ಥಳಗಳಲ್ಲಿ ಆಹಾರ ನೀಡುವ ಕುರಿತು, ಬೀದಿನಾಯಿ ಕಡಿತ, ಉಪಟಳ ಇತ್ಯಾದಿ ದೂರುಗಳನ್ನು ನೀಡಲು ಈಗಾಗಲೇ 1533 ಸಹಾಯವಾಣಿ ತೆರೆದಿದ್ದು, ಅದರಲ್ಲಿ ಬರುವ ದೂರುಗಳು ಡಬ್ಲುವಿಎಸ್​ ಆ್ಯಪ್​ನಲ್ಲಿ ದಾಖಲಾಗಲಿವೆ. ಆ್ಯಪ್​ ಮೂಲಕ ಸ್ಪಂದನೆ ನೀಡಬೇಕಿರುವ ಎನ್​ಜಿಒ ಸಂಸ್ಥೆಗೋ, ಸಿಬ್ಬಂದಿಗೋ ಸಮಸ್ಯೆ ಕುರಿತಾದ ಸಂಪೂರ್ಣ ಮಾಹಿತಿ ಗೂಗಲ್​ ಲೊಕೇಶನ್​ಸಮೇತ ಲಭಿಸಲಿದೆ. ದೂರಿಗೆ ಸಿಬ್ಬಂದಿ ನೀಡಿದ ಸ್ಪಂದನೆಯ ಕುರಿತಾದ ವಿವರಗಳು ಮತ್ತೆ ದೂರುದಾರರ ಕೈ ಸೇರಲಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ (ಎಸಿಬಿ) ಹಾಗೂ ಲಸಿಕಾ ಕಾರ್ಯಕ್ರಮಗಳನ್ನು ನಡೆಸುವಾಗಲೂ ಬೀದಿ ನಾಯಿಗಳ ಜಾಗಗಳನ್ನು ಗುರುತಿಸಲು ಡಬ್ಲುವಿಎಸ್​ ಆ್ಯಪ್​ ಸಹಕಾರಿಯಾಗಲಿದೆ.
ಶೇ.65 ಬೀದಿನಾಯಿಗಳಿಗೆ ಎಸಿಬಿ: ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಡಬ್ಲುವಿಎಸ್​ ಆ್ಯಪ್​ ಮೂಲಕ ಬೀದಿನಾಯಿ ಹಾವಳಿ ತಡೆಗೆ, ಸಂರಕ್ಷಣೆಗೆ ಸಿದ್ಧತೆಗಳು ನಡೆಯುತ್ತಿದೆ. ಈ ಭಾಗದಲ್ಲಿ 2 ಎಬಿಸಿ ಕೇಂದ್ರಗಳಿದ್ದು, ಮೇಡಿ ಅಗ್ರಹಾರದಲ್ಲಿನ ಎಬಿಸಿ ಕೇಂದ್ರದಲ್ಲಿ 120 ಎಬಿಸಿ ಕೆನಲ್​ಗಳು, 1 ಐಸೋಲೇಶನ್​ ಕೇಂದ್ರ ಹಾಗೂ 1 ನಿಗಾ ಘಟಕವಿದೆ. ದಾಸರಹಳ್ಳಿಯ ಎಬಿಸಿ ಕೇಂದ್ರದಲ್ಲಿ 54 ಕೆನಲ್​ಗಳು, 1 ನಿಗಾ ಘಟಕ ಇದೆ. ಪ್ರಸಕ್ತ ಸಾಲಿನಲ್ಲಿ 2,925, ಒಟ್ಟಾರೆ ಶೇ.65 ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಉತ್ತರ ಪಾಲಿಕೆ ಆಯುಕ್ತ ಪಿ.ಸುನೀಲ್​ಕುಮಾರ್​ ಮಾಹಿತಿ ನೀಡಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿನ ಆಸ್ಪತ್ರೆಗಳಲ್ಲಿ 4,350 ರೇಬಿಸ್​ ಲಸಿಕೆಗಳು ಇದ್ದು, ಎಬಿಸಿ ಕೇಂದ್ರಗಳಿಗೆ ಅಗತ್ಯವಿರುವ ದುರಸ್ತಿ ಕಾರ್ಯವನ್ನು ಆದ್ಯತೆ ಮೇರೆಗೆ ಪ್ರಸಕ್ತ ಸಾಲಿನ ಅನುದಾನದಡಿ ಕೈಗೊಳ್ಳಬೇಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದ್ದಾರೆ.
ಫಲಕ ಅಳವಡಿಕೆ
ಬೀದಿನಾಯಿಗಳನ್ನು ತಾತ್ಕಾಲಿಕವಾಗಿ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಕೆಲವು ಎನ್​ಜಿಒಗಳನ್ನು ಪಾಲಿಕೆಗಳು ಸಂಪರ್ಕಿಸಿದೆ. ಕೆಲವು ಸಂರತ ಪ್ರದೇಶಗಳನ್ನು ಸುತ್ತುಮುತ್ತಲು ಸ್ಥಳಿಯರು ತೊಂದರೆ ಅನುಭವಿಸುವ ಆರೋಪಗಳು ಕೇಳಿಬರುತ್ತಿದೆ. ಅದಾಗ್ಯೂ ಬೀದಿನಾಯಿಗಳಿಗೆ ಆಹಾರ ನೀಡುವ ಕುರಿತಾಗಿ ಜಿಬಿಎ ಎಚ್ಚರಿಕೆ ವಹಿಸಿದೆ. ವಸತಿ ಪ್ರದೇಶಗಳಿಗೆ ತೊಂದರೆಯಾಗದಂತೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕವಾಗಿ ಆಹಾರ ನೀಡುವ ಸ್ಥಳ ಎಂದು ಫಲಕಗಳನ್ನು ಹಾಕುವ ಮೂಲಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.

ಡಬ್ಲುವಿಎಸ್​ ಆ್ಯಪ್​ ಮೂಲಕ ಬೀದಿನಾಯಿಗಳ ಸಮಸ್ಯೆಗೆ ಪ್ರತಿಕ್ರಿಯೆ ನೀಡಲು ಸುಲಭವಾಗಲಿದೆ. ಇದರ ಸಂಬಂಧ ಬರುವ ದೂರುಗಳನ್ನು ದಾಖಲು ಮಾಡಲು, ಸರಿಯಾಗಿ ಉತ್ತರ ನೀಡಲು, ಎನ್​ಜಿಒ ಸಂಸ್ಥೆಗಳಿಗೆ, ಸಿಬ್ಬಂದಿಗೆ ಅನುಕೂಲವಾಗಲಿದೆ. ಯಾವೆಲ್ಲ ಪ್ರದೇಶಗಳಲ್ಲಿ ಸಮಸ್ಯೆ ಹೆಚ್ಚಿದೆ ಎಂದು ನಾವು ತಿಳಿದುಕೊಳ್ಳಬಹುದು. ಈ ಎಲ್ಲ ಪ್ರಕ್ರಿಯೆಗಳನ್ನು ಆ್ಯಪ್​ ಮೂಲಕ ಮೇಲ್ವಿಚಾರಣೆಯನ್ನು ಪಾಲಿಕೆ ನಡೆಸಲಿದೆ. ಉತ್ತರ ಪಾಲಿಕೆಯ 68 ಕಡೆ ಬೀದಿನಾಯಿಗಳಿಗೆ ಆಹಾರ ನೀಡಲು ವ್ಯವಸ್ಥೆ ಮಾಡಲಾಗಿದೆ. ಆ ತಾಣಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಆಹಾರ ನೀಡುವುದನ್ನು ನಿಷೇದಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net